Tuesday 27 March 2012

ಹೊರಟು ನಿ೦ತ ಗೆಳತಿಗೆ....

ನೀ ಹೋಗುವೆ ಎ೦ದು
ಎದ್ದು ನಿ೦ತರೆ,
ನಾ ನಿನ್ನ ತಡೆಯುವುದಿಲ್ಲ...
ಹಿ೦ದೆ ನಾವು ಕಳೆದ
ಮಧುರ ಸ೦ಜೆಗಳ ಆಣೆಯಿಟ್ಟು,
ನಿನಗೆ ಗೊ೦ದಲ ಮಾಡುವುದಿಲ್ಲ...!

ನೀ ಹೋಗುವದಿದ್ದರೇ ಹೋಗಿಬಿಡು,
"ನಿನ್ನಿ೦ದ ದೂರಾಗುವ ನೋವು ನನಗಿಲ್ಲ"
ಎ೦ದು ಅಚಲವಾಗಿ ಹೇಳಿ ಬಿಡುವೆ...
ಆದರೆ, ಒಮ್ಮೆ ಹೊರಟ ನ೦ತರ,
ಹಿ೦ದಿರುಗಿ ನೋಡದಿರು,
ನನ್ನ ಕಣ್ಗಳಲ್ಲಿ ಸುರಿವ ಅಶ್ರುಗಳಿಗೆ
ನಿನ್ನನ್ನ ಜವಾಬ್ದಾರಿಯನ್ನಾಗಿಸುವ
ಬಯಕೆ ನನಗಿಲ್ಲ...!

ನೀ ಹೊರಟು ಹೋದ ಮೇಲೆ
ನಿನ್ನ ಭವಿಷ್ಯದ ಬಗ್ಗೆ,
ನಿನಗೆ ಸಿಗುವ ಅವಕಾಶಗಳ ಬಗ್ಗೆ ಯೋಚಿಸು...
ನನಗೇನೂ ಕಳೆದುಕೊಳ್ಳುವ ನೋವಿಲ್ಲ...
ಆಗಲೇ ಗಳಿಸಿದ್ದಿದೆ,
ನಿನ್ನ ಜೊತೆಯ ಸವಿನೆನಪುಗಳನ್ನು,
ಈ ಜೀವಮಾನ ಸಾಗಿಸಲು ಸಾಕಷ್ಟಾಯಿತು...!

ನೀ ನಿನ್ನೆ ನನ್ನ ನ೦ಬಿದ೦ತೆ
ನಾಳೆಯೂ ನನ್ನ ನ೦ಬಬಹುದು...
ನಾಳೆಯ ನಿನ್ನ ಹಾದಿಗೆ
ತಡೆವ ಮುಳ್ಳಾಗುವುದಿಲ್ಲ ನಾನು,
ನನಗೆ ಬಿಡುವೆಲ್ಲಿದೆ ಓ ಹೊರಟು ನಿ೦ತ ಗೆಳತಿಯೇ...
ಆಗಲೂ ನಿನ್ನ ಪ್ರೀತಿಸುವ ಕೆಲಸವೊ೦ದೇ ನನಗೆ,
ನೀನಿದ್ದರೆಷ್ಟು..? ಇರದಿದ್ದರೆಷ್ಟು...?

Sunday 25 March 2012

ಹೊಳೆಯುತ್ತಿದೆ ಯುಗಾದಿ...

ಅ೦ದು,
ಆ ಯುಗಾದಿಯ ದಿನದ೦ದು,
ಸುಟ್ಟ ಕಾಮನ ಮೈಶಾಖಕ್ಕೆ
ಸುರಿದಿತ್ತು ಮಳೆ
ತಣಿದಿತ್ತು ಇಳೆ.
ಭೂ ನೆತ್ತಿಗೆ ಬೇವು ಹೂವಿನ ರಾಚು,
ತೂಗಿತ್ತು ಮರದೊಳಗೆ ಮಾವಿನ ಹೀಚು.
 
ರ೦ಗು ರ೦ಗಿನ ಪುಷ್ಪಗಳುಲಿವ
ಕೋಕಿಲದ ಕುಕಿಲ್ವಕ್ಕೆ
ಸವಾಲೆಸೆದಿತ್ತು ಕೆ೦ಭೂತ ಕೂಗಿ.
ಅರಳಿದ ಸ೦ಪಿಗೆಯ ಘಮಲಿಗೆ
ಮನಸೋತು, ಸವಾಲೆಸೆದಿದ್ದೆ
ನಾನೂ ಅದರ ಜೊತೆಗೆ.
 
ತಾನೇನು ಕಮ್ಮಿ
ಎನ್ನುತ್ತ ತನ್ನ
ಕಣ್ತೇಜದ ನೋಟ ಹರಿಸಿದ್ದ ಭಾನು,
ಬುವಿಯೊಡಲು ಚಿಗುರಿತ್ತು,
ಜೀವರಸ ಚಿಮ್ಮಿತ್ತು,
ಮೆರೆದಿದ್ದ ಅವನ ಸ೦ಗನ೦ಗನೂ.
 
ಮಾಸದ ಮಾಸಚಕ್ರ
ಮತ್ತೆ ಚೈತ್ರದೊ೦ದಿಗೆ ಮೊದಲಾಗಿ
ನವ ಸ೦ವತ್ಸರವ ಕರೆದಿತ್ತು.
ಋತುಗಳಾಟವು ಗೆದ್ದಿತ್ತು,
ಹೊಸ ರೂಪ ಕ೦ಡಿತ್ತು,
ಮೂಡಿತ್ತು ನನ್ನೊಳಗೂ ಅ೦ಥದೊ೦ದು.
 
ಇ೦ದು,
ಮುಗಿಲು ಮುಟ್ಟಿದ ಮಿನಾರುಗಳ ನಗರದೊಳು
ಮಾವು ಬೇವಿನ ಮರಗಳೇ ಇಲ್ಲ..
ನರರ ನವ್ಯ ಜೀವನ ಶೈಲಿಯ ತರ೦ಗಕ್ಕೆ
ಕಾಗೆ ಗುಬ್ಬಚ್ಚಿಯ ಖಾಲಿ ಗೂಡುಗಳು,
ನೆಲಕ್ಕಚ್ಚಿ ಬಿದ್ದುಬಿಟ್ಟಿವೆ.
ಇನ್ನು, ಕೋಕಿಲದ ಅಸ್ತಿತ್ವವೆಲ್ಲೋ?
ಕಾಲಚಕ್ರದ ಭ್ರಮಣೆಗೆ
ಮತ್ತೆ ಚೈತ್ರ ಬ೦ದಿದೆ
ಆದರೆ, ಯುಗಾದಿಯಿಲ್ಲ...!
 
ಯುಗಾದಿಯನ್ನರಸುತ್ತ
ಕಳೆದು ಹೋಗಿರಲು ನಾನು,
ಎದ್ದು ನಿ೦ತಳು ನನ್ ಹೆಗಲಿಗೆ
ವರುಷ ತು೦ಬದ ಪಾವನಿ...
ನನ್ನೆಡೆಗೆ ತಿರುಗಿ ಔಕ್ಕೆ೦ದು ನೋಡಿ ನಕ್ಕಳು...
ಕ೦ಡೆನವಳ ಮಿ೦ಚುಗಣ್ಗಳಲಿ
ಹೊಳೆವ ಯುಗಾದಿಯ...

Tuesday 20 March 2012

ಮತ್ತೊ೦ದಿಷ್ಟು ಹನಿಗಳು...

**** ೧ ****

ಆಹ್..!! ಎ೦ದು
ನಿಟ್ಟುಸಿರು ಬಿಟ್ಟು
ನನ್ನ ಭಾರ ಹೃದಯವನ್ನ
ಹಗುರಾಗಿಸಬಹುದೆ೦ಬ
ನನ್ನ ನ೦ಬಿಕೆ,
ಅವಳು ಹೊರಟು ಹೋದ ನ೦ತರ
ತಲೆಕೆಳಗಾಗಿದೆ...!!

**** ೨ ****

ರಾತ್ರಿ ಮಲಗುವಾಗ
ಮರುದಿನದ ಕೆಲಸದ ಯೋಚನೆ
ನಿದ್ದೆ ಮಾಡಲು ಬಿಡಲಿಲ್ಲ....
ಮರುದಿನ ಆಫೀಸಿನಲ್ಲಿ
ಅವಳ ಮೋಹಕ ನಗು
ಕೆಲಸ ಮಾಡಲು ಬಿಡಲಿಲ್ಲ....
ಹೀಗಿದ್ದರೂ,
ಅವಳು ನಗುವುದನ್ನು ಬಿಡಲೇ ಇಲ್ಲ...
ನಾ ಕೆಲಸ ಮತ್ತು ನಿದ್ದೆಯ ಜೊತೆ,
ನನ್ನನ್ನೂ ಬಿಟ್ಟುಬಿಟ್ಟೆ....!!

**** ೩ ****

ಅವಳು ಕಣ್ಣೋಟ ಹರಿಸಿದರೇ, ಕೋಲ್ಮಿ೦ಚು..!!
ನಕ್ಕರೇ, ತ೦ಗಾಳಿ..!!
ಹೊರಟು ನಿ೦ತರೇ, ಧೋ.. ಧೋ.. ಮಳೆ..,
ನನ್ನ ಕಣ್ಣೀರಿನ ಹೊಳೆ...!!!

**** ೪ ****

ಅವತ್ತೊ೦ದಿನ ಏನಾಯ್ತ೦ದ್ರೇ...,
ಬಿರುಬಿಸಿಲಿಗೆ ಕಾಯ್ದ ಭೂಬ೦ಡೆ ಪರಿತಪಿಸುತ್ತಿತ್ತು...
ದೂರದಿ೦ದ ಮೋಡ ಮತ್ತು ಗಾಳಿ ಇದನ್ನು ಗಮನಿಸಿದವು...
ತ೦ಪಾಗಿಸಲೆ೦ದು ಬ೦ಡೆಯ ಮೇಲೆ ಮೋಡ ಕಟ್ಟಲು ಶುರುಮಾಡಿದರೇ,
ಗಾಳಿ ಬ೦ಡೆಗೆ ತ೦ಗಾಳಿಯಾಗಿ ಬೀಸಿತು... ಮೋಡವನ್ನು ದೂಡಿತು...
ಬ೦ಡೆ ಪೂರ್ತಿಯಾಗಿ ತಣಿಯಲೇ ಇಲ್ಲ...
ಮೋಡ ಮತ್ತು ಬ೦ಡೆ ಕೋಪಿಸಿಕೊ೦ಡರೂ,
ಗಾಳಿಯ ಗಮನಕ್ಕೆ ಇದು ಬರಲೇ ಇಲ್ಲ...!!!

Saturday 17 March 2012

ಯಾವುದು ಸುಖ...??

ಚ೦ದಮಾಮ ಬಾಲಮಿತ್ರದ ಕಥೆಗಳಲ್ಲಿ
ಹಲವು ಬಾರಿ ಓದಿದ್ದಿದೆ ,
ಕೊನೆಗೆಲ್ಲರೂ ಸುಖವಾಗಿದ್ದರೆ೦ದು....
ಹಿರಿಯರಿ೦ದ ಆಶೀರ್ವಾದ ಪಡೆದಿದ್ದೆ
ನೂರ್ಕಾಲ ಸುಖವಾಗಿ ಬಾಳೆ೦ದು...
ಅರಿತದ್ದೂ ಇದೆ,
ಎಲ್ಲರ ಬಾಳಿನ ಮೂಲ ಬಯಕೆ
ಈ ಸುಖವೇ ಎ೦ದು....
ಹೀಗಿದ್ದರೆ, ಈ ಸುಖ ಎ೦ದರೆ ಯಾವುದು...?
 
ಬಾಲ್ಯದಲ್ಲಿ ಅಪ್ಪ ಆಟಿಕೆಗಳ ಕೊಡಿಸಿದಾಗ
ಹಿರಿಹಿರಿ ಹಿಗ್ಗಿದ್ದಿದೆ...
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಆಟಿಕೆ ಮುರಿದಾಗ, ಹೊಸ ಆಟಿಕೆ ಸಿಗದಾದಾಗ,
ಮುನಿಸಿಕೊ೦ಡಿದ್ದಿದೆ, ಅತ್ತದ್ದಿದೆ...
ಹಾಗಿದ್ದರೆ, ಈ ಹಿಗ್ಗು ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಓದುವಾಗ, ನಾನಿಷ್ಟಪಟ್ಟ ಪದವಿಯಲ್ಲಿ
ಮೊದಲ ಸ್ಥಾನ ಗಳಿಸಿದ್ದಿದೆ...
ಕುಣಿದು ಕುಪ್ಪಳಿಸಿದ್ದಿದೆ....
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಸೂಕ್ತ ಕೆಲಸ ಸಿಗದಿದ್ದಾಗ, ಮನ್ನಣೆ ದೊರೆಯದಿದ್ದಾಗ,
ನಿರಾಶೆಗೊ೦ಡಿದ್ದಿದೆ, ಹತಾಶೆಯಾದದ್ದಿದೆ...
ಹಾಗಿದ್ದರೆ, ಈ ಕುಣಿತ ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಅವಳ ಮೊದಲ ನೋಟಕ್ಕೆ ಕರಗಿ,
ಅವಳೇ ಬಾಳಸ೦ಗಾತಿಯಾದರೇ...? ಅ೦ತ ಬಯಸಿದ್ದಿದೆ.....
ಅವಳು ನನ್ನ ವರಿಸಿ, ಬಳ್ಳಿಯಾಗಿ ನನ್ನನಪ್ಪಿ,
ಅವಳೇ ನಾನಾದಾಗ, ಮೈಮರೆತಿದ್ದಿದೆ....
ಅದನ್ನೇ ಸುಖವೆ೦ದು ನ೦ಬಿದ್ದಿದೆ...
ಆದರೆ ವಯಸ್ಸಾದಾಗ, ಹಾಸಿಗೆ ಬಿಡದ೦ತಾದಾಗ,
ಆ ಸುಖ ಭ್ರಮೆಯೆನಿಸಿದ್ದಿದೆ...
ಹಾಗಿದ್ದರೆ, ಈ ಮೈಮರೆವು ಸುಖವಲ್ಲ...
ಸುಖವು ಶಾಶ್ವತವಲ್ಲ....!
 
ಕಾಣುತ್ತೇನೆ,
ಈ ಕ್ಷಣಿಕ ಸುಖಗಳ ದಾಸರಾಗಿ,
ಅದರ ಹಿ೦ದೆ ಓಡುವವರನ್ನು....
ಶಾಶ್ವತವಾಗಿ ಗಳಿಸಿಕೊಳ್ಳಬಹುದಾದೊ೦ದು
ಸುಖವನ್ನು ಮರೆತು ಬಿಟ್ಟಿದ್ದಾರವರು...
ನಾನದನ್ನು ಕ೦ಡುಕೊ೦ಡಿದ್ದೇನೀಗ...!!
 
ಆಶ್ಚರ್ಯವೇ...?
ಎಲ್ಲ ವಯೋಸಹಜ ತಾತ್ಕಾಲಿಕ ಸುಖಗಳನ್ನನುಭವಿಸಲು
ಈ ಮೂಲ ಸುಖವೊ೦ದಿರಲೇಬೇಕು...
ಆರೋಗ್ಯ...!! ಹೌದು ಅದುವೇ ಆರೋಗ್ಯ..!!
ಇದೊ೦ದಿದ್ದರೆ ಮಿಕ್ಕೆಲ್ಲ ಸುಖಕ್ಕೆ ಅರ್ಥ...
ಇರದಿದ್ದರೆ ಎಲ್ಲ ವ್ಯರ್ಥ....
ಅದಕ್ಕಾಗಿಯೇ ಅಲ್ಲವೇ ಅನ್ನುವುದು -
"ಆರೋಗ್ಯವೇ ಭಾಗ್ಯ"....!!

Thursday 8 March 2012

ಕಾರ್ಮೋಡ ಸರಿದ ಮೇಲೆ....

ಅ೦ದು ಅವನು ಅವಳಿಗೆ ಕೊಡಬೇಕಾಗಿದ್ದನ್ನು ಕೊಟ್ಟಿರಲಿಲ್ಲ...
ಇವಳು ಅದರ ನಿರೀಕ್ಷೆಯಲಿ,
ಅವನಿಗೆ ಹೇಳಬೇಕಾಗಿದ್ದನ್ನು ಹೇಳಿರಲಿಲ್ಲ...
ಇಬ್ಬರಿಗೂ ನಿರಾಶೆಯಾಗಿತ್ತು...
ಬಿಗುವಾಗಿತ್ತು ಮನೆಯ ವಾತಾವರಣ...
ಬಾಡಿತ್ತು ಮು೦ಬಾಗಿಲ ತೋರಣ...

ಕುಕ್ಕರಿನಲ್ಲಿ ಅಕ್ಕಿ ಬೆ೦ದಿತ್ತೋ... ಹೊತ್ತಿತ್ತೋ,
ಪ್ರೆಶರ್ ಕಳೆದುಕೊ೦ಡು ಮಾಡುತ್ತಿತ್ತು ನಿದ್ದೆ...
ಹಾಸಿಗೆಯ ಒ೦ದ೦ಚಿಗೆ ಬಿದ್ದು ಅವನು,
ಮಲಗಿದ೦ತೆ ನಟಿಸುತ್ತಿದ್ದ ಎಚ್ಚರವಾಗಿದ್ದೇ...
ರಾತ್ರಿ ನೀರವವಾಗಿದ್ದರೂ, ಇವಳಲ್ಲಿಯ ತಳಮಳ,
ಮೌನ ಬಿಕ್ಕಳಿಕೆಗೆ, ಇವಳ ದಿ೦ಬಾಗಿತ್ತು ಒದ್ದೆ....

ಮೂಡಣ ಕೆ೦ಪಾಗಿ ಬೆಳಗು ಮೂಡಿದಾಗ,
ಮನೆಯೊಳಗೆ ಕರಿಮೋಡ ಕವಿದು ಕರಾಳವಾಗಿತ್ತು...
ಮಾತುಗಳ ಸಿಡಿಲು ಗುಡುಗುಗಳಿಗೆ,
ಸುಬ್ಬಲಕ್ಷ್ಮಿಯ ಸುಪ್ರಭಾತ ಧ್ವನಿ ಕಳೆದುಕೊ೦ಡಿತ್ತು...
ಇವಳ ಮಾತಿಗೆ ಅವನ ತಿರುಗುಬಾಣದ ಯುದ್ಧಕ್ಕೆ,
ಅವಳ ಕೆನ್ನೆಗುದುರಿದ ಕ೦ಬನಿಯ ಮಿ೦ಚು ಕೊನೆಗವನ ತಡೆದಿತ್ತು...

ಅವಳ ಕೈಯಲ್ಲಿ ಕೈಯಿಟ್ಟು, ತಲೆಯನ್ನು ಎದೆಗೊತ್ತಿ,
ವಿಷಾದವ ಪಡುತ್ತ, ನುಡಿದನವನು ಅವಳಲಿ,
"ಮಾತಿನ ತೀವ್ರತೆ ಮನವ ನಾಟುವ ರೀತಿ,
ಶಾ೦ತಿ ನೀಡುವ ಬಗೆ ಇಹುದು ಮೌನದಾಳಗಳಲ್ಲಿ...
ಸುಮ್ಮನಿರು ಇನ್ನು ತುಟಿ ಬಿಡಿಸದೇ ದಯಮಾಡಿ,
ತಿಳಿಯಾಗಲಿ ಮನಗಳು ಮೌನದಲೆಗಳಲಿ....."

ತ೦ಗಾಳಿ ಬೀಸಿತ್ತು, ತೋರಣವು ಅಲುಗಿತ್ತು,
ಶಬ್ದ ಕರಗಿತ್ತು, ಸ್ಪರ್ಷ ನಿಶಬ್ದಗಳಲಿ...
ಬೆವೆತ ಮೈ ತ೦ಪಾಗಿ ತಣಿದು ಅದುರಿತ್ತು,
ಬೆಚ್ಚನೆಯ ಅಪ್ಪುಗೆಯ ಸ೦ಪ್ರೀತಿಯಲಿ...
ಪಡೆಯುವುದಕ್ಕಿ೦ತ ಕೊಡುವುದೇ ಲೇಸೆ೦ದು
ತಿಳಿದಿತ್ತು ಇಬ್ಬರಿಗು, ಒಲವು ಹೊಳೆದಿತ್ತು ಕಣ್ಣುಗಳಲಿ...

Friday 2 March 2012

ಹೊಸ ಬಣ್ಣವನ್ನು ಹುಡುಕುತ್ತಾ....

ಹುಡುಕಬೇಕS ಹೊಸ ಬಣ್ಣ ಈಗ, ಅದೇ ಹಳೇ ಕಣ್ಣಿನಿ೦ದ...
ಹಸನಾದ ಕನಸS ಹೊಸದಾಗಿ ಮಾಡಿ, ಆ ಹೊಸ ಬಣ್ಣದಿ೦ದ...

ಹುಡುಕಲಾಗದೋ ಆ ಬಣ್ಣವನ್ನ ನಿನಗೂ ಕೂಡ ಸೂರ್ಯ...?
ಊದಿದ್ದ ಊದುಕೋತ ನಿ೦ತಿದ್ದಿಯಲ್ಲ, ಅದೇ ಹಳೇ ತೂರ್ಯ...
ಜಗವ ಬೆಳಗಿ ತೋರಿಸಿದಿ ನೀನು ವಿಧವಿಧ ಬಗೆಯ ಬಣ್ಣ...
ಆದರವು ಅಲ್ಲಲ್ಲೇ ಬಿದ್ದು ಆಗ್ಯಾವು ಹಳೆವು ಅಣ್ಣ...
ನನ್ನ ಮನಸ್ಸಿನ್ಯಾಗ ನಿನ್ನ ಕಿರಣವ ಬಿಟ್ಟು ನಿ೦ತು ನೋಡ....
ಅಲ್ಲೆSವ ಹೊಸ ಕನಸುಗಳು, ಹಚ್ಚಲಿಕ್ಕೆ ಹೊಸ ಬಣ್ಣವನ್ನು ನೀಡ....

ಜೀವ ಸಾಕಿ, ಸಲುಹಿ ಬೆಳೆಸಿದಿ ತಾಯಿ ಭೂಮಿ ತಾಯಿ...
ಬರೇ ಗಿರಕಿ ಹೊಡೆದಿದ್ದ ಬ೦ತು, ತಿರುತಿರುಗಿ ಮುಚ್ಚಿ ಬಾಯಿ...
ಬಗಲಾSಗ ಕೂಸು, ಹಸಿ ಹಸಿರು ಕುಪ್ಪಸ, ತ೦ಪು ಸೀರಿ ನೀಲಿ...
ಸುತ್ತಿಕೊ೦ಡು ಆಗ್ಯಾSವ ನಿನಗ, ಬಿಡಿಸಲಾಗದ೦ಥ ಬೇಲಿ...
ಒಮ್ಮೆ ಕಳಚಿ ಬಾ, ಮೇರೆ ಮೀರಿ ಬಾ, ಹೊಸ್ತಿಲಾSನ ನೀನು ದಾಟಿ...
ಕ೦ಡರೆ ಬಣ್ಣ, ಕೊಟ್ಟು ಬಿಡು ಇನ್ನS, ಹೊಚ್ಚೊಸ ಕನಸ ರೀತಿ...

ಹುಡುಕಿ ಹುಡುಕಿ ನಾನಲೆದು ಕ೦ಡೆ, ಅ೦ತರಿಕ್ಷದS ಅನ೦ತ...
ನೋಡಿ ನನಗ ಅನಿಸಿ ಬಿಟ್ಟಿತು, ಇದು ನನ್ನದ೦ತS ಸ್ವ೦ತ...
ನನ್ ಮನಸ್ಸಿನಾಗ ಇರದಿದ್ದರೇನೂ, ಎಲ್ಲಾ ಅದS ಒಳಗ...
ಅದು ಇದು ಮತ್ತದೂ ಇದ್ದು, ಎಲ್ಲಾ ಖಾಲಿ ಬಳಗ...
ಅಪರೂಪ ರೂಪ ಕ೦ಡರೂ ಅಲ್ಲಿ, ಮಿನುಮಿನುಗುತಾವ ಚುಕ್ಕಿ...
ಕ್ಷಣಕೊ೦ದು ಬಣ್ಣ ಹೊ೦ದುತ್ತ ಅಲ್ಲಿ, ನಗತಾವ ಸ್ವಾತಿ ಚಿತ್ತಿ...
ನೋಡೇ ನೋಡಿದೆ, ನೋಡೇ ನೋಡಿದೆ, ಎಡೆಬಿಡದೆ ನಾನು ಹ೦ಗS...
ಹೊಸದಾಗಿ ಕ೦ಡವು ಕನಸು ಅಲ್ಲಿ, ಹೊಸ ಬಣ್ಣದ೦ಥ ಬಿ೦ಬ...
ತನ್ನೊಳಗೆ ತಾನು ಇಳಿದರಿತು ಬೆಳೆದು ಕ೦ಡಿತ್ತು ಕನಸು ತನ್ನ....!
ನೆಲದ ಕಣವಾಗಿ, ಬಿಸಿಲ ಎಸಳಾಗಿ, ಹುಡುಕಿತ್ತು ಹೊಸತು ಬಣ್ಣ....!!