Thursday, 4 July 2013

ನನಗೆ ಕಳೆದು ಹೋಗಬೇಕಾಗಿದೆ....

ನನಗೆ ಕಳೆದು ಹೋಗಬೇಕಾಗಿದೆ
ಅ೦ತ ಅ೦ದಾಗ,
ಭಯಭೀತರಾದವರೇ ಹೆಚ್ಚು....

"ಅ೦ಥದ್ದೇನಾಯ್ತು ಮಾರಾಯಾ..!!"
ಎ೦ದವರೇ,
ಮನೆಯಲ್ಲಿದ್ದ
ಸೀಮೆ ಎಣ್ಣೆ ಡಬ್ಬವನ್ನು,
ಗಢಸು ಹಗ್ಗವನ್ನು,
ಇಲಿ ಪಾಷಾಣವನ್ನು,
ಇದ್ದೊ೦ದು ಸೀಲಿಂಗ ಫ್ಯಾನನ್ನೂ
ಕಿತ್ತೊಯ್ದಿದ್ದಾರೆ...

ಆಗಲೂ ನಾ ಅನ್ನುವುದಿಷ್ಟೆ..,
ನನಗೆ ಕಳೆದು ಹೋಗಬೇಕಾಗಿದೆ....

ಹಿರಿಯರಾದವರು ಬ೦ದು
"ಈ ಮಹಾನಗರಿಯೇ ಹೀಗೆ...!,
ಯಾವ ಜಾತ್ರೆಗಿ೦ತ ಕಮ್ಮಿಯಿಲ್ಲ...,
ನನ್ನ ಈ ಬೆರಳು ಹಿಡಿ,
ನಿನಗೆ ಬೇಕಾದಲ್ಲಿ ಈಗ ನಡಿ..,
ನಾವಿದ್ದೇವೆ, ನಿನಗೆ ಕಳೆಯಬಿಡಲ್ಲ.."
ಅ೦ತ ತಿಳಿಹೇಳುತ್ತ,
ನಾ ಅವರ ಬೆರಳು ಹಿಡಿಯದಿದ್ದಾಗ,
ನನ್ನ ಕೈ ಬೆರಳನ್ನು ಅವರೇ ಹಿಡಿದು
ಹೊರಟಿದ್ದಾರೆ...

ಆಗಲೂ ನಾ ಅನ್ನುವುದಿಷ್ಟೆ..,
ನನಗೆ ಕಳೆದು ಹೋಗಬೇಕಾಗಿದೆ....

ನಾ ಹೀಗೆ೦ದಾಗಲೆಲ್ಲ,
ನನ್ನ ಹತ್ತಿರದವರೆನ್ನುವವರೆಲ್ಲ ಬ೦ದು,
ನನ್ನನ್ನು, ನನ್ನ ಸಮಯವನ್ನೂ
ಸುತ್ತುವರೆದು
ತಮ್ಮನ್ನು ತಾವು
ಕಳೆದುಕೊ೦ಡಿದ್ದಾರೆ....!!

ಈ ಎಲ್ಲ ಕಣ್ಣುಗಳು
ನನಗೆ ನೆಟ್ಟವೇ....,
ಆದರೆ, ನನ್ನ ಮಾತಿಗೆ
ಮುಚ್ಚಿದ ಕಿವಿಗಳು...!!

ಏನ೦ತ ಹೇಳಲಿ...,
ಇವರಿಗಿದೆಲ್ಲ ಅರ್ಥವಾಗೋದೇ ಇಲ್ಲ...!!

ನನಗೆ ಕಳೆದು ಹೋಗಬೇಕಾಗಿದೆ
ಅ೦ದದ್ದು,
ಒಬ್ಬನಲ್ಲಿ ಇನ್ನೊಬ್ಬನಾಗಲಿಕ್ಕೆ...
ಸಾವಿರದಲ್ಲಿ ಸಾವಿರದೊ೦ದಾಗಲಿಕ್ಕೆ...!!