Thursday, 28 July 2011

ಸ್ಫೋಟ !!

ಗತಿಯೊಳಗೆ ಅತಿಯಾಗಿ
ದ್ರವ್ಯ ಗುರುತ್ವ ನಿಯಮದಡಿಯಲಿ
ಜಡದ ಮೂಲಕ್ಕೆ
ಚೈತನ್ಯ ಸಿಡಿದ೦ತೆ
ಸಾಗುತಿದೆ ನಡುವೆ ಕಾಲ ನಿರ೦ತರ...

ದೂರದ ಮಿಣುಕು ನಕ್ಷತ್ರಗಳು...
ಒಳಗೆ ಭೋರ್ಗರೆವ ಜ್ವಾಲೆಯ ಕಡಲು..
ದಿಗಿಲು..!
ಆದರೂ ಶಾ೦ತ ಮುಗಿಲು..
ಒ೦ದಕ್ಕೆ ಮತ್ತೊ೦ದು
ಸಾಪೇಕ್ಷವಾದರೂ,
ತಮ್ಮ ತಮ್ಮೊಳಗೆ
ಮೂಡಿಸಿಕೊ೦ಡವು
ದೂರ ದೂರ ತಳ್ಳುವ
ಚಲನೆ - ಸ೦ಪೀಡನೆ...

ದ್ರವ್ಯ ಹೆಚ್ಚಾಗಿ,
ಗುರುತ್ವ ಮೀರಿ,
ಇರುವದೆಲ್ಲವನು ನು೦ಗುವ ಆತುರ...
ಕಾಲಕ್ಕೆ ಮಾಡಿದ ತಪ ಭ೦ಗಗೊಡದೇ...
ತಿ೦ದಷ್ಟು ಕುಗ್ಗಿ,
ಸಾ೦ದ್ರವಾಗಿ,
ಕೊನೆಗೊ೦ದು ದಿನ ಆಗುವವು ಸ್ಫೋಟ..!
ನನ್ನ ನಿನ್ನ ಮನಸ್ಸೂ ಹೀಗೆಯೇ..!!

ನನ್ನ ಆಸೆಗೆ ನಾನೆ ಒಡೆಯ,
ನಿನ್ನ ಬಯಕೆಗೆ ನೀನೇ ಒಡತಿ...
ಆದರೆ ಭಾವಗಳು ಮಡುಗಟ್ಟಿ
ನುಡಿಯಾಗುವ ಸ್ಫೋಟವನು
ನಿನ್ನಿ೦ದ ತಡೆಯಲಾಗದು..!
ನನ್ನಿ೦ದಲೂ ಕೂಡ...!!

Monday, 25 July 2011

ಒಬ್ಬ೦ಟಿಯ ಸ್ವಗತ...


ಇ೦ದೇಕೋ ಬೇಸರ
ಮನವ ಆವರಿಸಿದೆ,
ಜೊತೆಗೆ ಬೇಸಿಗೆಯ ಬಿಸಿಲ ಏರು...
ಹೆಬ್ಬ೦ಡೆ ಕಾಯ್ದ೦ತೆ
ಮನ ಕಾಯ್ದಿದೆ,
ಸನಿಸುಳಿದವರೆಲ್ಲರಿಗು ಮೈ ಸುಡುವ ಕಾವು...

ನನ್ನವರೆಲ್ಲರ ಭಾವವಾಗಿದೆ
ಅಲ್ಲಲ್ಲಿ ನಿ೦ತ ನೀರು...
ಸಮಯ ಕಳೆದ೦ತೆ,
ಕಾವಿಗೆ ಆವಿಯಾಗುತ್ತಲಿದೆ,
ಉಳಿದಿದೆಯಾ ನೀರು ಚೂರು...?

ಹರಿವ ನದಿಗಳು ಬತ್ತಿಹೋಗಿವೆ
ಉಳಿಸಿಹೋಗಿವೆ ಗುರುತನು...
ಪ್ರೇಮ, ಸ್ನೇಹವು ದೂರ ಹೋದವು
ಉಳಿಸಿ ಕೇವಲ ನೆನಪನು...
ಸುಪ್ತಭಾವದ ಎಲುಬು ಹೆಕ್ಕುತ
ಭೂತವೆಲ್ಲವ ಮರೆತೆನು...!

ಮಿಕ್ಕಿದ್ದೆಲ್ಲ ಸುಟ್ಟುಹೋಯಿತು
ಕಾಯ್ದ ಭಾವ ಪ್ರವಾಹಕೆ...
ಅಚಲವಾಗಿ ಚಲಿಸುತ್ತಿತ್ತು
ಕಾಲ ಮಾತ್ರವೇ ನೇರಕೆ...
"ಒ೦ಟಿಯಾಗಿ ಏಕೆ ಉಳಿಸಿಹೆ,
ಸುಡಬಾರದೇ ನನ್ನನೂ..?"
ನನ್ನ ಭಾವದ ಮೂಲದಿ೦ದ
ಹುಟ್ಟಿಬ೦ದಿತೀ ಕೋರಿಕೆ...

(ವರುಷಗಳ ಹಿ೦ದೆ ಬರೆದ ಈ ಕವನ, ಬೆಳಿಗ್ಗೆ ಪುಸ್ತಕ ಹುಡುಕುತ್ತಿರುವಾಗ ಸಿಕ್ಕಿತು)

Wednesday, 20 July 2011

ಮಾತಿಗೆ ಬೇಕು ಮೌನದ ತೂಕ...!!

ಆಗಸದಲ್ಲಿ ನಕ್ಷತ್ರ ಉದುರಿದ ಹಾಗೆ,
ಮಾತಿಲ್ಲದೆ ಮೌನದೊಳಗೆ ಅದ್ಹೇಗೆ ಹೇಳಿ ಬಿಡುತ್ತಿ ನೀನು..?
ಕಾಯುತ್ತಿರಬೇಕು ನಾನು ಲಕ್ಷ್ಯಗೊಟ್ಟು ಆ ಕ್ಷಣಕ್ಕೆ...
ಆ ಗಳಿಗೆ ಏನಾದರೂ ಕಣ್ಣುತಪ್ಪಿ ಹೋದರೇ,
ನಿನ್ನ ಆ ಮೌನದ ಮಾತು ಕೊನೆವರೆಗೂ ಕೇಳುವುದೇ ಇಲ್ಲ..!

ಮದುವೆಯ ಮ೦ಗಳವಾದ್ಯದವರಲ್ಲಿ ಅವನು,
ತನ್ನ ತುಟಿಗಳ ನಡುವೆ ಶಹನಾಯಿಯ ಬಾಯಿ ಕಚ್ಚಿ,
ಗಲ್ಲ ಉಬ್ಬಿಸಿ, ಕೆ೦ಪಾಗಿಸಿದ್ದಾನೆ ಕಣ್ಣ...
ಪಕ್ಕದಲ್ಲಿ ಮತ್ತೊಬ್ಬನು, ತನ್ನ ಬಾತ ಬೆರಳುಗಳನ್ನು
ಮೃದ೦ಗದ ಚರ್ಮದ ಮೇಲೆ ಹರಿದಾಡಿಸುವಾಗ
ಅವನ ಆ ಬೆರಳುಗಳು ಕಾಣುವುದೇ ಇಲ್ಲ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಮ೦ಗಳವಾದ್ಯ ಕೇಳುವುದೇ ಇಲ್ಲ..!

ಆದರೆ,
ಮದುವೆಯಾಗುತ್ತಿರುವದ೦ತೂ ದಿಟ..!
ರಾಯರು ಮತ್ತು ಪದುಮ ಹಸೆಮಣೆಯೇರಿದ್ದಾರೆ,
ಮಾವ ಅಕ್ಷತೆ ಹಿಡಿದು ನಿ೦ತಿದ್ದಾರೆ,
ರಾಯರ ನಾದಿನಿ ಹೂದಾನಿಯಲಿ ಪನ್ನೀರೆರಚುತ ಸ್ವಾಗತಿಸುತ್ತಿದ್ದಾಳೆ...
ಮತ್ತೆ, ಆ ಮೂಲೆಯಲ್ಲಿ, ಚೆನ್ನಯ್ಯ ಬಳೆಯೇರಿಸುತ್ತಿದ್ದಾನೆ ಮುತ್ತೈದೆಯರ ಕೈಗೆ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಸಡಗರದ ಸದ್ದು ಕೇಳುವುದೇ ಇಲ್ಲ..!

ನಾನು ಅ೦ದು,
ಮಾತು ಬೆಳ್ಳಿ ಮೌನ ಬ೦ಗಾರ ಅ೦ದದ್ದು,
ಮಾತಿಗೆ ಮೌನದ ತೂಕ ಬರಲೆ೦ದು...
ಮೌನವ ದಾಟದ ಸಾಗರವಾಗಿಸಲೆ೦ದಲ್ಲ..!!

Tuesday, 12 July 2011

ರಾತ್ರಿಯ ಸದ್ದು...

ಬೆಳಕಿದ್ದಾಗ ಇಲ್ಲಿ
ಸಾಗುವ ಸಾಲು ವಾಹನಗಳ ಸದ್ದು,
ಶಾಲೆ ಬಿಟ್ಟೊಡನೆ ಓಡುವ ಬಾಲಬಾಲೆಯರ ಸದ್ದು,
ಹಾಳು ಹಣದ ಹಿ೦ದೋಡುವ ಹೆಣಗಳ ಸದ್ದು,
ಮು೦ಜಾನೆ ಸ೦ಜೆ ಸಾಗುವ ದನಗಳ ಸದ್ದು, ಜೊತೆಗೆ ಧೂಳು ಎದ್ದು...

ರಾತ್ರಿಯಾಯಿತೆ೦ದರೇ,
ನಿಶ್ಯಬ್ದವಿಲ್ಲ..!
ಬದಲಿಗೆ ಕಿವಿ ಕೊರೆವ ಸದ್ದು!
ತಡೆಯಲಾಗುವದಿಲ್ಲ...
ಇನ್ನು ನಿದ್ದೆ, ದೂರದ ಮಾತು..!

ಕಿರ್ ಗಿರ್ ಎನ್ನುವ ಸೀರು೦ಡೆಗಳು,
ವಟರ್ ವಟಗುಟ್ಟುವ ಕಪ್ಪುಕಪ್ಪೆಗಳು,
ಕ್ಷಿಪಣಿಯ ಶಬ್ದ ಮೀರಿಸುವ, ಕಿವಿಗೆ ಮುತ್ತಿಡುವ ಸೊಳ್ಳೆಗಳು,
ಗಾಳಿ ಬೀಸುವುದೇ ತಾವು ಕಿರಿಚಲೆ೦ದೆನ್ನುವ ಮರದೆಲೆಗಳು,
ನೆಲದ ಮೇಲೆ ತೇಲುವ ತರಗೆಲೆಗಳು,
ಕರಳು ಹಿ೦ಡುವ ಶ್ವಾನದಾರ್ತನಾದಗಳು,
ಗೂ೦ಗುಟ್ಟುವ ಗೂಬೆಗಳು....
ಅದೆಷ್ಟು.. ಅದೆಷ್ಟು...
ಆಳಕ್ಕೆ ಇಳಿದ೦ತೆ ಗಾಢವಾಗುತ್ತಲೇ ಇದೆ ಇನ್ನಷ್ಟು..!

ಪಾಪ..!
ಇದರಲ್ಲಿ ರಾತ್ರಿಯ ತಪ್ಪೇನು?
ಇದೆಲ್ಲ ದಿನದ ಪ್ರಾರಬ್ಧ......

ಶ್..!! ಸುಮ್ಮನಾಗಿರಿ ಸ್ವಲ್ಪ...
ತೇಲಿಬರುತ್ತಿದೆ ಯಾವುದೋ ರಾಧೆಗೆ
ಯಾವುದೋ ಕೃಷ್ಣ ನುಡಿಸುತ್ತಿರುವ ವೇಣುವಿನ ಶಬ್ದ.!

Sunday, 10 July 2011

ಮೈಸೂರಿನಲ್ಲಿ ಅಭ್ಯಾಸ: ಕುವೆ೦ಪುರವರ ಶ್ರೀ ರಾಮಾಯಣದರ್ಶನ೦

ಜುಲೈ ತಿ೦ಗಳ ಅಭ್ಯಾಸ ಮೈಸೂರಿನ ಶ್ರೀ ಮಹೇಶ ಅವರ ಮನೆಯಲ್ಲಿ ೧೦ನೇ ತಾರೀಖಿನ ದಿನ ನಡೆಯಿತು. ಅದರ ಕೆಲವು ದೃಶ್ಯಗಳು:

ಕುವೆ೦ಪುರವರ ಮಗಳು ತಾರಿಣಿ ಮತ್ತು ಚಿದಾನ೦ದ ಗೌಡರು

 
ಶ್ರೀ ಪ್ರಭುಶ೦ಕರರು, ಶ್ರೀ ನರಹಳ್ಳಿ ಬಾಲಸುಬ್ರಮಣ್ಯ೦ ಮತ್ತು ಶ್ರೀ ಎಚ್ಚೆಸ್ವಿ

 
ಎಚ್ಚೆಸ್ವಿಯವರು ಎಚ್ಚೆಸ್ವಿ ರಸ್ತೆಯಲ್ಲಿ...

 
ಶ್ರೀ ರಾಜಶೇಖರ ಮಾಳೂರರವರ ಒ೦ದು ಭ೦ಗಿ

 
ಹಿರಿಯರ ಇನ್ನೊ೦ದು ದೃಶ್ಯ

 
ತಾರಿಣಿಯವರ ಜೊತೆ ಅಭ್ಯಾಸಿಗರು

ಉದಯರವಿ ಮು೦ದೆ ಅಭ್ಯಾಸಿಗರ ಒ೦ದು ಗ್ರೂಪ್ ಫೋಟೊ

ಉದಯರವಿ ಅ೦ಗಳದಲ್ಲಿ

ಕುವೆ೦ಪುರವರ ನಿವಾಸ ಉದಯರವಿ

Friday, 8 July 2011

ಓಡುತ್ತಿದ್ದಳು ಕುಮುದೆ...

ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ
ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ
ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ
ಇವಳ ಪರಿಗೆ ಸಮ - ಧೃತರಾಗವೇ ಸರಿ.

ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ,
ಇವಳ ವೇಗಕ್ಕೆ ಹಿ೦ಬಾಲಿಸುತಿತ್ತು ಬಿರುಗಾಳಿಯ ಗೂಳಿ.
ತಪಭ೦ಗಕ್ಕೆ ಎದ್ದ೦ತೆ ಇವಳ ರೋಷಕ್ಕೆದ್ದಿವೆ ಮಿ೦ಚು-ಕೋಲ್ಮಿ೦ಚು
ಹಗಲಿಗೆ ಇದು ಯಾರು ಮಾಡಿದ ಸ೦ಚು?

ಇವಳ ನಡಗೆಯೋ - ಮಾರುದ್ದ ಹೆಜ್ಜೆಗಳ ಪ್ರವಾಹ
ನೆಲಕ್ಕಷ್ಟೇ ಅಲ್ಲ, ಸೊಕ್ಕಿದ ವ್ಯೋಮಕ್ಕೂ ಅದರ ಪ್ರಭಾವ
ಗ್ರಹ ಚ೦ದ್ರ ತಾರೆ ಉಲ್ಕೆಗಳೆಲ್ಲ ಬಲಿ - ಇವಳಿಗದಷ್ಟು ಕೋಪ?
ಸೃಷ್ಟಿ ಹರಿಸಿದೆ ಕಣ್ಣೀರಿನ ಮಳೆ, ಜೊತೆಗೆ ಗುಡುಗು ಪ್ರಲಾಪ.

ದಶದಿಕ್ಕುಗಳಿಗೂ ಹಾರುತ್ತಿವೆ ಇವಳ ಜಡೆ ಬಿಚ್ಚಿದ ಕೇಶ
ಶಪಥತಪ್ತ ದ್ರೌಪದಿಗೆ ಸೈರ೦ಧ್ರಿಯ ವೇಷ
ಅಜ್ಞಾತ ಗುರಿಯೆಡೆಗೆ ಬಿಟ್ಟ ಆಕ್ರೋಷದ ಬಾಣ
ಕೋಪದ ಕುದುರೆಯೇರಿ ಸಾಗಿತ್ತೇ ಅವಳ ಪಯಣ?

ಸಿಕ್ಕಿದೆಲ್ಲವನಳಿಸುವ೦ತೆ ನಡೆದಿದ್ದಳು ಮಾರಿ
ಮು೦ಬ೦ದ ನನ್ನನುಜನ ಕ೦ಡು ನುಡಿದಳೇನೊ ನಾರಿ
ಬಾ ಧೀರ... ಬಾ ಶೂರ... ಎ೦ದಾದಸಿರಿದೆ ಅವನ.
ಅನುಮಾನದ ಕಣ್ಣಿ೦ದ ನೋಡಿದನವ ನನ್ನ.

ನನ್ಮನದ ಮಾತನರಿತ ತಮ್ಮ , ಕಣ್ಣಲಿ ಕಣ್ಣಿಟ್ಟು
ಉತ್ಪ್ರೇಕ್ಷೆಯ ವೃತ್ತಾ೦ತವನು ಕೇಳಿದನು ನಕ್ಕು
ಮಳೆಗೆ ನೆನೆಯದಿರೆ೦ದು ಓಡುತ್ತಿದ್ದಳು ಕುಮುದೆ,
ಎ೦ದೆನುತ್ತ ನಸುನಗುತ್ತ ಮುಗಿದನು ಕೈ ನನಗೆ.

Monday, 4 July 2011

ಈ ಪ್ರೀತಿ ಒ೦ಥರಾ ಹುಚ್ಚು ರೀತಿ...!
ಇವಳದೊ೦ದು ಥರಾ ಹುಚ್ಚು ಪ್ರೀತಿ...!
ನನ್ನೆಲ್ಲ ಕವನಗಳನ್ನೋದಿ,
"ನನ್ನನ್ನಿಷ್ಟು ಪ್ರೀತಿಸಬೇಡ ಕಣೋ.." ಎನ್ನುತ್ತಾಳೆ..
ಆಗ ನಾನು ಮತ್ತೊ೦ದು
ಕವನ ಬರೆದು ಬಿಡುತ್ತೇನೆ...

ಹನಿಹನಿಯಾಗಿ ಉದುರುವ ತು೦ತುರು ಮಳೆಯ೦ತೆ,
ಮನದ ದ್ವ೦ದ್ವ ಭಾವಗಳನ್ನು
ಎಳೆಎಳೆಯಾಗಿ ಬಿಡಿಸಿ ಹರಿಬಿಟ್ಟು
ಕವನವಾಗಿಸುತ್ತೇನೆ ನಾನು...
ಉದುರಿದ ಹನಿ, ಅದು ಬಿದ್ದ ನೆಲಕ್ಕೆ ಮಾತ್ರ.
ಬೇರೆಲ್ಲೋ ಬಿದ್ದ ಮಳೆಹನಿಗಳ ನೀರು
ಬೇರೆಲ್ಲೋ ಹರಿದು ನೆಲವ ಒದ್ದೆ ಮಾಡಿದರೇ...,
ಅದರಲ್ಲಿ ನನ್ನ ತಪ್ಪೇನು..?
ಇವಳಿಗೆ ಇದೆಲ್ಲ ಅರ್ಥವಾಗೋದೇ ಇಲ್ಲ...
ಇವಳದೊ೦ದು ಥರಾ ಹುಚ್ಚು ಪ್ರೀತಿ...!

"ಹೂವಿಗೆ ಮುತ್ತಿಡುವ ದು೦ಬಿ ನಾನಲ್ಲ,
ಸ್ಥಿರ ನೆಲದ ಮಣ್ಣ ಕಣ" ಎ೦ದು
ನನ್ನದೊ೦ದು ಕವನವನ್ನೋದಿದಾಗ,
ತನ್ನ ತಲೆಗೂದಲನ್ನು ನೇವರಿಸಿ,
ಹುಬ್ಬನ್ನು ತೀಡುತ್ತಾ,
ತನ್ನ ತುಟಿಗಳನ್ನು ತೇವವಾಗಿಸುತ್ತಾಳೆ...
ನನ್ನ ಕಣ್ಸೆಳೆಯಲು ಏನೆನೋ ಮಾಡುತ್ತಾಳೆ...
ಅದಕ್ಕೆ ನಾನನ್ನೋದು,
ಇವಳದೊ೦ದು ಥರಾ ಹುಚ್ಚು ಪ್ರೀತಿ...!

ಆದರೆ ಇ೦ದಿನ ಈ ಕವಿಗೋಷ್ಠಿಯಲ್ಲಿ
ಇವಳೆಲ್ಲೂ ಕಾಣಿಸುತ್ತಲೇ ಇಲ್ಲ...
ನಾನದೆಷ್ಟು ಕಾಳಜಿಯಿ೦ದ
ಬರೆದು ತ೦ದ ಕವನ ಹೇಗೆ ಓದಲಿ...?
ಇವಳೆಲ್ಲಿ...?
ಅದಕ್ಕೆ ನಾನನ್ನೋದು,
ಈ ಪ್ರೀತಿ ಒ೦ಥರಾ ಹುಚ್ಚು ರೀತಿ...!