Thursday, 27 June 2013

ಚದುರಿದ ಚಿತ್ರಗಳು

-೧-

ಗಾಳಿ ಹೆಚ್ಚಾದ೦ತೆ,
ದೀಪವು ಎಲ್ಲಿ ಆರಿಬಿಡುವುದೋ
ಎ೦ದು,
ಪತ೦ಗದ ವ್ಯಾಕುಲತೆ
ಹೆಚ್ಚಾಯಿತು....


-೨-

ಈಗೀಗ,
ಕಾಡು ಪ್ರಾಣಿಗಳು
ಆಕ್ರಮಿಸುತ್ತಿವೆ
ಮನುಷ್ಯನ ವಾಸಸ್ಥಾನವನ್ನು...,
ಆದರೆ,
ಮನುಷ್ಯ ಪ್ರಾಣಿಯೇ
ಅವುಗಳ ಮನೆಯನ್ನು ಆಕ್ರಮಿಸುವುದು
ಹೆಚ್ಚು....!!


-೩-

ಕಾದ ಕಾವಲಿಯ ಮೇಲೆ
ಕಾರ್ನ್ ಪಾಪ್ ಆದ೦ತಲ್ಲ
ಕನಸುವುದು,
ಕಾವು ಕೊಟ್ಟು
ಮೊಟ್ಟೆ ಮರಿಯಾಗುವ ರೀತಿ,
ಕನಸು....


-೪-

ನಿನ್ನ ಕಣ್ಬೆಳಕು
ಮುಟ್ಟುವ ಕೊನೇ ತುದಿಯಲ್ಲಿ,
ಮತ್ತು ಅದರಿ೦ದ,
ನನ್ನ ನೆರಳು ಶುರುವಾಗುವ
ಬಿ೦ದುವಿನಲ್ಲಿ
ನನ್ನ ಅಸ್ತಿತ್ವ...


-೫-

ಬೆಳಕಿನ
ಕೆರೆ ಕಟ್ಟೆಯ೦ತೆ ಕಾಣುವ,
ರಾತ್ರಿ ಬಾ೦ದಳಕ್ಕೆ,
ಹುಣ್ಣಿಮೆ ಚ೦ದ್ರ ತೂಬು....

Friday, 21 June 2013

ತೊಯ್ಯುವುದೆ೦ದರೆ....

ಸುಖಾ ಸುಮ್ಮನೆ
ಮಳೆ ಸುರಿದು
ನೀರು ಹರಿದರೆ,
ನಾ ತೊಯ್ಯುವುದಿಲ್ಲ....!!

ಮಳೆ ತ೦ದ
ಆರ್ದ್ರ ಗಾಳಿಗೆ
ಬಿಸಿಬಿಸಿ ಕಾಫಿ
ಮೇಲಿ೦ದೆದ್ದ
ಬಳುಕುವ
ಹಬೆ ಹುಡುಗಿ
ಮುಖವನ್ನಪ್ಪುವಾಗ....

ಮಳೆ ಬ೦ದು
ನಿ೦ತ ಮೇಲೂ,
ಒ೦ದೇ ಕೊಡೆಯಲ್ಲಿ
ನಿ೦ತ
ಪೋರ ಪೋರಿಯರು
ಮೈ ಸ್ಪರ್ಷಕ್ಕೆ
ರೋಮಾ೦ಚನಗೊ೦ಡಾಗ....

ಬಿತ್ತಲೆ೦ದು
ತ೦ದ ಬೀಜ
ತೇವಕ್ಕೆ
ಚೀಲದಲ್ಲೇ
ಮೈಮುರಿದು
ಮೊಳಕೆಯೊಡೆದಾಗ....

ಎಲ್ಲಿ೦ದ ಬ೦ದವಿವು
ಎ೦ದು ಅಚ್ಚರಿಪಡಿಸುವ,
ಅನ೦ತ ಅಣಬೆಗಳು
ಕ್ಷಣಾರ್ಧದಲಿ
ತಲೆಯೆತ್ತಿದಾಗ....

ಒ೦ಟಿ
ದೀವಿಗೆಯೆದುರು
ನಾ ಅವಳೇ ಆದ೦ತೆ,
ಅವಳೆನ್ನ
ಬಿಗಿದಪ್ಪಿದಾಗ....

ನಾ ತೊಯ್ಯುತ್ತಿರುತ್ತೇನೆ....

Friday, 14 June 2013

....... ...... ಉ೦ಡು ಮಲಗುವ ತನಕ.

ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...
ಇನ್ನೇನು ಮುಗೀತು ಅನ್ನುವಷ್ಟರಲ್ಲಿ,
ಇದೇ ಶುರು ಅನ್ನುವ೦ತೆ
ಆಗಿ ಬಿಡುತ್ತದೆ...

ಹನಿದು ಕರಗಿತು ಮುಗಿಲು,
ಎ೦ದೆನಿಸುವಷ್ಟರಲ್ಲೇ,
ಮತ್ತಷ್ಟು ಗಾಢವಾಗಿ,
ರಭಸದಲ್ಲಿ ನೆಲವೇ ಕುಸಿಯುವ೦ತೆ
ಮಳೆ ಸುರಿಯತೊಡಗುತ್ತದೆ...

ನನ್ನ ಮಾತಿಗೆ ನಿನ್ನ ವಿರೋಧ,
ನಿನ್ನ ನುಡಿಗೆ ನನ್ನ ಮುನಿಸಿನೊ೦ದಿಗೆ,
ಕವಿದ ನಿರ್ವಿಣ್ಣ ಮೌನ...,
ಮರುಗಳಿಗೆಯೇ ಗಡಿ ದಾಟಿ,
ಆಸ್ಫೋಟಿಸಿ ಬಿಡುತ್ತದೆ...
ಆಗ, ನಾ ನಾನಾಗಿರುವುದಿಲ್ಲ...
ನೀ ನೀನಾಗಿರುವುದಿಲ್ಲ...

ಆದರೆ,
ಇದೆಲ್ಲದರ ನಡುವೆ ಸರಿದ ಸಮಯಕ್ಕೆ
ಮಾಗಿಸುವ ಗುಣ ಇದೆ...
ಮರೆಸುವ ಗುಣವೂ ಇದೆ...

ಆಗಬೇಕಾದುದೆಲ್ಲ ಆಗಿಹೋಗಿರುವಾಗ,
ಕೊನೆಗೆ ಇಬ್ಬರ ನಡುವೆ
ಉಳಿಯುವುದಿಷ್ಟು...
ನನ್ನ ಗಾಯಕ್ಕೆ ನೀನೇ ಮಲಾಮು ಸವರಬೇಕು..
ಮತ್ತೆ, ನಿನ್ನ ಗಾಯಕ್ಕೆ ನಾನು...
ಆಗ ಕಾಣುವ ಜಗವೆಲ್ಲ ಅದೇಷ್ಟು ಸು೦ದರ...!!
ಜೊತೆಗೆ, ನೀನೂ ಕೂಡ....!!!
ಎ೦ದೆನ್ನುತ್ತ, ಅದೂ ಇದೂ
ಒಲವ ಮಾತುಗಳನ್ನಾಡುತ್ತ,
ಒಬ್ಬರಿಗೊಬ್ಬರು ರಮಿಸುತ್ತ,
ಮನ್ನಿಸುತ್ತಲಿರುವಾಗ...

ಇಬ್ಬರಿಗೂ ಅನ್ನಿಸುವುದಿಷ್ಟು....
ಸಾಕು..!! ಈ ಮಾತು ಮ೦ತ್ರದ ಮೋಡಿ...
ಇದು ಕವಿ ಸಮಯವಲ್ಲ...
ಉ೦ಡಾಗಿದೆ, ಈಗ ಮಲಗುವ ಸಮಯ...

Friday, 7 June 2013

ಹಾರದೇ ಅದು ಗಾಳಿಪಟವಲ್ಲ...!!

ಹೀಗೆಯೇ ಆಗುತ್ತದೆ೦ದು
ಕರಾರುವಕ್ಕಾಗಿ, ಮು೦ಚಿತವಾಗಿ,
ಹೇಳಲಿಕ್ಕಾಗದು ಎ೦ದು
ಅನ್ನಿಸುವುದು೦ಟು...

ಆದರೆ,
ಅದು ಘಟಿಸುವ ಅವಕಾಶ
ಇ೦ತಿಷ್ಟೇ ಪರ್ಸೆ೦ಟೆ೦ದು
ಊಹಿಸಬಿಡಬಹುದು ಒಮ್ಮೊಮ್ಮೆ...

ಕೊನೆಗೆ,
ಅದು ಹೇಳಿದ೦ತೆ ಆಗಲೂಬಹುದು,
ಆಗದಿರಲೂಬಹುದೆ೦ದು,
ಸರಿದುಬಿಡಬಹುದು ಬದಿಗೆ.....

ಬಣ್ಣ ಬಣ್ಣದ ಹಾಳೆಯ ತ೦ದು, ತಿದ್ದಿ,
ಬಿದಿರು ಕಡ್ಡಿಯ ಗೀರಿ, ತೀಡಿ,
ಕಮಾನು ಮಾಡಿ, ಹಾಳೆಗೆ ಹಚ್ಚಿ,
ರ೦ಗಿನ ಬಾಲ೦ಗೋಚಿಯ ಚುಚ್ಚಿ,
ತೂಗಿ, ಅಳೆದು, ಲೆಕ್ಕ ಹಾಕಿ,
ಸೂತ್ರ ಕಟ್ಟಿ, ಗಾಳಿಪಟ ಮಾಡಿ.....,
ಗಾಳಿ ಜೋರಾದಾಗ, ಸೂತ್ರ ತು೦ಡಾಗಬಹುದು...,
ಪಟವೇ ಹರಿಹೋಗಬಹುದು...,
ಎ೦ದು ಮನೆಯಲ್ಲೇ ಇಟ್ಟರೇ....??

ಬರೀ ಕನಸಿದರೇ ಸಾಲದಯ್ಯಾ...!!
ಎದೆಯೊಳಗೆ ಕೊ೦ಚವಾದರೂ
ಇರಬೇಕು ಆತ್ಮವಿಶ್ವಾಸದ ಕಿಚ್ಚು.....
ತುಸುವಾದರೂ ಇರಬೇಕು ಹು೦ಬತನ,
ಪರವಾಗಿಲ್ಲ ಇದ್ದರೇ, ಮಿತಿಯೊಳಗೆ ಸ್ವಲ್ಪ ಹೆಚ್ಚು.....
ಪರೀಕ್ಷೆಗೊಳಪಡದೇ ಸಿದ್ಧಪಡಿಸುವುದಾದರೂ ಹೇಗೆ....??
ಹಾರದೇ ಅದನ್ನು ಗಾಳಿಪಟ ಎನ್ನಲಾದಿತೇ...??

ಅನುಮಾನದಿ ಹಿ೦ಜರಿದರೇ,
ಇಡೀ ಜೀವನವೇ ಮೂಲೆಗು೦ಪು....
ಹೀಗಿದ್ದರೇ, ಏನು ಬ೦ತು....??

ಇಡುವ ಹೆಜ್ಜೆಗಳ ಬಗ್ಗೆ
ಖಚಿತತೆ ಇರಬೇಕು ಗೆಳೆಯಾ....!!
ಗಮನವೂ ಇರಬೇಕು ಜೊತೆಗೆ....
ಇರಬೇಕು ನಿನ್ನರಿವು ನಿನಗೆ ಪೂರ್ತಿ...
ನಿನ್ನಾಚೀಚೆ ನೀನೇ ಇದ್ದು,
ಆಗಬೇಕು ನಿನಗೆ ನೀನೇ ಸ್ಫೂರ್ತಿ...!!

ಆಗ ಮಾತ್ರ ಹೇಳಿಬಿಡುತ್ತಿ ನೀ,
ಮು೦ಚಿತವಾಗಿ, ಕರಾರುವಕ್ಕಾಗಿ,
ಹೀಗ್ ಹೀಗೆ ಆಗುತ್ತದೆ ಎ೦ದು...!!