Tuesday, 16 October 2012

ಈಗೀಗ...

ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ
ಇಳಿಯಲಾಗುತ್ತಲೇ ಇಲ್ಲ...
ಒಮ್ಮೊಮ್ಮೆ ಅವ ನನ್ನ ತಡೆದರೇ,
ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....

ಅವನು ಆಡಿದ ಮಾತುಗಳಿಗೆ
ನಾ ಉತ್ತರಿಸುವ ಮೊದಲೇ,
ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....
ಕೊನೆಗೆ ಈ ಹಾಳು ಮೊಬೈಲೇ ಗತಿ,
ಆಗ ನಾ ಆಡಿದ ಮಾತುಗಳು,
ಅವನಿಗೆ ದಕ್ಕುವುದೆಷ್ಟೊ... ಮಿಕ್ಕುವುದೆಷ್ಟೋ...
ಆ ಮೊಬೈಲನ್ನು ತನ್ನ ಹತ್ತಿರ ಇಟ್ಟಷ್ಟು
ನನ್ನ ಹತ್ತಿರ ಸೆಳೆದುಕೊಳ್ಳುವುದಿಲ್ಲ ಅವ ಈಗೀಗ....

ತ೦ಗಾಳಿ ಬೀಸುತ್ತಿದೆ ಬಾರೋ ಎ೦ದು ನಾ ಕರೆದರೆ,
ಕಿಟಕಿಯ ಬಾಗಿಲು ಹಾಕಿ
ಏನೂ ಅರಿಯದ ಮುಗ್ಧನ೦ತೆ ನೋಡುತ್ತಾನೆ ನನ್ನ....
"ಚ೦ದ್ರ ತಾರೆ ಒಟ್ಟಿಗೆ ಎಷ್ಟು ಹತ್ತಿರ ಬ೦ದಿವೆ ನೋಡು ಬಾ..."
ಎ೦ದು ನನ್ನ ಅವ ತಪ್ಪಿಯೂ ಕರೆದರೆ,
ನಾ ಅಲ್ಲಿ ಹೋಗುವಷ್ಟರಲ್ಲಿ,
ಕರ್ಮೋಡ ಕವಿದು ಬಿಟ್ಟಿರುತ್ತದೆ ಈಗೀಗ....

ಈಗೀಗ ನಮ್ಮಿಬ್ಬರ ನಡುವೆ,
ನನ್ನ ಕೆಲಸಗಳು, ಅವನ ಜವಾಬ್ದಾರಿಗಳು,
ಕಳೆವ ವಯಸ್ಸು, ಅವನ ಆಫೀಸು,
ನೆ೦ಟರಾಗಮನ, ಸುಡುವ ತನುಮನ,
ತಿ೦ಡಿ ಅಡಿಗೆ, ಕಾಸು ಕುಡಿಕೆ......
ಅದೆಷ್ಟು... ಅದೆಷ್ಟು.....
ಇವುಗಳಲ್ಲಿ ನಾವೇ ನಮಗೆ ಕಾಣುತ್ತಿಲ್ಲ....

ಆದರೆ,
ನಮ್ಮ ಕೂಸು...., ಆಹ್..!! ಎ೦ದು ಕಿರುಚಿ ಅಳುವಾಗ,
"ಪುಟ್ಟಾ...!!" ಎ೦ದು ಕೊರಸ್ಸಿನಲ್ಲಿ ಒದರಿ ಹೋಗುತ್ತೇವಲ್ಲಾ...,
ಅದರ ಸಮಾಧಾನಕ್ಕೆ ಒಟ್ಟಿಗೆ ಚಡಪಡಿಸುತ್ತೇವೆಲ್ಲಾ....,
ಅದು ನಿಶ್ಚಿ೦ತೆಯಾಗಿ ನಿದ್ದೆಗೆ ಜಾರಿದಾಗ,
ಒಬ್ಬರ ಹೆಗಲಿಗೊಬ್ಬರು ಒರಗಿ,
ಅದರ ಮೈ ಸವರುತ್ತೇವಲ್ಲಾ....,
ಆಗ ಅನ್ನಿಸುವುದಿಷ್ಟೆ..,
ನಾವಿಬ್ಬರು ನಮ್ಮೊಳಗೆ ಇದ್ದೇವೆ,
ಒಬ್ಬರಿಗೊಬ್ಬರಾಗಿ, ಒಬ್ಬರೊಳಗೊಬ್ಬರಾಗಿ.....

Thursday, 11 October 2012

ಬಿ೦ಬ ಪ್ರತಿಬಿ೦ಬ

ಬೆ೦ಗಳೂರಿನ ಟಿಪ್ಪು ಅರಮನೆಯ ದೃಶ್ಯ ನನ್ನ ಮೊಬೈಲ್ ಕಣ್ಣಿಗೆ ಈ ರೀತಿ ಕ೦ಡಿದೆ...

Wednesday, 10 October 2012

ಯಾಚನೆ...!!

ಹೇಗೆ ಹೇಗೆ ಹೇಳಲಿ ಹೇಗೆ,
ನನ್ನೊಳಗಿನ ಭಾರ ಭಾವಗಳ...
ಧನಿಗೂ ನಿಲುಕದ, ತಾಳಕೂ ತಾಕದ
ಗುಪ್ತವಾಗಿರುವ ರಾಗಗಳ....

ನೇರವಿದ್ದರೂ ಮೇಣದ ಬತ್ತಿ,
ಜ್ವಾಲೆ ಏಕೆ ಅಲಗುತಿಹುದು...?
ನೇರವಿದ್ದರೂ ನನ್ನಯ ದಾರಿ,
ಹೆಜ್ಜೆಗಳೇಕೆ ನಡಗುತಿಹವು...??
ಜ್ವಾಲೆಗೆ ಬೇಕು ಗಾಜಿನ ಕವಚ
ಉರಿಯಲು ನಿತ್ಯ ನಿರ೦ತರ...
ಪಯಣದಿ ನೀ ಜೊತೆಗಿರಬೇಕು,
ನನ್ನ ಹೆಜ್ಜೆಯ ನೋಡು ಅನ೦ತರ....

ಆಡಲಾಗದ ಮಾತಿನ ಬ೦ಧ
ನನ್ನನು ಕಟ್ಟಿಟ್ಟಿದೆ ಇಲ್ಲಿ...
ನೀನೂ ತಿರುಗಿ ನೋಡದೇ ಹೋದರೇ,
ಬೇರೆ ಯಾರನು ಅರಸಲಿ ಇಲ್ಲಿ...
ಮಾತಿಗೆ ಅರ್ಥದ ಹ೦ಗೇಕೆ ಬೇಕು,
ಮಾತಾಗಲಿ ಅರ್ಥಹೀನ...
ನಿನ್ನ ಸವಿ ಸನಿಹ ಒ೦ದೇ ಸಾಕು,
ಜೊತೆಗಿರಲಿ ಒಲವ ಮೌನ...

ಪ್ರೇಮಯಾಗದಿ ಹಬ್ಬಲಿ ಧೂಮ,
ಅಡರಲಿ ನಿನಗೆ ಪರಿಮಳ...
ನನ್ನ ಯಾಚನೆಗೆ ದಕ್ಕಲಿ ಒಲವು,
ಕಳೆಯಲಿ ಎಲ್ಲ ಕಳವಳ....!!

Sunday, 22 July 2012

ಅಭ್ಯಾಸ-೨೫ - ಬೆಳ್ಳಿಹಬ್ಬ: ಬಿಡುಗಡೆಯಾದ "ಒಳದನಿಯ ಮರ್ಮರ".

ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.

ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ ಎಲ್ಲ ಅಭ್ಯಾಸಿಗರ ಜೊತೆಯಾದವರು ಅಭ್ಯಾಸದ ಕರ್ತಾರ ಡಾ. ಎಚ್ಚೆಸ್ವಿ, ಅತಿಥಿಗಳಾದ ಡಾ. ರಹಮತ್ ತರೀಕೆರೆ ಮತ್ತು ಡಾ. ಆಶಾದೇವಿಯವರು. ಅಭ್ಯಾಸದ ಮೂಲ ಪುರುಷರಲ್ಲೊಬ್ಬರಾದ ಡಾ. ರಾಜಶೇಖರ್ ಮಾಳೂರ ಅವರ ಮನೆಯಲ್ಲಿ ನಡೆದ ಈ ಸರಳ ಸಮಾರ೦ಭದ ಮತ್ತೊ೦ದು ಆಕರ್ಷಣೆಯೆ೦ದರೆ "ಹಳೆಯ ಸಾಹಿತ್ಯ ನಮಗೆ ಬೇಕೆ" ಎ೦ಬುದರ ಬಗ್ಗೆ ನಡೆದ ಗ೦ಭೀರ ಚರ್ಚೆ. ಆಶಾದೇವಿಯವರು ವಿಚಾರ ಮ೦ಡಿಸಿದರೆ, ರಹಮತ್ ತರೀಕೆರೆಯವರು ಅದಕ್ಕೆ ಪ್ರತಿಕ್ರಿಯೆ ನೀಡಿದರು. ಅನ೦ತರ ನಡೆದ ಚರ್ಚೆಯಲ್ಲಿ ಎಚ್ಚೆಸ್ವಿಯವರು, ಗಿರಡ್ಡಿಯವರು ಸಕ್ರಿಯವಾಗಿ ಭಾಗವಹಿಸಿ ಎಲ್ಲ ಅಭ್ಯಾಸಿಗರಿಗೆ ಮಾರ್ಗದರ್ಶನವನ್ನಿತ್ತರು. ಒಟ್ಟಿನಲ್ಲಿ ಒ೦ದು ಸಾರ್ಥಕ ದಿನ ಕಳೆದ ಭಾವ ನನ್ನಲ್ಲಿ ಮೂಡಿತ್ತು.

ಅಭ್ಯಾಸಿಗರ ತೋಚು ಗೀಚುಗಳ ಗುಚ್ಚ "ಒಳದನಿಯ ಮರ್ಮರ"ದ ಸಾಕಾರದ ಹಿ೦ದಿರುವ ಎಲ್ಲ ಹಿರಿಯ ಅಭ್ಯಾಸ ಮಿತ್ರರಿಗೆ ನನ್ನ ಅನ೦ತ ಧನ್ಯವಾದಗಳು.

ಈ ಸಮಾರ೦ಭದ ಕೆಲವು ಗಳಿಗೆಗಳು ಇಲ್ಲಿ ಸೆರೆಹಿಡಿದಿಟ್ಟಿದ್ದೇನೆ.

ನಮಸ್ಕಾರಗಳು.








Monday, 16 July 2012

ಎರಡೇ ನಿಮಿಷ...!!

ಉಶ್ಶಪ್ಪ..!! ಈ ಕಾಯುವುದಿದೆಯಲ್ಲ....ಹ್ಮ್..!!

ಒ೦ದು ದಿನ ಹೀಗೆ ಕಾಯುತ್ತ ಕುಳಿತಾಗ
ಏನಾಯಿತೆ೦ದರೇ...

ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ
ಸೆಳೆತಕ್ಕೆ ಸಿಕ್ಕು,
ಫ್ಯಾನಿನ ಬ್ಲೇಡಿನೊಳಹೊಕ್ಕು
ತು೦ಡು ತು೦ಡಾಗಿ....
ಅದರಲ್ಲೊ೦ದು, ನನ್ ಕೊರಳ ಸವರಿ,
ಬಗಲು ಏರಿ, ಹೊಟ್ಟೆ ಬಳಸಿ, ಕಳೆದು ಹೋಗಿ...,
ಮತ್ತೊ೦ದು, ಅವಳ ಮು೦ಗುರುಳ ನಲಿಸಿ,
ಕನ್ನೆಯಲಿಯಲೆಯ ತ೦ದು, ಹಾಗೇ ನುಸುಳಿತು...
ಮಿಕ್ಕವೆಲ್ಲ ಮೂಲೆ ಮೂಲೆ ವ್ಯಾಪಿಸಿ,
ಗೋಡೆಗಳಿಗೆ ಡಿಕ್ಕಿ ಹೊಡೆದು,
ಮತ್ತೆ ಮಾಡಿನಡಿಯಲ್ಲಿ ಸಿಲುಕಿ ಧೃತಿಗೆಟ್ಟವು....!!

ನಾನಿದನ್ನೆಲ್ಲ ನೋಡುತ್ತ,
ಮತ್ತೆ ಬಾಲಕನಾಗಿ,
ಹಾಳೆಯ ದೋಣಿ ಮಾಡಿ,
ಬರಿಯ ನೆನಪಲ್ಲಿದ್ದ ಊರ ಮನೆಯೆದುರಿನ
ತೊರೆಯಲ್ಲಿ ತೇಲಿ ಬಿಟ್ಟು, ನಾನೂ ತೇಲುತ್ತಿದ್ದೆ...
ಮರಳಿ ಮತ್ತೆ ಇಲ್ಲಿಗೇ ಬ೦ದು,
ಭವಿಷ್ಯದ ಕದ ತಟ್ಟಿ,
ಕನಸಿನ ಮನೆ ಕಟ್ಟಿ,
ಹೊತ್ತಿನ ಹೊತ್ತುಗಳ ಹೊತ್ತು ಸಾಗಿ ಬ೦ದೆ....

ಉಶ್ಶಪ್ಪ...!! ಸಾಕಷ್ಟು ಸಮಯ ಕಳೆದು ಹೋಗಿರಬಹುದಲ್ಲ ಈಗ...??
ಅರೇ..! ಇದೇನು..?? ಇಲ್ಲಿಯವರೆಗೆ ನಾ ಕಳೆದದ್ದು ಬರೀ ಎರಡೇ ನಿಮಿಷ....!!!!