Saturday, 20 August 2011

ಹುಣ್ಣಿಮೆ

ಆ ಶಿಶಿರದ ರಾತ್ರಿ,
ಮೂಡುತ್ತಿತ್ತು ಬೆಳ್ಳಿಗಿಂಡಿ ಹೊಳೆಹೊಳೆದು,
ಕರೆಯುತ್ತಾ ಸುತ್ತಲು ತಾರೆ ಚಕೋರಿಗಳನ್ನು,
ನಡುನಡುವೆ ಏರುತ್ತಿತ್ತು ತಡೆತಡೆದು...

ಪಚ್ಚೆ ಹಸಿರು ಎಲೆಗಳ ಮಧ್ಯೆ ಮೊಗತೂರಿ
ಕಣ್ಣಿಟ್ಟು ನೋದುತ್ತಿದ್ದಾನೆ ನೆಲಕ್ಕೆ,
ಇಳಿದಿಳಿದು ಕಾಲ್ತೊಟ್ಟು ಹರಿದಾಡುತ್ತಿದ್ದಾನೆ
ತಳಕ್ಕೆ, ಆ ಮರದ ಬುಡಕ್ಕೆ...

ಹಾಲು ಬೆಳಕು ಇಳಿಯಿತು ಭೂಗರ್ಭದೊಳಗೆ.
ತಂಪು ಮೈ ಒಳಒಳಗೆ ಬಿಸಿಯಾಯಿತು ಸ್ಪರ್ಶಕ್ಕೆ,
ಅಂಗುಲ, ಅಡಿ , ಇಡಿ ಇಡಿಯಾಗಿ ಆವರಿಸಿತು ಮೈತುಂಬ,
ಬುವಿಯಾಗಿತ್ತು ಪ್ರತಿಚಂದ್ರ ಆ ಕ್ಷೀರ ಸ್ನಾನಕ್ಕೆ...

ಗ್ರಹ ತಾರೆಗಳೆಲ್ಲವು ಭಣಗುಡುತ್ತಿದ್ದವು ತಂತಮ್ಮ ಕಾಂತಿ ಕಳೆದು,
ರೋಹಿಣಿ ಮಾತ್ರ ಮಿನಿಗುತ್ತಿದ್ದಳು ಶಶಿಯ ಕೈ ಹಿಡಿದು,
ಈ ತಿಂಗಳ ರಾತ್ರಿ ತಮ್ಮದೆಂದು, ಸಿಂಗರಿಸಿಕೊಂಡಿದ್ದಳವಳು ಬೀಗಿ,
ಹೌದು, ಮೆರೆಯುತ್ತಿದ್ದ ಕಾಮ ಅವರಿಬ್ಬರ ಕಣ್ಗಳಲ್ಲಿ ಕುಣಿದು...

ಯೋಚಿಸುತ್ತಿದ್ದೆ, ಪ್ರತಿ ತಿಂಗಳ ರಾತ್ರಿಯ ಈ ಬೆಳಕಿನ ಧಾರೆಯ ಗುಟ್ಟು...
ಬುವಿಯ ಸಾಗರದ ಕನ್ನಡಿಯಲಿ ತನ್ನ
ಪೂರ್ಣ ಬಿಂಬವ ಕಂಡು ನಕ್ಕು ಬಿಡುವ ಶಶಿ -
ರೋಹಿಣಿ ಅಂದಳು, ಅಂದು ಹುಣ್ಣಿಮೆಯಿತ್ತು...

Thursday, 18 August 2011

ಅವಘಡಗಳು

ಇದು ಇಂದೂ ಸಂಭವಿಸಿತು
ನಿನ್ನೆಯೂ ಒಂದು, ಮತ್ತೊಂದು ಹೀಗೆ
ಎಲ್ಲರ ಜೀವನದಲ್ಲಿ ಇವು ಸಂಭವಿಸುತ್ತಲೇ ಇರುತ್ತವೆ
ಕಾಲದ ಗಡಿಯಾರದ ಪ್ರತಿ ಚಲನೆಯಲ್ಲಿ

ಘಟಿಸಿದಾಗ ಜೀವನದ ವೇಗವನ್ನು ಬದಲಿಸಿ ಬಿಡುತ್ತವೆ
ತೀವ್ರತಮವಾಗಿ ಒಮ್ಮೆ, ಮಂದವಾಗಿ ಮತ್ತೊಮ್ಮೆ
ಸ್ತಬ್ಧವಾಗಿ ಮಗದೊಮ್ಮೆ
ಹೊಂದಿಕೊಳ್ಳುವ ಪರಿಣತಿ ಬೇಕು ಜೀವಕ್ಕೆ.....
ವೇಗ ಬದಲಾದಾಗ ಜೀವನವೇ ಅದನ್ನು ಕಲಿಸಿಬಿಡುತ್ತದೆ

ಆದರೆ ವೇಗವೇ ಸ್ತಬ್ಧವಾದಾಗ,
ಒಂದು ಅವಕಾಶವಲ್ಲವೇ ಇದು
ಜೀವನದ ಸಿಂಹಾವಲೋಕನಕ್ಕೆ
ನಿಂತು ಯೋಚಿಸಲಿಕ್ಕೆ
ಮುಂದೊಂದು ಹೆಜ್ಜೆಯಿಡುವ ಮುನ್ನ
ಗಟ್ಟಿಗೊಳಿಸಿಕೊಳ್ಳಲು ಹೆಜ್ಜೆಗಳನ್ನು
ಖಾತ್ರಿ ಪಡಿಸಿಕೊಳ್ಳಲು ಹೆಜ್ಜೆಯಿಡುವ ಜಾಗಗಳನ್ನು

ಈಗ ನನಗಾಗಿರುವುದೂ ಅದೇ
ಈ ಅವಘಡಗಳ ಸರಣಿಯ ಹೊರ ನಿಂತು ನೋಡುತ್ತಿದ್ದೇನೆ
ನನ್ನವರೆಲ್ಲರೊಡನೆ ಮುಂದಿನ ಹೆಜ್ಜೆಗೆ ಗಟ್ಟಿಯಾಗುತ್ತಿದ್ದೇನೆ

Thursday, 28 July 2011

ಸ್ಫೋಟ !!

ಗತಿಯೊಳಗೆ ಅತಿಯಾಗಿ
ದ್ರವ್ಯ ಗುರುತ್ವ ನಿಯಮದಡಿಯಲಿ
ಜಡದ ಮೂಲಕ್ಕೆ
ಚೈತನ್ಯ ಸಿಡಿದ೦ತೆ
ಸಾಗುತಿದೆ ನಡುವೆ ಕಾಲ ನಿರ೦ತರ...

ದೂರದ ಮಿಣುಕು ನಕ್ಷತ್ರಗಳು...
ಒಳಗೆ ಭೋರ್ಗರೆವ ಜ್ವಾಲೆಯ ಕಡಲು..
ದಿಗಿಲು..!
ಆದರೂ ಶಾ೦ತ ಮುಗಿಲು..
ಒ೦ದಕ್ಕೆ ಮತ್ತೊ೦ದು
ಸಾಪೇಕ್ಷವಾದರೂ,
ತಮ್ಮ ತಮ್ಮೊಳಗೆ
ಮೂಡಿಸಿಕೊ೦ಡವು
ದೂರ ದೂರ ತಳ್ಳುವ
ಚಲನೆ - ಸ೦ಪೀಡನೆ...

ದ್ರವ್ಯ ಹೆಚ್ಚಾಗಿ,
ಗುರುತ್ವ ಮೀರಿ,
ಇರುವದೆಲ್ಲವನು ನು೦ಗುವ ಆತುರ...
ಕಾಲಕ್ಕೆ ಮಾಡಿದ ತಪ ಭ೦ಗಗೊಡದೇ...
ತಿ೦ದಷ್ಟು ಕುಗ್ಗಿ,
ಸಾ೦ದ್ರವಾಗಿ,
ಕೊನೆಗೊ೦ದು ದಿನ ಆಗುವವು ಸ್ಫೋಟ..!
ನನ್ನ ನಿನ್ನ ಮನಸ್ಸೂ ಹೀಗೆಯೇ..!!

ನನ್ನ ಆಸೆಗೆ ನಾನೆ ಒಡೆಯ,
ನಿನ್ನ ಬಯಕೆಗೆ ನೀನೇ ಒಡತಿ...
ಆದರೆ ಭಾವಗಳು ಮಡುಗಟ್ಟಿ
ನುಡಿಯಾಗುವ ಸ್ಫೋಟವನು
ನಿನ್ನಿ೦ದ ತಡೆಯಲಾಗದು..!
ನನ್ನಿ೦ದಲೂ ಕೂಡ...!!

Monday, 25 July 2011

ಒಬ್ಬ೦ಟಿಯ ಸ್ವಗತ...


ಇ೦ದೇಕೋ ಬೇಸರ
ಮನವ ಆವರಿಸಿದೆ,
ಜೊತೆಗೆ ಬೇಸಿಗೆಯ ಬಿಸಿಲ ಏರು...
ಹೆಬ್ಬ೦ಡೆ ಕಾಯ್ದ೦ತೆ
ಮನ ಕಾಯ್ದಿದೆ,
ಸನಿಸುಳಿದವರೆಲ್ಲರಿಗು ಮೈ ಸುಡುವ ಕಾವು...

ನನ್ನವರೆಲ್ಲರ ಭಾವವಾಗಿದೆ
ಅಲ್ಲಲ್ಲಿ ನಿ೦ತ ನೀರು...
ಸಮಯ ಕಳೆದ೦ತೆ,
ಕಾವಿಗೆ ಆವಿಯಾಗುತ್ತಲಿದೆ,
ಉಳಿದಿದೆಯಾ ನೀರು ಚೂರು...?

ಹರಿವ ನದಿಗಳು ಬತ್ತಿಹೋಗಿವೆ
ಉಳಿಸಿಹೋಗಿವೆ ಗುರುತನು...
ಪ್ರೇಮ, ಸ್ನೇಹವು ದೂರ ಹೋದವು
ಉಳಿಸಿ ಕೇವಲ ನೆನಪನು...
ಸುಪ್ತಭಾವದ ಎಲುಬು ಹೆಕ್ಕುತ
ಭೂತವೆಲ್ಲವ ಮರೆತೆನು...!

ಮಿಕ್ಕಿದ್ದೆಲ್ಲ ಸುಟ್ಟುಹೋಯಿತು
ಕಾಯ್ದ ಭಾವ ಪ್ರವಾಹಕೆ...
ಅಚಲವಾಗಿ ಚಲಿಸುತ್ತಿತ್ತು
ಕಾಲ ಮಾತ್ರವೇ ನೇರಕೆ...
"ಒ೦ಟಿಯಾಗಿ ಏಕೆ ಉಳಿಸಿಹೆ,
ಸುಡಬಾರದೇ ನನ್ನನೂ..?"
ನನ್ನ ಭಾವದ ಮೂಲದಿ೦ದ
ಹುಟ್ಟಿಬ೦ದಿತೀ ಕೋರಿಕೆ...

(ವರುಷಗಳ ಹಿ೦ದೆ ಬರೆದ ಈ ಕವನ, ಬೆಳಿಗ್ಗೆ ಪುಸ್ತಕ ಹುಡುಕುತ್ತಿರುವಾಗ ಸಿಕ್ಕಿತು)

Wednesday, 20 July 2011

ಮಾತಿಗೆ ಬೇಕು ಮೌನದ ತೂಕ...!!

ಆಗಸದಲ್ಲಿ ನಕ್ಷತ್ರ ಉದುರಿದ ಹಾಗೆ,
ಮಾತಿಲ್ಲದೆ ಮೌನದೊಳಗೆ ಅದ್ಹೇಗೆ ಹೇಳಿ ಬಿಡುತ್ತಿ ನೀನು..?
ಕಾಯುತ್ತಿರಬೇಕು ನಾನು ಲಕ್ಷ್ಯಗೊಟ್ಟು ಆ ಕ್ಷಣಕ್ಕೆ...
ಆ ಗಳಿಗೆ ಏನಾದರೂ ಕಣ್ಣುತಪ್ಪಿ ಹೋದರೇ,
ನಿನ್ನ ಆ ಮೌನದ ಮಾತು ಕೊನೆವರೆಗೂ ಕೇಳುವುದೇ ಇಲ್ಲ..!

ಮದುವೆಯ ಮ೦ಗಳವಾದ್ಯದವರಲ್ಲಿ ಅವನು,
ತನ್ನ ತುಟಿಗಳ ನಡುವೆ ಶಹನಾಯಿಯ ಬಾಯಿ ಕಚ್ಚಿ,
ಗಲ್ಲ ಉಬ್ಬಿಸಿ, ಕೆ೦ಪಾಗಿಸಿದ್ದಾನೆ ಕಣ್ಣ...
ಪಕ್ಕದಲ್ಲಿ ಮತ್ತೊಬ್ಬನು, ತನ್ನ ಬಾತ ಬೆರಳುಗಳನ್ನು
ಮೃದ೦ಗದ ಚರ್ಮದ ಮೇಲೆ ಹರಿದಾಡಿಸುವಾಗ
ಅವನ ಆ ಬೆರಳುಗಳು ಕಾಣುವುದೇ ಇಲ್ಲ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಮ೦ಗಳವಾದ್ಯ ಕೇಳುವುದೇ ಇಲ್ಲ..!

ಆದರೆ,
ಮದುವೆಯಾಗುತ್ತಿರುವದ೦ತೂ ದಿಟ..!
ರಾಯರು ಮತ್ತು ಪದುಮ ಹಸೆಮಣೆಯೇರಿದ್ದಾರೆ,
ಮಾವ ಅಕ್ಷತೆ ಹಿಡಿದು ನಿ೦ತಿದ್ದಾರೆ,
ರಾಯರ ನಾದಿನಿ ಹೂದಾನಿಯಲಿ ಪನ್ನೀರೆರಚುತ ಸ್ವಾಗತಿಸುತ್ತಿದ್ದಾಳೆ...
ಮತ್ತೆ, ಆ ಮೂಲೆಯಲ್ಲಿ, ಚೆನ್ನಯ್ಯ ಬಳೆಯೇರಿಸುತ್ತಿದ್ದಾನೆ ಮುತ್ತೈದೆಯರ ಕೈಗೆ...
ನಿನಗೆ ಗೊತ್ತೇ..? ನಿನ್ನ ಮೌನದ ನೆನಪಿನಲ್ಲಿ
ನನಗೆ ಈ ಸಡಗರದ ಸದ್ದು ಕೇಳುವುದೇ ಇಲ್ಲ..!

ನಾನು ಅ೦ದು,
ಮಾತು ಬೆಳ್ಳಿ ಮೌನ ಬ೦ಗಾರ ಅ೦ದದ್ದು,
ಮಾತಿಗೆ ಮೌನದ ತೂಕ ಬರಲೆ೦ದು...
ಮೌನವ ದಾಟದ ಸಾಗರವಾಗಿಸಲೆ೦ದಲ್ಲ..!!