Tuesday 9 April 2013

ಗಾಳಿಪಟ...

ಲಹರಿಯ ಗಾಳಿ
ಬೀಸಿದೆಡೆಗೆ
ಇದು
ಬದಲಿಸುತ್ತದೆ
ತನ್ನ ದಿಕ್ಕು...

ಒಮ್ಮೊಮ್ಮೆ,
ಯಾರ ಊಹೆಗೂ
ನಿಲುಕದ೦ತೆ
ಗಿರಕಿ ಹೊಡೆಯುತ್ತದೆ
ನಿ೦ತ ನಿ೦ತಲ್ಲೇ...

ಪ್ರವಾಹಕ್ಕೆದುರಾದರೇ,
ಇರುತ್ತದೆ,
ಮೇಲೆ ಮೇಲೆ
ಏರುತ್ತ.....

ಪ್ರವಾಹಕ್ಕೆ ಗುರಿಯಾದರೇ,
ಇಳಿದು,
ದಿಕ್ಕಾಪಾಲಾಗಿ,
ಅಲೆಯುತ್ತ...

ಇದು ಮನಸ್ಸೋ...?
ಗಾಳಿಪಟವೋ...?
ಇಲ್ಲ,
ಮನಸ್ಸೇ ಗಾಳಿಪಟವೋ...?

ಬೀಸುವ ಗಾಳಿ
ತ೦ಗಾಳಿಯಾದರೇನು....
ಬಿರುಗಾಳಿಯಾದರೇನು.....,
ಬಿಗಿಯಾಗಿರಲಿ ಹಿಡಿತ,
ಸಡಿಲವಾಗದಿರಲಿ ಸೂತ್ರ....

Friday 5 April 2013

ಅನಾಮಿಕಾ...

ನಾನು
ಹುಟ್ಟಿದ್ದು
ನಿರ್ವಾತದಲ್ಲಿ..
ಅದಕ್ಕೆ
ನನಗ್ಯಾವ ಹೆಸರಿಲ್ಲ...
ನನ್ನನ್ನು ನೀವು,
ಅನಾಮಿಕಳೆ೦ದು
ಕೂಗಿದೆಡೆ
ಹೊರಳುವೆನಲ್ಲಿ...

ನಾನೊ೦ದು
ಕವಿತೆಯ ಹಾಗೆ,
ಅದರೆ ಕವಿತೆಯಲ್ಲ...
ನನ್ನ
ರೂಪಿಸಿದವನನ್ನ
ನಾನು ಕವಿಯೆನ್ನುವುದಿಲ್ಲ...
ನಿರ್ಭಾವುಕ
ನಿರ್ವಾತದಲ್ಲಿ
ನನ್ನನ್ನು,
ಹಾಳೆಗೆ ಕರೆ
ತ೦ದವಗೆ,
ನನಗೆ ಹೆಸರಿಡುವ
ಹಕ್ಕು,
ನಾನು ಕೊಡುವುದಿಲ್ಲ...

ಅನಾಮತ್ತು
ಚಿತ್ತು ಕಾಟುಗಳ
ನಡುವೆ,
ನನ್ನನ್ನ ಅಡ್ಡಾದಿಡ್ಡಿ
ರೇಕುಗಳಾಗಿ
ಇಟ್ಟವನು ಅವನು...
ಈಗ,
ನನಗೇನಾದರೂ
ಒ೦ದು ರೂಪ,
ಒ೦ದು ಭಾವ,
ಒ೦ದು ಅರ್ಥ
ಒದಗಿದೆಯೆ೦ದರೇ,
ಅದು ಕೇವಲ ನನ್ನದೇ
ಖಾಸಗಿ ಗಳಿಕೆ, earn...

ನನ್ನ ಕ೦ಡು
ನೀವು
ಮರುಗಿದರೇ,
ಆ ಮರುಕಕ್ಕೆ,
ಅವನೇ ಸ೦ಪೂರ್ಣ
ಅರ್ಹ...!!
ತ್ರಿಶ೦ಕುವಿನ
ಸ್ಥಿತಿಗೆ ಕಾರಣ
ವಿಶ್ವಾಮಿತ್ರನ ಅಸಹಾಯಕತೆ
ಹೊರತು
ತ್ರಿಶ೦ಕುವಲ್ಲ....

ಇಷ್ಟೆಲ್ಲ ಆದನ೦ತರ,
ನಿಮ್ಮಲ್ಲೊ೦ದು ಎಳೆ
ಭಾವ
ಸ್ಫುರಣೆಯಾಗಿದೆಯೆ೦ದರೇ,
ನಾನು
ಇನ್ನೊಮ್ಮೆ
ಅನಾಮಿಕಳಾಗಿ
ಜನಿಸ ಬಯಸುತ್ತೇನೆ....

Wednesday 3 April 2013

ಮಗಳು ಹೀಗೆಯೇ...

ಇವಳು
ಕ೦ಡದ್ದು
ಸೀದಾ ಸಾದಾ
ಘಟನೆಯಾದರೂ,
ಇವಳು ನನಗದನ್ನು
ಹೇಳುವಾಗ
ಆಶ್ಚರ್ಯವಾಗಿರುತ್ತದೆ...!!
ತನ್ನೆರಡೂ ಕಣ್ಗಳನ್ನು,
ಆಕಾಶ ಭೂಮಿಯಾಚೆ
ವ್ಯಾಪಿಸಿ,
"ಅದೇನಾಯ್ತು ಗೊತ್ತಾ...?"
ಎ೦ದು
ಕುತೂಹಲ ಕೆರಳಿಸಿ
ಹೇಳುವಾಗ,
ಇವಳೇ
ಆಶ್ಚರ್ಯವಾಗಿರುತ್ತಾಳೆ...!!