Friday 23 September 2011

ನೀನು ನಾನು...

ಹೇಳೋದು ಏನಿಲ್ಲ,
ತಿಳಕೊ೦ಡಿ ನೀ ಎಲ್ಲ,
ನಾ ತಳ ಕಾಣೋ ತಿಳಿ ನೀರಿನ ಕೊಳ...
ನನಗ ನೀ ಹೇಳಬೇಕ೦ತಿಲ್ಲ,
ನನಗ ನೀ ಗೊತ್ತೆಲ್ಲ,
ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ...

ನಾ ಮಾತಾಡಿದಾಗೆಲ್ಲ,
ತೆರಿ ತೆರಿಗಳು ಎದ್ದಾವು,
ಸುಳಿದಾವು ನೀ ಎ೦ಬೋ ದಡದ ಕಡೆಗೆ...
ಇಟ್ಟುಕೋ ಬೇಕಾದರ,
ಬಿಟ್ಟುಕೋ ಬಿಟ್ಟರ,
ನಿ೦ತದ ಭಾವ, ಮಾತು ಮರೆಗೆ...

ದಡದ ಪಚ್ಚ ಹಸಿರ,
ಸುಳಿದ ಮರ ನೆರಳ,
ನೀನಾಗಿ ಸುತ್ತಲ ಆವರಿಸಿ...
ತೂಗುತ್ತ ಬಳಕುತ್ತ,
ನೀ ಬಗ್ಗಿ ನೋಡ ಒಳಗ,
ನಿನ್ನನ್ನ ತೋರೇನು ನನ್ನ ಅರಸಿ...

ಕೊಳದಿ೦ದಲೇ ದಡ,
ದಡವಿದ್ದದ್ದಕ್ಕ ಕೊಳ,
ಹೊಳೆವ ಕನ್ನಡಿ ಹಾ೦ಗ ಈ ಕಾಡಿನ್ಯಾಗ...
ನಿನ್ನಿ೦ದಲೇ ನಾನು,
ನನ್ನಿ೦ದಲೇ ನೀನು,
ಒಬ್ಬರಿಗೊಬ್ಬರು ನಾವು ಈ ಬಾಳಿನ್ಯಾಗ...

Wednesday 21 September 2011

ಅಪ್ಪ ಅಮ್ಮ

ಅ೦ದು
ನಾ ಅ೦ಬೆಗಾಲಿಡುತ್ತ ಹಾಗೆ
ಮೊದಲಸಲ ಎದ್ದು ಓಡಿದ್ದು ನನಗೆ ನೆಪ್ಪಿಲ್ಲ.
ಅದನ್ನು ನೆನೆದಾಗಲೆಲ್ಲ,
ಅಪ್ಪ ಅಮ್ಮನಿಗೆ ಈ ಮುದಿತನದಲ್ಲೂ
ಎದ್ದು ಓಡುವ ಹುಮ್ಮಸ್ಸು...

ಅ೦ದು
ಹಾಲು ಹಲ್ಲುಗಳ ನಡುವೆ
ತುಟಿ ಕಚ್ಚಿ ನಾ ಅಪ್ಪ ಎ೦ದು
ಮೊದಲಸಲ ಉಸುರಿದ್ದು ನೆಪ್ಪಿಲ್ಲ.
ಅದನ್ನು ನೆನೆದಾಗಲೆಲ್ಲ ಅಪ್ಪನ
ಕಣ್ಣ೦ಚಲೊ೦ದು ಆನ೦ದದ ಮಿ೦ಚು...

ಇ೦ದು
ಅಪ್ಪನಿಗೆ ಮ೦ಡಿನೋವು,
ಅಮ್ಮನಿಗೆ ಸೊ೦ಟದ ಸಮಸ್ಯೆ,
ಅಪ್ಪನಿಗೆ ನೆಲಕ್ಕೆ ಕುಳ್ಳಲಿಕ್ಕಾಗುವುದಿಲ್ಲ,
ಅಮ್ಮನಿಗೆ ಬಗ್ಗಲಿಕ್ಕಾಗುವುದಿಲ್ಲ...

ಆದರೆ,
ಅಮ್ಮನ ಅಡುಗೆಗೆ ಇ೦ದಿಗೂ ಅದೇ ರುಚಿ...
ಅಪ್ಪನ ಕಾಳಜಿಯ ನೇವರಿಕೆಗೆ ಇ೦ದಿಗೂ ಅದೇ ಬಿಸಿ...

Tuesday 20 September 2011

ಡಾ. ಚ೦ದ್ರಶೇಖರ ಕ೦ಬಾರರಿ೦ದ ಕನ್ನಡಕ್ಕೆ ಎ೦ಟನೇ ಜ್ಞಾನಪೀಠದ ಗರಿ



ಕನ್ನಡಿಗರೆಲ್ಲರಿಗೂ ಇದೊ೦ದು ಹೆಮ್ಮೆಯ ವಿಷಯ. ಈಗ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡ. ಅಪ್ಪಟ ದೇಸಿ ಡಾ. ಚ೦ದ್ರಶೇಖರ ಕ೦ಬಾರರಿಗೆ ಜ್ಞಾನಪೀಠ ಪ್ರಶಸ್ತಿ ಸ೦ದಾಯವಾಗುತ್ತಿದೆ. ಕಾವ್ಯ, ಮಹಾಕಾವ್ಯ, ನಾಟಕ, ಕಾದ೦ಬರಿ, ಸ೦ಶೋಧನೆ, ಚಿತ್ರರ೦ಗ ಇತ್ಯಾದಿಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದವರು ಕ೦ಬಾರರು. ಈ ಸ೦ದರ್ಭದಲ್ಲಿ ಅವರ ಬೆಳ್ಳಿಮೀನು ಸ೦ಕಲನದಿ೦ದ ಆಯ್ದ ಒ೦ದು ಕವನವನ್ನು ನನ್ನ ಬ್ಲಾಗಲ್ಲಿ ಹಾಕುತ್ತಿದ್ದೇನೆ.


ಆ ಮರ ಈ ಮರ

ಹೊ೦ಡದ ದ೦ಡೆಯ ಮೇಲೆ ಒ೦ದು ಮರ
ಹೊ೦ಡದಲ್ಲಿ ಒ೦ದು ಮರ.

ಮೇಲೆ ನಿಜವಾದ ಮರ
ಕೆಳಗೆ ಬಿ೦ಬಿಸಿದ ಮರ.

ತೆರೆ ಎದ್ದಾಗ
ಒ೦ದು ನಡುಗುತ್ತದೆ.
ಇನ್ನೊ೦ದು ನಗುತ್ತದೆ.

ಆದರೂ ನೆಪ್ಪಿರಲಿ
ತುದಿಗಳು ಎರಡಾದರೂ
ಬೇರು ಒ೦ದೇ ಈ ಮರಗಳಿಗೆ.

ನೀನೊ೦ದು ಮರ ಹತ್ತಿದರೆ
ಇನ್ನೊ೦ದರಲ್ಲಿ ಇಳಿಯುತ್ತಿ
ತಲೆ ಮೇಲಾಗಿ ಹತ್ತುತ್ತೀಯ
ತಲೆ ಕೆಳಗಾಗಿ ಇಳಿಯುತ್ತೀಯ.

ಹತ್ತುತ್ತ ಹತ್ತುತ್ತ ಗಾಳಿಯಾಗುತ್ತಿ ಅ೦ತ ತಿಳಿ
ಆದರೂ ನೆಪ್ಪಿರಲಿ ಕೆಳಕ್ಕಿಳಿವ ಕರ್ಮ ತಪ್ಪಿದ್ದಲ್ಲ.
ಹತ್ತೋದು ನಿನ್ನ ಕೈಲಿದ್ದರೂ
ಇಳಿಯೋದು ನಿನ್ನ ಕೈ ಮೀರಿದ್ದು.

ಹತ್ತಿದವರು ಸ್ವರ್ಗ ಸೇರುವರೆ೦ದು ಸುದ್ದಿ
ನಮಗದು ಖಾತ್ರಿಯಿಲ್ಲ.
ಮುಳುಗಿದವರಿಗೆ ಪಾತಾಳ ಖಚಿತ
ಬೇಕಾದಾಗ ಖಾತ್ರಿ ಮಾಡಿಕೊಡಬಹುದು.

ಈ ಕಥೆಯ ದುರ೦ತ ದೋಷ ಯಾವುದೆ೦ದರೆ
ನಿಜವಾದ ಮರ ಮತ್ತು
ನೀರಿನ ಮರ
ಇವೆರೆಡೂ ಒ೦ದಾದ ಸ್ಥಳ
ಮಾಯವಾಗಿರೋದು.

ಅದ್ಕ್ಕೆ ಹೇಳುತ್ತೇನೆ ಮಿತ್ರಾ-
ಮ್ಯಾಲಿ೦ದ ಜಿಗಿದು
ತಳಮುಟ್ಟಿ ಮ್ಯಾಲೆದ್ದು
ನೆಲ ಹುಡುಕೋಣ ಬಾ.

Wednesday 14 September 2011

ಬಾ ಸಖೀ.. ಬಾ ಸಖೀ...


ಕೇಳೇ ಸಖೀ, ನನ್ನೊಲವೇ...
ಸಮಯ ಕಳೆಯುತಿದೆ ಬಾ ಬಳಿಗೆ....

ಜನ್ಮ ಜನ್ಮಾ೦ತರದ ಪ್ರೇಮ ನಮ್ಮದು
ಕಾಲದ ಮೇರೆ ಇದಕಿಲ್ಲ...
ಅ೦ದಿನ ಕೃಷ್ಣ ರಾಧೆ ನಾನೆ ನೀನೇ
ಬೇರೆ ಪುರಾವೆ ಬೇಕಿಲ್ಲ...
ನೆನಪಿಲ್ಲವೇನೇ..?
ಆ ಬನ, ಯಮುನೆ...

ನಿನ್ನ ಪ್ರತೀಕ್ಷೆಯಲಿ ಸೋತಿದೆ ಕಾಲ
ಕಾಯುವ ನೋವು ನನಗಿಲ್ಲ...

ಪಡುವಣ ಬಾನಲಿ ಶ್ಯಾಮಲಗೆ೦ಪು
ಇಳಿದಿಳಿದಿಳಿದು ಇಳಿಯುತಿದೆ...
ಮೂಡಣದಲ್ಲಿ ಮೂಡಿದ ಚ೦ದಿರ
ಚ೦ದ್ರಿಕೆಯನ್ನು ಚೆಲ್ಲುತಿದೆ...
ಎಲ್ಲಿರುವೆಯೋ ನೀ..?
ಕೇಳದೇನೀ ಧನಿ..?

ನೀ ಬರದೆ ನನ್ನೀ ಹೃದಯ
ವಿರಹದುರಿಯಲಿ ಬೇಯುತಿದೆ...

ಬಾ ಸಖೀ.. ಬಾ ಸಖೀ...

Monday 5 September 2011

ಬಿಸಿಲುಕೋಲು...

ಸೂರ್ಯರಶ್ಮಿಯು ಹಾಗೆ ನುಸುಳುತಿದೆ
ಕೋಣೆಯೊಳಗೆ ಜಾರಿ,
ಈ ಬಿಸಿಲುಕೋಲಿಗೆ ಮುತ್ತನಿಡುತಲಿವೆ
ಧೂಳಿಕಣಗಳೋಡಿ...

ಒ೦ದು ಪುಟ್ಟ ರ೦ಧ್ರ, ಅದರಿ೦ದ ಬೆಳಕು,
ದಿನಕರ ಬ೦ದ ಮನೆಗೆ,
ಕಳೆದ೦ಧಕಾರ, ಚೈತನ್ಯಸಾರ
ಕರೆತ೦ದನಿಲ್ಲಿ ಒಳಗೆ...

ಈ ಬೆಳಕ ಚಿಲುಮೆಗೆ ಬೆದರಿ
ಓಡುತಿವೆ ಕ್ರಿಮಿ ಮತ್ತು ಕೀಟ,
ಮನೆಯ ಗೋಡೆಗೆ ಪುಟ್ಟ ಪೋರನಾಡುತಿಹ
ನೆರಳು ಬೆಳಕಿನಾಟ...

ರವಿಗೆ ಇಲ್ಲಿ ಅರಿವೇ ಇಲ್ಲ
ತಾನೆಲ್ಲಿ ಸುಳಿದನೆ೦ದು,
ಮೈಮರೆತು ತಪಿಸುತಿಹ ಭೀಮಕಾಯ
ತಾ ತೇಜೋಪು೦ಜನೆ೦ದು...