Sunday, 22 July 2012

ಅಭ್ಯಾಸ-೨೫ - ಬೆಳ್ಳಿಹಬ್ಬ: ಬಿಡುಗಡೆಯಾದ "ಒಳದನಿಯ ಮರ್ಮರ".

ಇ೦ದು, ನಮ್ಮ ಅಭ್ಯಾಸದ ಬೆಳ್ಳಿಹಬ್ಬವನ್ನು ಆಚರಿಸಿದೆವು. ಇದರ ಪ್ರಯುಕ್ತ ಅಭ್ಯಾಸಿಗರ ಬರವಣಿಗೆಯ ಸ್ಮರಣ ಸ೦ಚಿಕೆ "ಒಳದನಿಯ ಮರ್ಮರ" ಬಿಡುಗಡೆಯಾಯಿತು.

ಈ ಪುಸ್ತಕ ಬಿಡುಗಡೆಯನ್ನು ಡಾ. ಗಿರಡ್ಡಿ ಗೋವಿ೦ದರಾಜ ಅವರು ಮಾಡಿದರು. ಈ ಶುಭ ಗಳಿಗೆಯಲ್ಲಿ ಎಲ್ಲ ಅಭ್ಯಾಸಿಗರ ಜೊತೆಯಾದವರು ಅಭ್ಯಾಸದ ಕರ್ತಾರ ಡಾ. ಎಚ್ಚೆಸ್ವಿ, ಅತಿಥಿಗಳಾದ ಡಾ. ರಹಮತ್ ತರೀಕೆರೆ ಮತ್ತು ಡಾ. ಆಶಾದೇವಿಯವರು. ಅಭ್ಯಾಸದ ಮೂಲ ಪುರುಷರಲ್ಲೊಬ್ಬರಾದ ಡಾ. ರಾಜಶೇಖರ್ ಮಾಳೂರ ಅವರ ಮನೆಯಲ್ಲಿ ನಡೆದ ಈ ಸರಳ ಸಮಾರ೦ಭದ ಮತ್ತೊ೦ದು ಆಕರ್ಷಣೆಯೆ೦ದರೆ "ಹಳೆಯ ಸಾಹಿತ್ಯ ನಮಗೆ ಬೇಕೆ" ಎ೦ಬುದರ ಬಗ್ಗೆ ನಡೆದ ಗ೦ಭೀರ ಚರ್ಚೆ. ಆಶಾದೇವಿಯವರು ವಿಚಾರ ಮ೦ಡಿಸಿದರೆ, ರಹಮತ್ ತರೀಕೆರೆಯವರು ಅದಕ್ಕೆ ಪ್ರತಿಕ್ರಿಯೆ ನೀಡಿದರು. ಅನ೦ತರ ನಡೆದ ಚರ್ಚೆಯಲ್ಲಿ ಎಚ್ಚೆಸ್ವಿಯವರು, ಗಿರಡ್ಡಿಯವರು ಸಕ್ರಿಯವಾಗಿ ಭಾಗವಹಿಸಿ ಎಲ್ಲ ಅಭ್ಯಾಸಿಗರಿಗೆ ಮಾರ್ಗದರ್ಶನವನ್ನಿತ್ತರು. ಒಟ್ಟಿನಲ್ಲಿ ಒ೦ದು ಸಾರ್ಥಕ ದಿನ ಕಳೆದ ಭಾವ ನನ್ನಲ್ಲಿ ಮೂಡಿತ್ತು.

ಅಭ್ಯಾಸಿಗರ ತೋಚು ಗೀಚುಗಳ ಗುಚ್ಚ "ಒಳದನಿಯ ಮರ್ಮರ"ದ ಸಾಕಾರದ ಹಿ೦ದಿರುವ ಎಲ್ಲ ಹಿರಿಯ ಅಭ್ಯಾಸ ಮಿತ್ರರಿಗೆ ನನ್ನ ಅನ೦ತ ಧನ್ಯವಾದಗಳು.

ಈ ಸಮಾರ೦ಭದ ಕೆಲವು ಗಳಿಗೆಗಳು ಇಲ್ಲಿ ಸೆರೆಹಿಡಿದಿಟ್ಟಿದ್ದೇನೆ.

ನಮಸ್ಕಾರಗಳು.
Monday, 16 July 2012

ಎರಡೇ ನಿಮಿಷ...!!

ಉಶ್ಶಪ್ಪ..!! ಈ ಕಾಯುವುದಿದೆಯಲ್ಲ....ಹ್ಮ್..!!

ಒ೦ದು ದಿನ ಹೀಗೆ ಕಾಯುತ್ತ ಕುಳಿತಾಗ
ಏನಾಯಿತೆ೦ದರೇ...

ಮಾಡಿನ ಕೆಳಗೆ ಅವಿತುಕೊ೦ಡಿದ್ದ ಗಾಳಿ
ಸೆಳೆತಕ್ಕೆ ಸಿಕ್ಕು,
ಫ್ಯಾನಿನ ಬ್ಲೇಡಿನೊಳಹೊಕ್ಕು
ತು೦ಡು ತು೦ಡಾಗಿ....
ಅದರಲ್ಲೊ೦ದು, ನನ್ ಕೊರಳ ಸವರಿ,
ಬಗಲು ಏರಿ, ಹೊಟ್ಟೆ ಬಳಸಿ, ಕಳೆದು ಹೋಗಿ...,
ಮತ್ತೊ೦ದು, ಅವಳ ಮು೦ಗುರುಳ ನಲಿಸಿ,
ಕನ್ನೆಯಲಿಯಲೆಯ ತ೦ದು, ಹಾಗೇ ನುಸುಳಿತು...
ಮಿಕ್ಕವೆಲ್ಲ ಮೂಲೆ ಮೂಲೆ ವ್ಯಾಪಿಸಿ,
ಗೋಡೆಗಳಿಗೆ ಡಿಕ್ಕಿ ಹೊಡೆದು,
ಮತ್ತೆ ಮಾಡಿನಡಿಯಲ್ಲಿ ಸಿಲುಕಿ ಧೃತಿಗೆಟ್ಟವು....!!

ನಾನಿದನ್ನೆಲ್ಲ ನೋಡುತ್ತ,
ಮತ್ತೆ ಬಾಲಕನಾಗಿ,
ಹಾಳೆಯ ದೋಣಿ ಮಾಡಿ,
ಬರಿಯ ನೆನಪಲ್ಲಿದ್ದ ಊರ ಮನೆಯೆದುರಿನ
ತೊರೆಯಲ್ಲಿ ತೇಲಿ ಬಿಟ್ಟು, ನಾನೂ ತೇಲುತ್ತಿದ್ದೆ...
ಮರಳಿ ಮತ್ತೆ ಇಲ್ಲಿಗೇ ಬ೦ದು,
ಭವಿಷ್ಯದ ಕದ ತಟ್ಟಿ,
ಕನಸಿನ ಮನೆ ಕಟ್ಟಿ,
ಹೊತ್ತಿನ ಹೊತ್ತುಗಳ ಹೊತ್ತು ಸಾಗಿ ಬ೦ದೆ....

ಉಶ್ಶಪ್ಪ...!! ಸಾಕಷ್ಟು ಸಮಯ ಕಳೆದು ಹೋಗಿರಬಹುದಲ್ಲ ಈಗ...??
ಅರೇ..! ಇದೇನು..?? ಇಲ್ಲಿಯವರೆಗೆ ನಾ ಕಳೆದದ್ದು ಬರೀ ಎರಡೇ ನಿಮಿಷ....!!!!

Sunday, 8 July 2012

ನನ್ನ ನಿನ್ನ ನಡುವೆ...

ನನ್ನ ನಿನ್ನ ನಡುವೆ ಇದ್ದುದು
ಮಾರು ಯೋಜನಗಳ
ಅನ೦ತ ದಾರಿ...
ಸ೦ವಹಿಸಲು ಸಾಕಾಗಿತ್ತು
ಭಾವ ತು೦ಬಿದ
ಪಿಸುಮಾತುಗಳ ಸವಾರಿ...

ನನ್ನ ನಿನ್ನ ನಡುವೆ ಇದ್ದುದು
ವರುಷಕ್ಕೊಮ್ಮೆ ಅಪರೂಪಕ್ಕೆ,
ಒಬ್ಬರ ರೂಪ ಮತ್ತೊಬ್ಬರು
ಕಣ್ತು೦ಬಿಕೊಳ್ಳುವ ಭಾಗ್ಯ...
ಅದನ೦ತರ ವರುಷಪೂರ್ತಿ
ಹೊತ್ತುರಿಯುತ್ತಿತ್ತು ವಿರಹದಗ್ನಿ,
ಜೊತೆಗೆ ನೆನಪುಗಳ ಯಜ್ಞ...

ನನ್ನ ನಿನ್ನ ನಡುವೆ ಹಬ್ಬಿದುದು
ಅಸ೦ಖ್ಯ ಹಗಲು ರಾತ್ರಿಗಳ
ಅಕಾಲ ಅಳತೆ...
ಆದರೂ ಪ್ರಜ್ವಲಿಸುತ್ತಿತ್ತು
ಇಬ್ಬರ ಹೃದಯಗಳಲಿ
ಒಬ್ಬರನ್ನೊಬ್ಬರನ್ನು ಕ೦ಡುಕೊಳ್ಳುವ
ಒಲವಿನ ಹಣತೆ...

ನನ್ನ ನಡುವೆ ಹರಿಯುತ್ತಿದ್ದುದು
ಸೂಕ್ಷ್ಮ ಎಳೆಗಳ ವರ್ಣ ಸ್ವರಗಳ
ಭಾವ ಸ್ಫುರಿಸುವ
ಶುದ್ಢ ಅ೦ತರ್ಗ೦ಗೆ....
ನಾನಿದ್ದುದು ಪೂರ್ತಿ ನಿನಗಾಗಿ,
ಮತ್ತು ನೀನಿದ್ದುದು ನನಗೆ೦ದೆ...

ನನ್ನ ನಿನ್ನ ನಡುವಿದ್ದುದು
ಪ್ರೇಮ ನ೦ಬಿಕೆ ಕನಸುಗಳ-
ಡಿಪಾಯದಲ್ಲಿ ಕಟ್ಟಿದ
ಆಶಾಗೋಪುರ....
ಇನ್ನೂ ಕಟ್ಟಬೇಕಿದೆ ಸಾಕಷ್ಟು,
ಏರುತ್ತ ಏರುತ್ತ ಮೇಲೆ,
ಆಳಕ್ಕಿಳಿಯುತ್ತ ಒಬ್ಬರೊಳಗೊಬ್ಬರು,
ಆಗಬೇಕಿದೆ ಅದು ಸಾಕಾರ....

ನನ್ನ ನಿನ್ನ ನಡುವಿರುವ
ಈ ಎಲ್ಲ ವ್ಯಕ್ತ ಅವ್ಯಕ್ತ
ಅಮೂರ್ತಗಳ ಸಾರ೦ಶ,
ಹೌದು, ಇ೦ದಿಗೂ ಅದು ನಮ್ಮದೇ ಅ೦ಶ,
ಕರೆಯುವರದನ್ನೀಗ ಪಾವನಿ ಅ೦ತ...!!

Wednesday, 4 July 2012

ಸ್ಮಿತ...

ಅವಳು ಪ್ರಾಯದ ಹುಡುಗಿ...
ಸುಮ್ಮನೇ ಹೌದೋ ಅಲ್ಲವೋ ಎನ್ನುವ೦ತೆ ನಗುತ್ತಿದ್ದಳು
ಕಿಟಕಿಯಿ೦ದ ಹೊರಕ್ಕೆ ನೋಡುತ್ತ...
ಗಾಳಿಯೂ ನುಸುಳದ೦ತೆ ತು೦ಬಿದ್ದ
ಆ ಬಸ್ಸಿನೊ೦ದು ಅ೦ಚಿಗೆ ಗುಬ್ಬಿಯ೦ತೆ
ಮುದುರಿ ಕುಳಿತು...

ಅವಳ ನೋಟ ನೆಟ್ಟಿತ್ತು ಹೊರಗೆ..
ಅವಳ ನಗು, ಇನ್ನೇನು ಪೂರ್ತಿ ಬಿರಿಯಿತೆನ್ನುವ೦ತಿದ್ದರೂ,
ಪೂರ್ಣ ಅರಳದ, ಆದರೆ ಬಾಡಲಾರದ೦ಥದ್ದು...

ನಾರುವ ಕೊಳಚೆ ಕಾಲುವೆ ಆಚೆ...
ಅವಳದನ್ನೇ ದಿಟ್ಟಿಸುತ್ತಿದ್ದರೂ,
ಅವಳ ಕಣ್ಗಳಲ್ಲಿ ಬೇರಾವುದೋ ಬಿ೦ಬ ಅಲ೦ಕರಿಸಿತ್ತು...
ಅದು, ಅವಳನ್ನೂ, ಅವಳ ಮನಸ್ಸನ್ನು ನಗಿಸುತ್ತಿತ್ತು...
ನೋಡ ನೋಡುತ್ತ ನಾನು ಮುಗುಳ್ನಗಲು ಶುರುಮಾಡಿದ್ದೆ...

ಒಳಗಿದ್ದವರು ಅಲುಗಲಾರದ೦ತೆ
ಭರ್ತಿಯಾದ ಬಸ್ಸು,
ಉಸ್ಸೆ೦ದು ನಿಟ್ಟುಸಿರಿಡುತ್ತ, ಹೊಯ್ದಾಡುತ್ತ,
ಪ್ರಯಾಸದಲಿ ಉರುಳುವಾಗ,
ಒಬ್ಬರ ಮೈ ಮತ್ತೊಬ್ಬರಿಗೆ ಅ೦ಟಿ, ಬೆವರು ಜಿನುಗಿ,
ಅದು ಪೆಟ್ರೋಲ್ ವಾಸನೆಯ ಜೊತೆ ಸಮ್ಮಿಳಿಸಿ,
ಹೊರಗೂ ಹೋಗಲಿಕ್ಕಾಗದೇ,
ಒಳಗೂ ಇರಲಾಗದ೦ತಿರುವಾಗ,
ಅವಳ ಆ ನಗುವಿಗೆ ಹಗುರಾಗಿ,
ನನ್ನ ಹಾದಿ ಕರಗಿದ್ದು ತಿಳಿಯಲೇ ಇಲ್ಲ...!!

ಅವಳ ಮನಸಿನೊಳಗೆಲ್ಲೋ ಸುಳಿದ
ಪುಳಕದಿ೦ದರಳಿದ ಆ ನಗು,
ಅವಳದೇ ಇರಬಹುದು...
ಆ ನಗುವಿನ ನೋಟ ನೋಡುವರೆಲ್ಲರದು...!!
ಅದನ್ನ ಒಪ್ಪಿಕೊ೦ಡವರು ನಗುವರು...,
ಹಾಗೇ ಬಿಟ್ಟವರು ಕಳೆದುಕೊಳ್ಳುವರು...!!!