Thursday, 26 May 2011

ಎಚ್ಚೆಸ್ವಿಯವರ ಕವಿತೆಗಳನೋದುತ್ತ...

ಭೂಮಿಯಲ್ಲಿ ಆಕಾಶವನ್ನೂ, ಆಕಾಶದಲ್ಲಿ ಭೂಮಿಯನ್ನೂ,
ಮತ್ತೆ ಅವೆರೆಡನ್ನೂ, ನನ್ನಲ್ಲೆ ತೋರಿಸಿಕೊಟ್ಟೆ ನೀನು...
ನಗುನಗುತ್ತ ಅಳುವದನ್ನೂ, ಅಳುತ್ತಲೇ ನಗುವುದನ್ನೂ,
ಒ೦ದು ಅನನ್ಯ ಆನ೦ದವನ್ನೇ ಬಿಡಿಸಿಕೊಟ್ಟೆ ನೀನು...
ನಾನು ನಾನಾಗುವದನ್ನೂ, ನಾನು ಮತ್ತಿನ್ನೇನೋ ಆಗುವುದನ್ನೂ,
ನಾನು ನನ್ನೊಳಗೆ, ಪೂರ್ತಿ ಶೂನ್ಯವಾಗುವದನ್ನು ಹೇಳಿಕೊಟ್ಟೆ ನೀನು...
ಕೆ೦ಪು ಕೆ೦ಡ ಬೂದು ಬಟ್ಟೆ ಕಳಚಿ ತ೦ಪಾಗುವದನ್ನೂ,
ಹಿಮ ಮ೦ಜಿನ ಹೊದೆ ಹೊದ್ದು, ಬೆಚ್ಚಗಾಗುವದನ್ನೂ,
ನನ್ನೆದೆಯ ಪೊಟರೆಯಲಿ ಸಮಶೀತೋಷ್ಣ ಉಸಿರನ್ನೂ, ತು೦ಬಿಕೊಟ್ಟೆ ನೀನು...

ನಿನ್ನ ಸಾಲುಗಳನೋದುತ್ತ, ಮನಸ್ಸು, ಬುದ್ಧಿಯ ಕೊಟ್ಟು ಪರವಶನಾಗಿಬಿಟ್ಟೆ...
ನಾಳೆ ಮತ್ತೆ ಸಿಗುವೆ, ಇನ್ನೂ ಸಾಕಷ್ಟು ಕೆಲಸವಿದೆ, ನೆನಪಾಗುತಿದೆ ನನ್ನ ಮಡದಿ ಮಗಳ ಹೊಟ್ಟೆ...

Saturday, 21 May 2011

ಖಾಲಿ ಹಾಳೆಯ ಮೇಲೆ...


ಈ ಖಾಲಿ ಹಾಳೆಯ ಮೇಲೆ,
ಕಾಣದ ಬಣ್ಣಗಳು ಓಲಾಡುತ್ತಲಿವೆ...
ಕೊ೦ಚ ತಾಳೋ ಗೆಳೆಯ,
ಈ ನವಿರು ಬಣ್ಣಗಳ ಹೊ೦ದಿಸಿ
ಚಿತ್ತಾರ ಮಾಡಿಬಿಡುವೆ...
ಸ೦ಜೆಗಿರಲಿ ನನ್ನ ನಿನ್ನಯ ಆಟ...!

ಈ ಖಾಲಿ ಹಾಳೆಯ ಮೇಲೆ,
ಅಲ್ಲಲ್ಲಿ ಬಿದ್ದಿವೆ ಚದುರಿದಕ್ಷರಗಳು...
ಕೊ೦ಚ ತಾಳು ಓ ಪ್ರಿಯೇ,
ಅಕ್ಷರಕ್ಷರಗಳ ಕೂಡಿಸಿ
ಕವನವಾಗಿಸಿಬಿಡುವೆ...
ದಯವಿಟ್ಟು, ನಾ ಬರುವ ವರೆಗೆ
ಆ ಗುಲಾಬಿ ಬಾಡದ೦ತೆ ನೋಡಿಕೊ...!

ಈ ಖಾಲಿ ಹಾಳೆಯ ಮೇಲೆ,
ಇನ್ನೂ ನನಸಾಗದ ಕನಸುಗಳುಳಿದಿವೆ...
ಕೊ೦ಚ ತಾಳಿಕೋ ಮನವೇ,
ಇಷ್ಟ ಕನಸುಗಳ ಹೆಕ್ಕಿ
ನನಸಾಗಿಸಿಬಿಡುವೆ...
ಅಮೇಲೆ ಇದ್ದದ್ದೇ ಇದೆ,
ನನಗೂ ನಿನಗೂ ಕೊನೆವರೆಗೂ...!

ಈ ಖಾಲಿ ಹಾಳೆಯ ಮೇಲೆ,
ಜೀವ೦ತ ಪಾತ್ರಗಳೆಷ್ಟೋ...?
ಕೊ೦ಚ ತಾಳು ಹೇ ದೇವ,
ನೆನಪಿನಲುಳಿವ ಪಾತ್ರವನ್ನು
ಅನುಭವಿಸಿಬಿಡುವೆ...
ನೀನೂ ನೋಡಿ ಆನ೦ದಿಸು, ಹೋಗುವ ಮು೦ಚೆ,
ಬ೦ದದ್ದ೦ತೂ ಆಗಿದೆ, ನ೦ತರ ಹೋಗೋಣವ೦ತೆ...!

Friday, 20 May 2011

ಮಳೆಸ೦ಜೆಯಲ್ಲಿ ಅವನು ಮತ್ತು ಅವಳು

ಅವನು ಮತ್ತು ಅವಳು ಹೀಗೊ೦ದು ಸ೦ಜೆ ಒ೦ದು ಉದ್ಯಾನದಲ್ಲಿರುವಾಗ ಮೋಡ ಕವಿದು ತು೦ತುರು ಸುರಿಯಲಾರ೦ಭಿಸಿತು. ಇಬ್ಬರೂ ಒ೦ದು ಮರದಡಿಗೆ ಆಶ್ರಯ ಪಡೆದು ಹುಲುಸಾಗಿ ಬೆಳೆದ ಹುಲ್ಲಿನ ಮೇಲೆ ನಿ೦ತುಕೊ೦ಡರು. ಮೈ ಒದ್ದೆಯಾಗುತ್ತಿದ್ದ೦ತೆ ಅವರ ಮನಸ್ಸೂ ಒದ್ದೆಯಾದವು. ಆಗ,

ಅವನು:

ಚಿಟಪಟ ಚಿಟಪಟ ಹನಿಗಳ ಸದ್ದು
ಗರಿಕೆಯ ಎಸಳಿನ ಮೇಲೆ ಬಿದ್ದು,
ಹನಿಯೊಳು ಕ೦ಡಿದೆ ಸೃಷ್ಟಿಯ ಕಣ್ಣು
ಘಮ್ಮನೆ ಹರಡಿದೆ ವಾಸನೆ ಮಣ್ಣು...

ಅದಕ್ಕೆ ಅವಳು:

ಬಾನದು ಬಿಚ್ಚಿದೆ ನೀರಿನ ಗ೦ಟು
ಬುವಿಗೂ ಬಾನಿಗೂ ಏನಿದು ನ೦ಟು,
ಬಾನ್ ಹಗುರ, ಬುವಿ ಭಾರ
ಪ್ರೀತಿ ಚಿಗುರಿದೆ ನೋಡುವ ಬಾರ...

ಮತ್ತೆ ಅವನು:

ಹಕ್ಕಿ ಸೇರಿವೆ ಪೊಟರೆಯ ಒಳಗೆ
ಯಾವ ಕೂಗಿಗೋ, ಯಾರದೋ ಕರೆಗೆ,
ಧನಿಯು ಹುಟ್ಟಿದೆ ನನ್ನೊಳು ಒ೦ದು
ನೀನು ನಲಿದಿಹೆ ಮನದೊಳು ನಿ೦ದು...

ಅದಕ್ಕೆ ನಸುನಕ್ಕು ಅವಳು:

ಕಿವಿಗೆ ಕೇಳದನು, ಕೇಳಿದೆ ಮನಸು
ಅ೦ತೆ ಕ೦ಡಿದೆ ಪ್ರೀತಿಯ ಸೊಗಸು,
ಕರೆಯದೆ ಬರುವುದು ಪ್ರೀತಿಯು ಗೆಳೆಯ
ಬಾನು ತ೦ದಿದೆ ಬುವಿಗೆ ಮಳೆಯ...

ಅವಳನ್ನೆ ದಿಟ್ಟಿಸುತ್ತ ಅವನು:

ರವಿಯು ಸರಿದಿಹ ಮೋಡದ ಮರೆಗೆ
ಬೇಗೆಯೂ ತಣಿದಿದೆ ತ೦ಪಿನ ಸೆರೆಗೆ,
ಮಳೆಯ ಹನಿಗಳಿಗೆ ಮನವೂ ಒದ್ದೆ
ನುಡಿಯದ ಮಾತು, ಬಿಡು ಉಳಿದಿದ್ದೆ...

ಆಗ ಅವಳು:

ಸರಿ!! ತಿಳಿಯಿತು ಬಾನಿನ ಮಾತು
ಬುವಿಯು ಇಣುಕದು ಎಲ್ಲೆಯ ಮರೆತು,
ಮನಸಿನ ಮಾತು ಮನಸಲೇ ಇರಲಿ
ಬಾನಿನ ಮನಸು ಬುವಿಯೊಳಗಿರಲಿ...

ಆಗ ಅವನು ಅವಳನ್ನು ಬಿಗಿದು ಹಿಡಿದುಕೊ೦ಡು:

ತ೦ಪು ಆರ್ದ್ರತೆಯ ಬೆಚ್ಚನೆ ಬಿಗಿಗೆ
ಬೆವರಿದೆ ತನುವು ಮಿಲನದ ಸವಿಗೆ,
ನಾನೂ ನೀನೂ ಒ೦ದಾದ೦ತೆ
ಬಾನು ಬುವಿಗಳು ಕಾಣುವುದೊ೦ದೆ...

ಆಗ ಅವಳು ನಾಚಿ ಅವನ ತೋಳ್ಗಳಲ್ಲಿ ಕರಗಿ ಹೋದಳು. ತ೦ಪಾದ ತಿಳಿಗಾಳಿ ಹನಿಗಳ ಹೊತ್ತು ಉದ್ಯಾನವನದಲ್ಲಿ ಬೀಸಲು ಪ್ರಾರ೦ಭಿಸಿತು. ದೂರದಿ೦ದಲೇ ಇದನ್ನು ನೋಡುತ್ತಿದ್ದ ಬಾನು ಇ೦ದ್ರಧನುಷದ ನಗೆ ಬೀರಿತು...

(ಇದೊ೦ದು ಜ೦ಟಿ ಕವನ. ಅವನು ಹೇಳಿದ್ದನ್ನೆಲ್ಲ ನಾನು ಬರೆದದ್ದು, ಅವಳು ಹೇಳಿದ್ದನ್ನು ನನ್ನ ಮನೆಯಾಕೆ ಬರೆದದ್ದು)

Thursday, 19 May 2011

ಅರಳೀ ಎಲೆಯ ಕಥೆ...

ಅರಳೀ ಮರದ ಬುಡದಲ್ಲಿ,
ನೆರಳು ಬೆಳಕುವಾಡುವಲ್ಲಿ,
ಬಿದ್ದಿದೆ ಎಲೆಯೊ೦ದು....

ಅ೦ಚುಗಳಲ್ಲಿ ಎಲೆ ಇನ್ನೂ ಅಚ್ಚ ಹಸಿರು
ಕೆಳತುದಿಲಿ ಕೊ೦ಚ ಮಾಸಿದ ತೊಟ್ಟು...
ರಾತ್ರಿಯ ಬಿರುಗಾಳಿಗೆ ಬಿದ್ದದ್ದಕ್ಕೆ,
ಗಾಯದ ಗುರುತು...

ಹೃದಯದಾಕಾರ ಈ ಎಲೆಗಳಿಗೆ...
ನಿ೦ತು ನೋಡಿದರೇ,
ಮರದ ತು೦ಬಾ ಹೃದಯಗಳ ಮಿಡಿತ...
ಅದರ ಮೂಲಕ ಇ೦ದು ಬೀಸಿದ ಗಾಳಿ
ಭಾವಗೀತೆ...

ಒಮ್ಮೆ, ಮರತುದಿಯ ಚಿಗುರೆಲೆಯಾಗಿ
ನಲಿದಿದ್ದ ಈ ಎಲೆ,
ಈಗ ನೆಲದ ಮೇಲಿದೆ...
ಬೇರಿನ ಪಿಸುಮಾತನಾಲಿಸುತ್ತಿದೆ...
ಅದರ ನೋವಿಗೆ ಸ೦ತೈಸುತ್ತಿದೆ...

ಎಲೆಯ ಹಸಿರಲ್ಲಿ
ಕನಸುಗಳು ಇನ್ನೂ ಜೀವ೦ತ..
ಅವು ನನಸಾಗವೆ೦ಬ ಭೀತಿಗೆ
ಎಲೆತೊಟ್ಟಿಗೆ ಹತಾಶೆ ಭಾವ ಸ್ವ೦ತ...
ಮರದ ಬುಡದಲ್ಲಿ ನೆರಳು-ಬೆಳಕಿನಾಟ...

ಅಲ್ಲಿಯೇ ಮಣ್ಣಾಡಿ ಬೇಸತ್ತ ಚಿಣ್ಣನಿಗೆ
ಎಲೆ ತೊಟ್ಟ ಕಣ್ಣೀರ ಬಿ೦ದುವಿನ
ಹೊಳಪು ಸೆಳೆದಿದೆ.
ಎಲೆ ಎತ್ತಿಕೊ೦ಡ ಪೋರ,
ಅವನ ಹೃದಯಕ್ಕೂ ಹಸಿರು ಸವರಿದೆ...

ನೀರಿನಲೆಗಳಲಿ ಎಲೆಯ
ನೆನೆಸುತ್ತ ಹರಿಬಿಟ್ಟ ಪೋರ ನದಿಗೆ
ತೇಲಲು ಶುರುಮಾಡಿತ್ತೇ ಅವನ ಹೃದಯ
ಎಲೆಯ ಜೊತೆಗೆ...?

ನದಿನೀರ ಮಡಿಲಲಿ
ಚೇತರಿಸುತ್ತಿವೆ ಎಲೆಯ ಮುಕ್ತ ಕನಸುಗಳು...
ಆನ೦ದಭಾಷ್ಪಗಳಾಗಿವೆ
ತೊಟ್ಟಿನ ಕ೦ಬನಿಗಳು...

Tuesday, 17 May 2011

ಹೀಗಿರಲಿ ಬಾಳ ಬಿ೦ಬ...ಕನಸು ಕನವರಿಕೆಗಳಿರಲಿ..
ಮೌನ ಬವಣೆಗಳಿರಲಿ..
ಕಷ್ಟಗಳಿಗೆದೆಯೊಡ್ಡಿ,
ಸೆಡ್ಡು ಹೊಡೆಯುವ ಎದೆಗಾರಿಕೆಯಿರಲಿ
ಮನದ ತು೦ಬ...

ಅರಳು ಕುಸುಮದ ಮುಳ್ಳ
ವೇದನೆಯಿರಲಿ..
ಚಿಗುರು ಜೀವದೆಲೆಗಳಿಗೆ ಒಲವ
ಒನಪುಗಳಿರಲಿ..
ಗ೦ಧ ಪಸರುವ ಮಾರುತವಾಗಿರಲಿ
ಬಾಳ ಬಿ೦ಬ...

ಹಿಗ್ಗಿ ಆಡಿದ ಮುದ್ದು
ನೆನಪುಗಳಿರಲಿ..
ಬಗ್ಗಿ ನಡೆಸಿದ ಪರಿಯ
ಹೆಜ್ಜೆ ಗುರುತುಗಳಿರಲಿ..
ಭರದಿ ಉರುಳುವ,
ಮತ್ತೆ ಮರಳುವ,
ಕ್ಷಣಗಳಲಿ ಮುಕ್ತವಾಗಲಿ
ಬದುಕ ಬ೦ಧ...

ಮು೦ದೆ ಸಾಗುತಿರು,
ನಿನ್ನ ಹಿ೦ಬಾಲಿಸುತಿರು,
ಎಡಬಲಬದಿಗೂ ಇರುತಿರು ನೀ ಅನ೦ತ..
ಸರ್ವದಲೂ ಸವಿಯುವೆ ಆನ೦ದ...

Monday, 16 May 2011

ನನ್ನ ಪಯಣ...

ಈಗ ನನ್ನ ಬಳಿ ಏನೂ ಇಲ್ಲ,
ನಾ ನಡೆದು ಬ೦ದ ದಾರಿಯೊ೦ದನ್ನು ಬಿಟ್ಟು,
ನನ್ನ ನೆತ್ತರ ಹೆಜ್ಜೆ ಗುರುತುಗಳ ನೋವ ಸಾ೦ತ್ವನವ ಬಿಟ್ಟು...

ನನ್ನ ಪಯಣ ಶುರುವಾದಾಗ
ನನ್ನ ಹಸಿವಿಗೆ ಕಸುವು ಕೊಟ್ಟವರ
ಹೆಜ್ಜೆಗಳ ಮೇಲೆ, ನನ್ನ ಪುಟ್ಟ ಹೆಜ್ಜೆಗಳನ್ನಿಟ್ಟು
ಸ೦ಭ್ರಮಿಸಿದ್ದೆ...
ನಾ ಬೆಳೆದ೦ತೆಲ್ಲ
ಅವರ ಹೆಜ್ಜೆಗುರುತುಗಳು
ಮರೆಯಾಗುವ೦ತೆ ನನ್ನ ಹೆಜ್ಜೆಗಳನ್ನಿಟ್ಟು
ನಾ ಮು೦ದೆ ಸಾಗುತ್ತಿರುವದನ್ನು ಕ೦ಡು
ಸ೦ಭ್ರಮಿಸಿದ್ದರು ಅವರೂ ನನ್ನ ಜೊತೆ...

ನನ್ನ ಸ೦ಗಡ ಕಿರಿಯರಿದ್ದರು,
ಹಿರಿಯರಿದ್ದರು, ವಾರಗೆಯವರಿದ್ದರು,
ಆದರೂ, ನನ್ನ ಪಯಣವದು ನನ್ನದೇ,
ಅವರದು ಅವರದೇ..
ಎಡವಿ ಬಿದ್ದರೂ, ಜಾರಿ ಬಿದ್ದರೂ
ನಾನೇ ಎದ್ದು ನಿಲ್ಲಬೇಕು,
ದಣಿವಾಗದ೦ತೆ ಸಾಗಬೇಕು...

ಒ೦ದು ಅದಮ್ಯ ಚೈತನ್ಯವ
ಹೊತ್ತು ಸಾಗುವ ಪಯಣವಿದು,
ಅದನ್ನು ಎಷ್ಟು ದೂರ
ಕ್ರಮಿಸಿತ೦ದೆನೆ೦ಬುದಷ್ಟೇ ಮುಖ್ಯವಾಗುವುದಿಲ್ಲ,
ಪಯಣ ಮುಗಿದಾಗ ಅದು
ಹೇಗಿದೆಯೆ೦ಬುದೂ ಅಷ್ಟೇ ಮುಖ್ಯ.
ನನ್ನ ನ೦ತರ ಆ ಚೈತನ್ಯವ ಹೊತ್ತು ಸಾಗುವವರಿಗೆ,
ಅದರಿ೦ದ ತೊ೦ದರೆಯಾಗಬಾರದಲ್ಲ...

ದಾರಿಗು೦ಟ ಅಲ್ಲಲ್ಲಿ
ಮರ ನೆಟ್ಟು ಬ೦ದಿದ್ದೇನೆ,
ಕಲ್ಲು ದಾರಿಗಳಲಿ
ಹುಲ್ಲು ಹಾವಸೆ ಬೆಳೆಸಿ ಬ೦ದಿದ್ದೇನೆ,
ಅಕ್ಕಪಕ್ಕ ಹೂಗಿಡಗಳ ಬೆಳೆಸಿ ಬ೦ದಿದ್ದೇನೆ.
ನನ್ನ ಹಿ೦ದೆ ಬರುವವರೇ,
ಸ್ವಲ್ಪ ಹುಷಾರು..!
ಆ ಹುಲ್ಲು ಹಾದಿಯ ಕೆಳಗೆ ಬೆಣಚುಕಲ್ಲುಳಿದಿರಬಹುದು...
ಹೂಗಳ ಮರೆಗೆ ಮುಳ್ಳುಗಳಿರಬಹುದು...

ಇ೦ದು ನನ್ನ ಪಯಣವನ್ನು ನಾನು ನಿಲ್ಲಿಸಿದ್ದಾಗಿದೆ...
ಆ ಚೈತನ್ಯವ ಪುಟ್ಟ ಹೆಜ್ಜೆಗಳ ಪಯಣಿಗನಿಗೆ ಹಸ್ತಾ೦ತರಿದ್ದಾಗಿದೆ...
ಈಗ ನನ್ನ ಬಳಿ ಏನೂ ಇಲ್ಲ,
ನಾ ನಡೆದು ಬ೦ದ ದಾರಿಯೊ೦ದನ್ನು ಬಿಟ್ಟು,
ನನ್ನ ನೆತ್ತರ ಹೆಜ್ಜೆ ಗುರುತುಗಳ ನೋವ ಸಾ೦ತ್ವನವ ಬಿಟ್ಟು...

Sunday, 15 May 2011

ಕನಸುಗಳು ಕಾಡುತ್ತಲಿವೆ...

ಹರಡಿಟ್ಟೆ ನನ್ನೆಲ್ಲ ಕನಸುಗಳನ್ನು,
ಮಿಣುಕು ತಾರೆಗಳ ರಾತ್ರಿ ಬಾ೦ದಳವಾಯಿತು!

ಕನಸು ಚದುರಿವೆ ಅಲ್ಲಿ,
ಚಿತ್ತಾರ ಮೂಡಿವೆ ಇಲ್ಲಿ,
ನನ್ನ ಮಾನಸ ಭಿತ್ತಿಯಲ್ಲಿ.
ಇನ್ಕೆಲವು ಕನಸುಗಳು ಕಾಡುತ್ತಲಿವೆ ಪ್ರಜ್ವಲಿಸಿ,
ನನ್ನನ್ನು ನಿದ್ದೆಗೆಡೆಗೊಡದೇ.

ಗಿರಿ ಪರ್ವತ ಶಿಖರಗಳನೇರಿ
ಕೈಚಾಚಿದೆ,
ಲೋಹದ ಹಕ್ಕಿಯ ಮೇಲೇರಿ
ಹಾರಿದೆ,
ಕೈಗಟುಕಬಹುದೇ ಕನಸು ಎ೦ದು.
ನನಸಾಗಬಹುದೇ ಎ೦ದು.

ದಣಿದು ಬಾಯಾರಿ ಬ೦ದೆ
ಕೊಳದ ಬಳಿ.
ಬೊಗಸೆ ಜೋಡಿಸಿ ಬಗ್ಗಿದೆ,
ಅರೇ! ಅಲ್ಲಿಯೂ ನನ್ನ ಕನಸುಗಳೇ!
ಬಿ೦ಬ ಕ೦ಡು ನ೦ಬಲು
ನಾನೇನು ಶ್ರೀರಾಮನೇ?
ಬೊಗಸೆಯಲಿ ಕುಡಿದ ನೀರಿ೦ದ
ದಾಹ ತೀರಲಿಲ್ಲ.

ಕೆಲವು ಮಿಣುಕು ನಕ್ಷತ್ರಗಳು
ಮರಳಿದವು ನನ್ ಮಡಿಲಿಗೆ
ಉಲ್ಕೆಗಳಾಗಿ, ಸೆಳೆತಕ್ಕೆ.
ಅವುಗಳ ಬೆಳಕಲ್ಲಿ
ಬದುಕುತ್ತಿರುವೆ.

ತಾರೆಗಳು ಇ೦ದಿಗೂ ಪ್ರಜ್ವಲಿಸುತ್ತಿವೆ
ಬಾ೦ದಳದಲ್ಲಿ.
 

Monday, 9 May 2011

ಸರ್ವಜ್ಞ ಮತ್ತು ಅವನ ವಚನಗಳಲ್ಲಿ ಒಗಟುಗಳು

ನೆತ್ತಿಯಲಿ ಉ೦ಬುವುದು ಸುತ್ತಲೂ ಸುರಿಸುವುದು
ಎತ್ತಿದರೆ ಎರೆಡು ಹೋಳಹದು, ಕವಿಗಳಿದಕುತ್ತರವ
ಪೇಳಿ ಸರ್ವಜ್ಞ II

ಸರ್ವಜ್ಞನ ತ್ರಿಪದಿಯ ಈ ಪ್ರಸಿದ್ಧ ಒಗಟನ್ನು ಓದಿದಾಕ್ಷಣ ನಾವು ಅದರ ಉತ್ತರ ಹುಡುಕಲು ನಮ್ಮ ನಮ್ಮದೇ ಕಲ್ಪನೆಯಲ್ಲಿ ಮುಳುಗಿ ಹೋಗುತ್ತದೆ. ಹಿ೦ದೆ ಇದನ್ನು ಓದಿದ್ದು ಕೇಳಿದ್ದು ಆದರೆ ಥಟ್ಟನೇ ಒಗಟನ್ನು ಬಿಡಿಸಿ ಹೇಳಬಹುದು, ಇರದಿದ್ದರೆ ಇದೇನು ಪ್ರಾಣಿಯೋ, ಪಕ್ಷಿಯೋ ಅಥವಾ ವಸ್ತುವೋ ಅ೦ತ ಹುಡುಕಹೋಗುತ್ತೇವೆ. ಈ ತ್ರಿಪದಿಯಲ್ಲಿ ಸರ್ವಜ್ಞ ಬೀಸುವ ಕಲ್ಲಿನ ಬಗ್ಗೆ ಎಷ್ಟು ಸೊಗಸಾಗಿ ಹೇಳಿದ್ದಾನೆ.

ಸರ್ವಜ್ಞ ನಮಗೆಲ್ಲ ಗೊತ್ತಿರುವ ಹಾಗೆ ಒಬ್ಬ ವಚನಕಾರ. ಕನ್ನಡ ಸಾಹಿತ್ಯದ ಬೆಳವಣಿಗೆಯ ಮಹತ್ವದ ಕಾಲಘಟ್ಟದಲ್ಲಿ ವಚನಗಳು ಬ೦ದವು. ಆಗ ಅದು ಬಹುಷಃ ಅನಿವಾರ್ಯವಾಗಿತ್ತೇನೋ? ಕೇವಲ ರಾಜಾಶ್ರಯದಲ್ಲಿ ಜೈನ ಕವಿಗಳಿ೦ದ ಕನ್ನಡ ಕಾವ್ಯ ರಚಿತವಾಗುತ್ತಿದ್ದ ಕಾಲದಲ್ಲಿ ಅ೦ದರೆ ಸುಮಾರು ೧೧-೧೨ನೆ ಶತಮಾನದ ಕಾಲದಲ್ಲಿ ಭಕ್ತಿ ಪ೦ಥದ ಕ್ರಾ೦ತಿಕಾರಿ ಬೆಳವಣಿಗೆಯಲ್ಲಿ ವಚನಗಳು ಹುಟ್ಟಿದವು. ಆಡುಮಾತಿನ ಸೊಗಡು ಇವುಗಳ ಆಕರ್ಷಣೆ. ಕನ್ನಡ ಕ೦ಡ ಪ್ರಮುಖ ವಚನಾಕರರೆ೦ದರೆ ಬಸವಣ್ಣ, ಅಲ್ಲಮಪ್ರಭು, ಜೇಡರ ದಾಸಿಮಯ್ಯ, ಅಕ್ಕಮಹಾದೇವಿ, ಸರ್ವಜ್ಞ ಮು೦ತಾದವರು. ಇವರಲ್ಲಿ ಸರ್ವಜ್ಞ ತನ್ನ ತ್ರಿಪದಿಗಳಿ೦ದ ವಿಶಿಷ್ಟವಾಗಿದ್ದಾನೆ. ಕೇವಲ ಮೂರು ಸಾಲಿನಲ್ಲಿ ಸಮಾಜದಲ್ಲಿನ ಹುಳುಕುಗಳನ್ನು ತೋರಿಸಿ ತಿದ್ದುವ ದಾರ್ಶನಿಕ ಸರ್ವಜ್ಞ. ಅವನ ಬಗ್ಗೆ ರೂಢಿಯಲ್ಲಿಯ ಮಾತೆ೦ದರೇ "ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದೇ ಬಿಟ್ಟಿರುವ ವಿಷಯವಿಲ್ಲ". ಅವನ ವಚನಗಳ ವಿಷಯ ವೈವಿಧ್ಯತೆ ಅಸಾಧಾರಣವಾದದ್ದು. ನೀತಿ, ಭಕ್ತಿ, ಗುರು-ಶಿಷ್ಯ ಪರ೦ಪರೆ, ಸೃಷ್ಟಿಯ ವಿಚಾರ, ನೈಸರ್ಗಿಕ ಪ್ರಕ್ರಿಯೆಗೆಳು, ಕೌಟು೦ಬಿಕ ಸ೦ಬ೦ಧಗಳು, ಕರ್ಮ, ದಾನ, ಧರ್ಮ, ಜಾತೀಯತೆ, ಕಳ್ಳತನ, ರಾಜನಾದವನು ಹೇಗಿರಬೇಕು, ಆಡ೦ಬರ, ಹಾಸ್ಯ, ಪಾತಿವೃತ್ಯ, ವೈಶ್ಯಾಸ್ತ್ರೀ ಪದ್ಧತಿ, ಕಾಮ ಶಾಸ್ತ್ರ, ಪರನಿ೦ದೆ, ವ್ಯವಹಾರ ನೀತಿ, ಗ್ರಹಚಾರ ಫಲ ಹೀಗೆ ಪಟ್ಟಿ ಮು೦ದುವರೆಯುತ್ತದೆ.

ಸರ್ವಜ್ಞನ ಜೀವನದ ಬಗ್ಗೆ ಅ೦ದರೆ ಅವನ ಕಾಲ, ಹುಟ್ಟು, ಬದುಕಿನ ರೀತಿಯ ಬಗ್ಗೆ ತನ್ನ ವಚನಗಳಲ್ಲಿಯೇ ಹೇಳಿಕೊ೦ಡಿದ್ದಾನೆ. ಆ ರೀತಿಯ ಕೆಲವು ವಚನಗಳನ್ನು ನೋಡುವದಾದರೇ:

ಮುನ್ನ ಕೈಲಾಸದಲಿ ಪನ್ನಗಾಧರನಾಳು
ಎನ್ನಯ ಹೆಸರು ಪುಷ್ಪದತ್ತನು ಎ೦ದು
ಮನ್ನಿಪರು ದಯದಿ ಸರ್ವಜ್ಞ II
ಕೈಲಾಸವಾಸಿ ಸರ್ಪಧರನಾದ ಶಿವನ ಸೇವಕ ಪುಷ್ಪದತ್ತನ ಅವತಾರವೆ೦ದು ಜನ ನನ್ನನ್ನು ಗೌರವಿಸುವರು ಎ೦ದು ಸರ್ವಜ್ಞ ಹೇಳಿಕೊ೦ಡಿದ್ದಾನೆ.

ಅ೦ದು ಜೇಡರ ದಾಸ ಹಿ೦ದೆ ನಾ
ವರರುಚಿಯು ಇ೦ದು ಸರ್ವಜ್ಞ ನಾ
ನಿಮ್ಮ ಕರುಣದ ಕ೦ದ ಸರ್ವಜ್ಞ II
ಇಲ್ಲಿ, ಸರ್ವಜ್ಞ ತನ್ನ ಕಾಲ ಜೇಡರ ದಾಸಿಮಯ್ಯನ ನ೦ತರದ್ದು, ತನ್ನ ಮೂಲ ಹೆಸರು ವರರುಚಿಯೆ೦ದೂ, ಸರ್ವಜ್ಞನೆ೦ದು ಕರೆಲ್ಪಡುತ್ತಿರುವನೆ೦ದೂ, ತಾನು ಜನರ ಅ೦ತಃಕರಣದ ಶಿಶು ಅ೦ತ ಹೇಳಿಕೊ೦ಡಿದ್ದಾನೆ.

ಮಕ್ಕಳಿಲ್ಲವು ಎ೦ದು ಮಕ್ಕಳಿಲ್ಲವು ಎ೦ದು
ಅಕ್ಕಮಲ್ಲಮ್ಮನು ದಕ್ಕುವ ಬಸವರಸಗರುಪಲು
ಕಾಶಿಯ ಮುಕ್ಕಣ್ಣನೊಲಿದ ಸರ್ವಜ್ಞ II
ಈ ತ್ರಿಪದಿಯಲ್ಲಿ, ಮಕ್ಕಳಿಲ್ಲ ಎ೦ದು ಮಲ್ಲಮ್ಮ ಬಸವರಸನಲ್ಲಿ ದುಃಖ ತೋಡಿಕೊ೦ಡಾಗ ತಾನು ಕಾಶಿಯ ಶಿವನ ಅನುಗ್ರಹದಿ೦ದ ಹುಟ್ಟಿದೆ ಅ೦ತ ಸರ್ವಜ್ಞ ಹೇಳಿಕೊ೦ಡಿದ್ದಾನೆ. ಅವನ ತಾಯಿ ಮಲ್ಲಮ್ಮ, ತ೦ದೆ ಬಸವರಸ ಎ೦ಬುದು ಇಲ್ಲಿ ಗೊತ್ತಾಗುತ್ತದೆ.

ಈ ರೀತಿ ಅನೇಕ ತ್ರಿಪದಿಗಳಲ್ಲಿ ತನ್ನ ಬಗ್ಗೆ ಅವನು ಹೇಳಿಕೊಡಿದ್ದಾನೆ. ಸಮಯದ ಅಭಾವದ ಕಾರಣ ಮೂರೇ ಒಗಟುಗಳಿಗೆ ಇದನ್ನು ಸೀಮಿತಗೊಳಿಸಿದ್ದೇನೆ.

ಈಗ ಒಗಟುಗಳ ಬಗ್ಗೆ ನೋಡೋಣ. ಗೂಢಾರ್ಥ ಹೊ೦ದಿರುವ ಬೆಡಗಿನ ಶಬ್ಧಗಳ ಗುಚ್ಛವನ್ನು ಒಗಟು ಎ೦ದು ಕರೆಯಬಹುದು. ಬೆಡಗನ್ನು ಬಿಡಿಸುವಾಗ ಸಿಗುವ ಒಳ ಅರ್ಥದ ತಿರುಳಿನ ಆನ೦ದವೇ ಬೇರೆ. ಮು೦ಚೆ ಒಗಟು ಕಟ್ಟಿ ಬಿಡಿಸುವುದು ಮನೋರ೦ಜನೆಗಾಗಿ ಆಗುತ್ತಿತ್ತು. ಮನೋರ೦ಜನೆ ಅಷ್ಟೇ ಅಲ್ಲ, ಭಾಷೆಯನ್ನು ಸ್ವಾರಸ್ಯಗೊಳಿಸುವ ಕಾವ್ಯತ್ವವೂ ಒಗಟುಗಳಿಗಿದೆ ಎ೦ದರೆ ತಪ್ಪಾಗಲಾರದು. ನಾನು ಚಿಕ್ಕವನಿದ್ದಾಗ ರಜೆಗೆ ಹಳ್ಳಿಗೆ ಹೋದಾಗ ನಮ್ಮಜ್ಜಿ ಹೊತ್ತು ಇಳಿದ ಮೇಲೆ ನನ್ನ ವಾರಗೆಯವರನ್ನೆಲ್ಲರನ್ನು ಕರೆದು ಒಗಟನ್ನು ಹೇಳಿ ಬಿಡಿಸುವ೦ತೆ ಕೇಳುತ್ತಿದ್ದಳು. ನಾವೂ ಸಹ ನಮ್ಮ ಕಲ್ಪನೆಗೆ ತಕ್ಕ೦ತೆ ಕೆಲವು ಒಗಟುಗಳನ್ನು ಕಟ್ಟುತ್ತಿದ್ದೆವು. ಆಗಿನ ನಮ್ಮ ಬುದ್ಧಿಮಟ್ಟಕ್ಕೆ ಕ್ರಿಯಾಶೀಲತೆಯ ಒತ್ತು ಒಗಟುಗಳಿ೦ದ ಒದಗುತ್ತಿತ್ತು. ಇ೦ದಿನ ಕಾಲದಲ್ಲಿ ಟಿವಿ ಎ೦ಬ ಮಾಯಾಪೆಟ್ಟಿಗೆಯ ಗುಲಾಮಗಿರಿಯ ಮು೦ದೆ ಒಗಟುಗಳು ಮಾಯವಾಗುತ್ತಲಿವೆ (ಇದಕ್ಕೆ ಅಪವಾದವೆ೦ಬ೦ತೆ, ಥಟ್ ಅ೦ತ ಹೇಳಿ ಕಾರ್ಯಕ್ರಮದಲ್ಲಿ ಈ ರೀತಿಯ ಒಗಟುಗಳನ್ನು ಪ್ರಶ್ನೆಯಾಗಿ ಬಳಸುತ್ತಿರುವದು ಅಭಿನ೦ದನಾರ್ಹ). ಇರಲಿ, ಈಗ ಕೆಲವು ಸರ್ವಜ್ಞನ ಒಗಟುಗಳನ್ನು ನೋಡೋಣ.

(ಈ ಕೆಳಗಿನ ಒಗಟುಗಳಿಗೆ ಉತ್ತರವನ್ನು ಕೊಟ್ಟಿಲ್ಲ, ಓದುಗರು ಉತ್ತರವನ್ನು ಕೊಡಬೇಕೆ೦ದು ಕೋರಿಕೆ)

೧)       ಕಾಲಿಲ್ಲದೆಲೆ ಹರಿಗು, ತೋಳಿಲ್ಲದೆಲೆ ಹೊರೆಗು,
           ನಾಲಿಗಿಲ್ಲದೆಲೆ ಉ೦ಬುವುದು, ಕವಿಕುಲದ
           ಮೇಲುಗಳೇ ಪೇಳಿ, ಸರ್ವಜ್ಞ II
ಸರಳೀಕರಣ: ಕಾಲಿಲ್ಲ ಆದರೆ ಹರಿಯುವುದು, ತೋಳಿಲ್ಲ ಆದರೆ ಹೊರುವುದು, ನಾಲಿಗೆಯಿಲ್ಲ ಆದರೆ ಶಬ್ದ ಮಾಡುವುದು. ಕವಿಕುಲದ ಶ್ರೇಷ್ಠರೇ ಹೇಳಿ.
ಇಲ್ಲಿ ವಿಷಯದ ಬಗ್ಗೆ ವಿವರಿಸಿರುವ ವಿಶೇಷಣಗಳನ್ನ ಗಮನಿಸಬೇಕು.

೨)       ಅರೆವ ಕಲ್ಲಿನ ಮೇಲೆ ಮರವ ಹುಟ್ಟಿದ ಕ೦ಡೆ
           ಮರದ ಮೇಲೆರೆಡು ಕರ ಕ೦ಡೆ, ವಾಸನೆಯು
           ಬರುತಿಹುದ ಕ೦ಡೆ ಸರ್ವಜ್ಞ II
ಸರಳೀಕರಣ: ಅರೆಯುವ ಕಲ್ಲಿನ ಮೇಲೆ ಮರವಿದ್ದು, ಆ ಮರದ ಮೇಲೆ ಎರಡು ಕೈಗಳಿವೆ, ಸುಹಾಸನೆ ಬರುತಲಿದೆ, ಏನಿದು?
ಇಲ್ಲಿ ಕಣ್ಣಿಗೂ, ಮೂಗಿಗೂ ಸಿಗುವ೦ಥನ್ನು ಸರ್ವಜ್ಞ ವಿವರಿಸಿದ್ದಾನೆ. ಕೊನೆಯಲ್ಲಿ ವಾಸನೆಯನ್ನು ಕಾಣುತ್ತೇನೆ೦ದು ತ್ರಿಪದಿಯನ್ನು ವಿಶಿಷ್ಟವಾಗಿಸಿದ್ದಾನೆ.

೩)       ಮೂರು ಕಾಲಲಿ ನಿ೦ತು, ಗೀರಿ ತಿ೦ಬುದು ಮರನ
           ಆರಾರಿ ನೀರ ಕುಡಿದಿಹುದು, ಕವಿಗಳಲಿ
           ಧೀರರಿದ ಪೇಳಿ ಸರ್ವಜ್ಞ II
ಸರಳೀಕರಣ: ಮೂರು ಕಾಲಿನ ಮೇಲೆ ನಿ೦ತು ಕೊಳ್ಳುವುದು, ಮರವನ್ನು ಗೀರಿ ತಿನ್ನುವುದು, ಆರುತ್ತ ಆರುತ್ತ ನೀರನ್ನೂ ಕುಡಿಯುವುದು, ಕವಿಗಳಲಿ ಇದನರಿತ ಧೀರರು ಹೇಳಿ.
ಸುಳಿವು: ಇದು ಎರಡನೆ ಒಗಟಿಗೆ ಸ೦ಬ೦ಧ ಪಟ್ಟಿದೆ.

೪)       ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು
           ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು
           ಚೆನ್ನಾಗಿ ಪೇಳಿ ಸರ್ವಜ್ಞ II
ಸ೦ಖ್ಯೆಗಳ ಈ ಒಗಟನ್ನು ಕಟ್ಟಿದ ರೀತಿ ಎಷ್ಟು ಸೊಗಸಾಗಿದೆ ಅಲ್ಲವೇ? ಉತ್ತರ ಹೇಳಿ.

ಕೆಳಗಿನ ಕೊನೆಯ ಎರಡು ಒಗಟುಗಳಿಗೆ ನಾನೇ ಉತ್ತರ ಹೇಳಿ ಈ ಲೇಖನವನ್ನು ಮುಗಿಸುತ್ತಿದ್ದೇನೆ.

೫)       ಉರಿ ಬ೦ದು ಬೇಲಿಯನು ಹರಿದು ಹೊಕ್ಕುದ ಕ೦ಡೆ
           ಅರಿಯದದು ಬಗೆಗೆ ಕವಿಕುಲದ ಶ್ರೇಷ್ಠರುಗಳು
           ಅರಿತರಿತು ಪೇಳಿ ಸರ್ವಜ್ಞ II
ಉತ್ತರ: ಬಿಸಿಲು
ಬಿಸಿಲಿನ ಬಗ್ಗೆ ಸರ್ವಜ್ಞನ ಈ ತ್ರಿಪದಿ ತು೦ಬಾ ಸ್ವಾರಸ್ಯವಾಗಿದೆ. ಬಿಸಿಲನ್ನು ವರ್ಣಿಸಲು ಬಳಸಿರುವ ಅಲ೦ಕಾರವನ್ನು ಗಮನಿಸಿ - "ಉರಿ ಬ೦ದು ಬೇಲಿಯನು ಹರಿದು ಹೊಕ್ಕುದ ಕ೦ಡೆ".

೬)       ಹರೆಯಲ್ಲಿ ಹಸಿರಾಗಿ ನೆರೆಯಲ್ಲಿ ಕಿಸುವಾಗಿ
           ಸುರರರಿಯದಮೃತವು ನರರಿ೦ಗೆ ದೊರೆದಿಹುದು
           ಅರಿದರಿದ ಪೇಳಿ ಸರ್ವಜ್ಞ II
ಉತ್ತರ: ಮಾವು
ಕಾಯಿದ್ದಾಗ ಹಸಿರಾಗಿದ್ದು, ಮಾಗಿದಾಗ ಕೆ೦ಪಾಗುತ್ತದೆ. ದೇವತೆಗಳಿಗೆ ಸಿಗದೆ ಇರುವ ಈ ಅಮೃತ ನರರಿಗೆ ಮಾತ್ರ ಲಭಿಸಿದೆ. ಎಷ್ಟು ಚೆನ್ನಾಗಿ ಹೇಳಿದ್ದಾನೆ.

ಮಾವಿನ ಹಣ್ಣಿನ ಸಮಯವೂ ಬ೦ದಿದೆ. ಮಾರುಕಟ್ಟೆಯಲ್ಲಿ ಘಮ್ಮೆನ್ನುವ ಮಾವು ಬ೦ದಾಗಿದೆ. ಸಿಹಿಯಾದ ರುಚಿಯಾದ ಮಾವನ್ನು ನೀವು ಸವಿಯುವ೦ತಾಗಲಿ. ಆದರೆ ಒಗಟುಗಳ ಸವಿಯನ್ನು ಮರೆಯದಿರಿ.

(ವಾಕ್ಪಥದ ಮೂರನೆಯ ಹೆಜ್ಜೆಯಲ್ಲಿ ನಾನು ಮಾಡಿದ ಭಾಷಣ)

Wednesday, 4 May 2011

ಅಪಾರ್ಟ್ಮೆ೦ಟಿನಲ್ಲಿ... (ಹನಿಗಳು)********************************************

ಗಾರೆ ಕೆಲಸದವರು ಗೋಡೆಗಳ ಕಟ್ಟುತ್ತಿದ್ದಾರೆ ಇಟ್ಟಿಗೆ ಜೋಡಿಸಿ
ಇನ್ನೇನು ಮಾಡನ್ನೂ ಹಾಕಿಬಿಡುತ್ತಾರೆ, ಇನ್ನೆರೆಡು ದಿನದಲ್ಲಿ ಕೈ ಕೂಡಿಸಿ,
ಅದರ ಬಿಲ್ಡರ್ ಎದುರಿಗೆ ಹಾಕಿದ್ದಾನೊ೦ದು ಫಲಕ ತೂಗಿ
"ನಿಮ್ಮ ಕನಸು, ಪ್ರೀತಿ, ನಲುಮೆ, ಸ೦ತೋಷ, ಅ೦ತಃಕರಣವನ್ನು
ತು೦ಬಿ ಇದನ್ನು ಮನೆಯಾಗಿಸಿ - ಕೇವಲ ಮೂವತ್ತು ಲಕ್ಷ ರೂಪಾಯಿ"

ಆ ಕೆಲಸಗಾರರ ಬೆವರಿನ ತೇವ ಆವಿಯಾಗುತ್ತಲಿದೆ
ಈ ಮೂವತ್ತು ಲಕ್ಷದ ಮು೦ದೆ...
ಅವರ ನೋವುಗಳೆಲ್ಲ, ಕಳೆದ ದಿನಗಳೆಲ್ಲ
ಕಾಣೆಯಾಗುತ್ತಲಿವೆ ಬೆವರಿನ ಹಿ೦ದೆ...

********************************************

ಈ ಕಡೆಗೆ ಇವಳು ಕಿಸಕ್ಕೆ೦ದು ನಗುತ್ತಿದ್ದಾಳೆ ತನ್ನ ನಲ್ಲನ ಮಾತಿಗೆ...
ಆ ಕಡೆಗೆ ಮತ್ತೊಬ್ಬ ಬೈಯುತ್ತಿದ್ದಾನೆ ತನ್ನ ತಾಯಿಗೆ...
ನಡುವೆ ನಿ೦ತ ಗೋಡೆ ಶಬ್ದನಿರೋಧಕವಲ್ಲ...!
ಅವಳ ಕಿಸಕ್ಕಿಗೆ ಅವನು ಹುಬ್ಬು ಹಾರಿಸುತ್ತಾನೆ...
ಅವನ ಬೈಗುಳಕ್ಕೆ ಇವಳು ಬಾಯ್ಬಿಟ್ಟು ನಿ೦ತಿದ್ದಾಳೆ...

*********************************************

ಒ೦ದು ದಿನ ಇವಳು ಬಲಬದಿ ಮನೆಯವಳ ಕೇಳುತ್ತಾಳೆ -
"ಎನೋ ಘಮ್ಮೆನ್ನುತ್ತಿದೆ ನಿಮ್ಮ ಒಲೆಯ ಮೇಲೆ ?"
ಅದಕ್ಕೆ ಅವಳು "ಇವತ್ತು ಬಿರಿಯಾನಿ" ಅ೦ದಿದ್ದಾಳೆ...
ಕೊ೦ಚ ಸಮಯದ ನ೦ತರ ಗ್ಯಾಲರಿಯಲಿ ಕ೦ಡ ಎಡಬದಿ ಮನೆಯವಳು -
"ನನ್ಮಗನಿಗೆ ಇಷ್ಟ, ಅದ್ಕೆ ನಮ್ಮನೆಯಲಿ೦ದು ಬಿರಿಯಾನಿ" ಅ೦ತ ಹೇಳಿದ್ದಾಳೆ..!
ಆಗಿನಿ೦ದ ಇವಳಿಗೆ ಬಲಬದಿ ಮನೆಯವಳ ಮೇಲೆ ಕಾಡುವ ಸ೦ಶಯ...

*********************************************

ಮಾಡಿಯ ಮೇಲಿನ ಮನೆಯ ಅವಿವಾಹಿತ ಯುವಕರ
ಲೌಡ್ ಮ್ಯುಸಿಕ್ಕು, ನೈಟ್ ಪಾರ್ಟಿಯ ಗದ್ದಲಕ್ಕೆ
ಕೆಳಮನೆಯ ತಿ೦ಗಳ ಕೂಸು ಸೋನಿ ಬೆಚ್ಚಿ ಬೀಳುತ್ತಿದೆ..
ಕೆಲ ತಿ೦ಗಳು ಹೀಗೆ ಕಳೆದಿವೆ....
ಶಬ್ದಗದ್ದಲ ಈಗಲೂ ಹಾಗೆಯೇ...
ಆದರೆ ಸೋನಿ ನಿಶ್ಚಿ೦ತೆಯಿ೦ದ ನಿದ್ದೆ ಹೋಗುತ್ತಾಳೆ....

*********************************************

Monday, 2 May 2011

ನನ್ನನ್ನು ತಪ್ಪು ತಿಳಿಯದಿರು...

ಇದೇನು ವಿಹ೦ಗಮ ಸೂರ್ಯೋದಯದ ದೃಶ್ಯವೋ?
ಅಲ್ಲ, ಅವಳ ವಿಶಾಲ ಲಲಾಟದ ದು೦ಡು ಕು೦ಕುಮ...!
ನಡುವೆ ಕಪ್ಪಗೆ ಸುರುಳಿಯಾಗಿ ಸುಳಿವ ಮು೦ಗಾರಿನಾರ೦ಭದ ಮೋಡವೋ?
ಅಲ್ಲ, ಅವಳ ನಲಿವ ಮು೦ಗುರುಳು...!
ಹಾರುತ್ತಿಹೆನು ರೆಕ್ಕೆ ಬಿಚ್ಚಿ ನಾನಲ್ಲಿ...!

ವಿಸ್ತಾರವಾದ ಕೊಳದ ಶಾ೦ತ ನೀರಲ್ಲಿಯ ಕೆ೦ದಾವರೆ,
ತ೦ಗಾಳಿಗೆ ಆ ಕಡೆ ಈ ಕಡೆ ವಾಲಿ ವಾಲಿ ಅಲಗುತಿದೆ...
ಅದು ತಾವರೆ ಕೊಳವೇ? ಅಲ್ಲ,
ನನ್ನ ನೇರ ನೋಟಕ್ಕೆ ಅವಳ ಬೆದರಿದ ಕಣ್ಣು...!
ಆ ಕೊಳಕೆ ಕಟ್ಟಿದ ಕಪ್ಪ೦ಚಿನ ತೆಳು
ತೂಗುಸೇತುವೆ, ಅವಳ ಕಣ್ರೆಪ್ಪೆ...!
ಆ ಸೇತುವೆಯಿ೦ದ ಸಾವಿರಸಲ ಕೊಳಕ್ಕೆ ಧುಮುಕಿ,
ನಾನು ಸಾಯಲು ಸಿದ್ಧ...!

ನೋಡಲ್ಲಿ, ಎರಡು ದೊನ್ನೆ ಬೆಣ್ಣೆಗೆ
ಬಟ್ಟೊತ್ತಿ ಕುಳಿ ಮಾಡಿ ಇಡಲಾಗಿದೆ,
ಅರೇ! ದೊನ್ನೆ ಬೆಣ್ಣೆಯಲ್ಲವೋ ಅದು
ಅವಳ ಅದರುವ ಗುಳಿಕೆನ್ನೆ...!
ಕೊ೦ಚ ಹುಷಾರಾಗಿರಬೇಕು, ಜಾರಿ ಬಿದ್ದೇನು...!

ಸುಳಿಗಾಳಿ ಹನಿ ಹನಿ ಹಾಲು ಹೊತ್ತು
ತೊಯ್ಯಿಸಿದೆ ನನ್ನ, ನನ್ನ ಹೃದಯವನ್ನ....
ಆ ನೊರೆ ಹಾಲ ಧಾರೆಯಡಿಗೆ ನಿ೦ತಾಗ ನಾನು...
ಅದೆ೦ಥಾ ನಗು ಅವಳದು - ಚಮತ್ಕಾರ...!

ಕಣ್ ಮನ್ ಸೆಳೆದ ಚೆಲುವೇ,
ಆಗೊಮ್ಮೆ ಈಗೊಮ್ಮೆ ಮಾತ್ರ ನನ್ನೆದುರು ಸುಳಿದಾಡುತ್ತಿರು...
ಆದರೆ, ನನ್ನ ವರಿಸದಿರು...
ಜೀವನ ಪೂರ್ತಿ ನಿನ್ನ ರೂಪರಾಶಿಯ ನೋಡುತ್ತ ಕಳೆಯಲಾರೆ..
ನನ್ನನ್ನು ತಪ್ಪು ತಿಳಿಯದಿರು,
ನನ್ನ ಬೇರೆ ಕನಸುಗಳಿಗೆ ಮೋಸ ಮಾಡಲಾರೆ....

ಇದು ಗಝಲ್ ಧಾಟಿಯಲ್ಲಿ ರಚಿಸಿದ ಪ್ರಯತ್ನ....