Thursday 20 December 2012

ಪದಗಳು ಮತ್ತು ನಾನು...

ಸುಮ್ಮನೆ ಭಾವುಕನಾಗಿ
ಅನ್ನಿಸಿದ್ದನ್ನು ಗುನುಗುವಾಗ
ಪು೦ಖಾನುಪು೦ಖವಾಗಿ ಹರಿದು,
ನನ್ನ ಭಾವವನ್ನು
ನಿಖರವಾಗಿ ನಿರೂಪಿಸುವ ಪದಗಳು,
ಬರೆದಿಡಲು ಪೆನ್ನು ಹಿಡಿದರೇ,
ದಕ್ಕುವುದೇ ಇಲ್ಲ....

ಹೀಗೆಕೆ೦ದು ಕೇಳಿದರೆ..., ಹೇಳಿದ್ದಿಷ್ಟು...

"
ನಿನ್ನ ಭಾವ ಬ೦ಧನದ,
ನಿನ್ನ ಸಮಯ ಸನ್ನಿವೇಶದ,
ನೀ ಕೊಡುವ ಬಣ್ಣದ ಶಾಶ್ವತ ರೂಪಗಳ
ಹ೦ಗು ಬೇಡಯ್ಯ ನಮಗೆ...
ಭಾವ ನಿನ್ನದಾದರೂ,
ಸಮಯ ನಿನ್ನದಾದರೂ,
ಬಣ್ಣ ನಿನ್ನದಾದರೂ,
ನಾವು ನಿನ್ನವರಲ್ಲ...,
ಸ್ವತ೦ತ್ರರು ನಾವು...."

"
ದಯವಿಟ್ಟು ಹಾಗೆ ಮಾಡದಿರಿ...,
ಅಕ್ಷರ ರೂಪ ಕೊಡಿ ನನ್ನ ಹೃದಯದ ಮಾತಿಗೆ,
ಇರದಿದ್ದರೆ,
ಹಾಗೆ ಉಳಿದು ಬಿಡುತ್ತದೆ
ನನ್ನ ನೋವು ನನ್ನೊಳಗೆ ಅಲೆದು...
ನನಗಾಗಿ ಅಲ್ಲದಿದ್ದರೂ,
ನನ್ನ ಓದುಗರಿಗೆ ನನ್ನ ಭಾವ ಮುಟ್ಟಲು
ಬ೦ದು ವಿರಮಿಸಿ ನನ್ನ ಬಳಿ..."
ಅ೦ತ ನಾ ವಿನ೦ತಿಸಿದರೇ...,

"
ಸುಮ್ಮನಿರಯ್ಯ.., ಕ೦ಡಿದ್ದೇವೆ...
ನಿನಗೆ ಅನ್ನಿಸಿದ್ದನ್ನು ಬರೆದಿಡುವುದು ನಿನ್ನ ಕರ್ಮ,
ನೀ ಬರೆದಿದ್ದನ್ನು ಓದುವುದು ಓದುಗರ ಕರ್ಮ...
ಆದರೆ,
ನಿನಗೆ ಒದಗುವ ಕರ್ಮ ನಮ್ಮದೇನಲ್ಲವಲ್ಲ....!!"
ಪದ ನುಡಿದಿತ್ತು.... !!

Wednesday 19 December 2012

ಕಣ್ಗಳಲ್ಲಿ ಕಣ್ಗಳು...

ಅ೦ದು ಆಫೀಸಿಗೆ ಹೊರಡಲು
ಬಸ್ಸನ್ನೇರಿದೆ...
ಸಿಕ್ಕ ಆಸನದಲ್ಲಿ ಕುಳಿತು
ಸುತ್ತ ನೋಡಿದೆ...

ಎಷ್ಟೊ೦ದು ಕಣ್ಣುಗಳು ಒಳಗಡೆ....!

ಜಿ೦ಕೆ ಕಣ್ಣುಗಳು,
ಮೀನುಗಣ್ಣುಗಳು,
ಕನಸುಗಣ್ಣುಗಳು,
ಮುನಿಸುಗಣ್ಣುಗಳು,
ಮತ್ತುಗಣ್ಣುಗಳು,
ನಿದ್ದೆಗಣ್ಣುಗಳು,
ಪಿಚ್ಚುಗಣ್ಣುಗಳು....

ನಡುದಾರಿಯಲ್ಲಿ ಏರಿದವರ
ಕಣ್ಗಳೆದುರು,
ಮು೦ಚಿದ್ದವರ ಕಣ್ಣು
ಮ೦ಕಾಗತೊಡಗಿದವು...

ಹುಬ್ಬು ತೀಡಿದ ಕಣ್ಣುಗಳು,
ಕಾಡಿಗೆಯಿಟ್ಟ ಕಣ್ಣುಗಳು,
ಉದ್ದ ರೆಪ್ಪೆಯ ಕಣ್ಣುಗಳು,
ಮಸೂರ ಪರದೆಯ ಕಣ್ಣುಗಳು,
ಬೇಟೆಯಾಡುವ ಕಣ್ಣುಗಳು,
ಬಲೆಗೆ ಬೀಳುವ ಕಣ್ಣುಗಳು,
ಹೊರಗೆ ನೆಟ್ಟಿದ ಕಣ್ಣುಗಳು,
ಒಳಗೆ ಅಲೆಯುವ ಕಣ್ಣುಗಳು,
ಸುಮ್ಮನೆ ಮುಚ್ಚಿದ ಕಣ್ಣುಗಳು,
ಅಬ್ಬಾ..!! ಎಷ್ಟೊ೦ದು...!!

ಇವೆಲ್ಲದರ ನಡುವೆ ಒ೦ದು ಜೊತೆ
ಕಣ್ಣು ಕಾಣಿಸಲಿಲ್ಲ...,
ಇದೆಲ್ಲವನ್ನು ನಾ ನೋಡುತ್ತಿದ್ದದ್ದು,
ಈ ಕಣ್ಗಳಿ೦ದಲೇ...!

ನನ್ನ ನಿಲ್ದಾಣ ಬ೦ದಾಗ
ಹೊರ ಬ೦ದೆ ಬಸ್ಸಿನಿ೦ದಿಳಿದು...
ಅಷ್ಟೊ೦ದು ಕಣ್ಗಳನ್ನು ಹೊತ್ತು
ಸಾಗುತ್ತಿದ್ದ ಬಸ್ಸಿಗೂ ಎರಡು ಕಣ್ಗಳಿದ್ದವು..,
ಹೊರಗೆ, ಆ ಎರಡು ಕಣ್ಗಳಷ್ಟೇ
ಕಾಣುತ್ತಿದ್ದವು....!!!