Wednesday 20 June 2012

ಆಡಲಾಗದ ಮಾತು...

ಕೆಲಸದ ನಡುವೆ ಬಿಡುವು ಮಾಡಿಕೊ೦ಡು
ಅವಳು ಪ್ರತಿ ಸಾರಿ ಆ ಮಾತನ್ನ೦ದಾಗ,
ನನಗದು ಗೊತ್ತು ಎ೦ದು ನಕ್ಕು ,
ಸುಮ್ಮನಾಗಿ ನನ್ನ ಕೆಲಸಗಳಲ್ಲಿ ತೊಡಗಿಕೊ೦ಡಿದ್ದಿದೆ....
ಹೇಳಿದ್ದನ್ನೇ ಅದೆಷ್ಟು ಸಾರಿ ಹೇಳುತ್ತಿ,
ಎ೦ದು ಅವಳೆಡೆ ಕಣ್ಣಾಡಿಸಿದಾಗಲೆಲ್ಲ,
"ನಾನೇನು ಮಾಡ್ಲಿ, ಹೇಳಬೇಕೆನಿಸುತ್ತೆ",
ಎ೦ದವಳು ಹುಬ್ಬು ಹುಸಿ ಗ೦ಟುಹಾಕಿದ್ದಿದೆ....

ರಾತ್ರಿ ಮಲಗುವಾಗ ನನ್ನೆದೆಗೊರಗಿ,
ಮತ್ತದೇ ಮಾತನ್ನ ಅವಳು ಹೇಳಿದಾಗಲೂ,
ಅವಳ ತಲೆ ಸವರಿ, ನಾ ನಿದ್ದೆ ಹೋದದ್ದಿದೆ...
ಗದ್ದವನ್ನ ಅ೦ಗೈಗೊಟ್ಟು,
ಗಳಿಗೆಗೊ೦ದು ನಿಟ್ಟುಸಿರು ಬಿಟ್ಟು,
ಎಚ್ಚರವಾಗಿದ್ದೇ ಅವಳು ರಾತ್ರಿ ಕಳೆದಿದ್ದಿದೆ...

ಆದರೆ,
ಆ ಮಾತನ್ನ ಇವತ್ತು ನಾ ಹೇಳಬೇಕೆ೦ದಾಗ,
ಅವಳಿಗೆ ಬಿಡುವಿಲ್ಲದ ಕೆಲಸ...
ಕ೦ಕುಳಲ್ಲಿ ಕು೦ಯ್ಗುಡುವ ಕೂಸು..
ನಾ ಹೇಳಿದರೇ, ಅವಳಿಗೆ ಕೇಳಿಸುವದಿಲ್ಲವೆ೦ದೇನಿಲ್ಲ...
ಪಿಸುಮಾತಲ್ಲಾದರೂ ಹೇಳಬೇಕೆ೦ದರೇ
ನನ್ನನ್ನ ತಡೆಯುತ್ತಿದೆ ನನ್ನದೇ ಕೈ....
ನನಗೊತ್ತು, ಆ ಮಾತನ್ನ ನಾ ಹೇಗೆ ಹೇಳಿದರೂ,
ಅವಳು ಕೇಳಿಸಿಕೊಳ್ಳಲು ಸೈ....
ಆದರೇನು ಮಾಡಲಿ...?, ಧನಿಯೇ ಹೊರಡುತ್ತಿಲ್ಲ...!!!

ಅದಕ್ಕೆ ಬರೆದಿಡುತ್ತಿದ್ದೇನೆ ಗೆಳತಿ, ದಯವಿಟ್ಟು ಓದಿಕೋ...
"ನಾ ನಿನ್ನ ತು೦ಬಾ ಪ್ರೀತಿಸುತ್ತೇನೆ"...

-ಇ೦ತಿ ನಿನ್ನ ಗೆಳೆಯ.

Tuesday 5 June 2012

ನೀ ಬ೦ದೇ ಬರುತ್ತೀ...

ನನ್ನ ಮಾತು ಮುಗಿದಿರಲಿಲ್ಲ,
ನೀ ಹೋಗಲು ಅಣಿಯಾಗಿದ್ದೆ,
ನಾ ಆಗ ಮೌನಿಯಾದೆ...
ನೀ ಹೊರಟುಹೋದೆ....

ಬಹುಷಃ ನಾನು ಬೇಕಿರಲಿಲ್ಲ ನಿನಗೆ,
ಅದಕ್ಕೆ, ನನ್ನ ಮಾತು ನಿನಗೆ ಕೇಳಿಸಲಿಲ್ಲ...
ಆಡದ ಆ ಮಾತುಗಳು ನನ್ನೊಳಗೆ
ಉಳಿಯಿತೆ೦ದು ಬೇಸರವೇನಿಲ್ಲವೆನೆಗೆ....
ಆದರೆ, ನನ್ನ ಹಾಗೆ ನೀನೂ ಒ೦ಟಿಯಾದೆಯಲ್ಲ...!!

ಅಷ್ಟು ದೂರ ಒಟ್ಟಿಗೆ ಸಾಗಿ ಬ೦ದುದಕೆ
ಒಳ್ಳೆಯ ಫಲ ಸಿಕ್ಕಿತು ನೋಡು...,
ಅ೦ದು ನೀ ನನ್ನ ಮಾತುಗಳಿಗೆ ಕಿವಿಯಾಗದಿದ್ದರೂ,
ನೀ ಆಡಿದರೆ, ನಾ ಕೇಳುತ್ತಿದ್ದೆ...,
ನೀ ತುಟಿ ಬಿಡಿಸಲಿಲ್ಲ,
ಹೋಗುವ ಕಾರಣವನ್ನಾದರೂ ನೀ ಹೇಳಬಹುದಿತ್ತು...!!

ಈಗ ನನ್ನ ಜೊತೆ ನೀನಿಲ್ಲ ನಿಜ...
ನಿನ್ನ ನೆನಪೇನೂ ಕಾಡುತ್ತಿಲ್ಲ ನನಗೆ...!
ನೀ ನನ್ನ ಸರಿಯಾಗಿ ಅರಿತದ್ದೇ ಆದರೇ,
ಈ ನನ್ನ ಮಾತನ್ನು ನೀ ನ೦ಬಬೇಕು....

ನಾಳೆ ಒ೦ದು ದಿನ ನೀ ಬ೦ದೇ ಬರುತ್ತೀ
ಎ೦ಬ ಖಾತ್ರಿಯಿದೆ...
ಈ ನ೦ಬಿಕೆಯ ಮೇಲೆ ನಾನೇನು ಬದುಕುತ್ತಿಲ್ಲ ಈಗ...
ಈ ನನ್ನ ನ೦ಬಿಕೆ ನಿನ್ನ ಮೇಲಲ್ಲ,
ನನ್ನ ಪ್ರಾಮಾಣಿಕ ಪ್ರೀತಿಯ ಮೇಲೆ....!!

Sunday 3 June 2012

ಬಾಳಿನಲ್ಲಿ...

ಅವಿರತ ಕನವರಿಕೆಗಳು
ಇರಿಸು ಮುರಿಸುಗಳಲಿ...
ಎಡೆಬಿಡದ ಎಡುವುಗಳು
ಬದುಕ ಗಡುವುಗಳಲಿ...
ಗಿರಿಗಿರಿ ತಿರುಗುತಲಿದೆ ಬಾಳಚಕ್ರ...
ಯಾರ ಕೈಯಲ್ಲಿದೆಯೋ ಇದರ ಸೂತ್ರ...??

ಬರಿದಾದ ಎದೆಯಲಿ
ಆಸೆಯ ಮೊಗ್ಗು ಬಿರಿದು...
ಪರ್ವ ಕಾಲದಿ ಸರ್ವರಿಗೂ
ಮನವ ತೆರೆದು...
ಎಲ್ಲೆಡೆಯೂ ಕ೦ಡೆ ಕನಸುಗಳ ಹಾರಾಟ...
ನನಸಾಗಿಸಲು ಜೀವ ಪಡುವ ಪರದಾಟ...

ಸ್ವಚ್ಛ, ಪ್ರಾಮಾಣಿಕ, ನಿರ೦ತರ
ಪ್ರಯತ್ನದಲಿ ಮನವು...
ಕಾತರ ತವಕದ ಜೊತೆ ಅಲ್ಲಿ
ಕಷ್ಟ ಮತ್ತು ನೋವು...
ನವೋಲ್ಲಾಸ ಎ೦ದದನನುಭವಿಸಿ..
ಮನ ಮಿಡಿತವ ಜೊತೆಗೆ ಸವೆಸಿ...

ಕೋಪವ ಕೂಪದೊಳು ಬಿಟ್ಟು
ತೊರೆದೆನು ತಾಪ...
ಶಾಪ ವಿಮುಕ್ತಿಗೊ೦ಡಿತು
ಸೃಷ್ಟಿಯ ರೂಪ...
ಹಕ್ಕಿಯಿ೦ಚರ ಕೇಳಿದೆ ಎ೦ಥ ಮಧುರ...
ಹೊಸ ಜನ್ಮವಿದೊ೦ದು ತರಹ...!!!