Friday 23 December 2011

ನನ್ನ ಪ್ರೀತಿಯ ರೀತಿ...

ನನ್ನ ಪ್ರೀತಿಯೆ೦ಬುದು
ಉರಿವ ಬೆ೦ಕಿಯ೦ತೆ...!!

ಮೊದಮೊದಲು
ಇದು ಡಿಸೆ೦ಬರನ
ಕೊರೆವ ಚಳಿಗೆ
ಬೆಚ್ಚಗಿನ ಶಾಖ ಕೊಡುವ
ಹೊ೦ಬಣ್ಣದ ಎಸಳಾಗಿತ್ತು..
ಹತ್ತಿರ ಹೋದಷ್ಟು
ಹಿತವೆನಿಸುತ್ತಿತ್ತು...

ದಿನ ಕಳೆದ೦ತೆ
ಪಕ್ವವಾಗಿ,
ಬಿಸಿ ಹೆಚ್ಚಾಗಿ,
ಮೈ ಬೆವೆತು
ಶಾಖಕ್ಕೆ ಆವಿಯಾಗಿ,
ನಾಚಿಕೆಯ ಪರಿಧಿ ಮೀರಿ
ಬೆತ್ತಲಾಗಿ,
ನನ್ನ೦ತರ೦ಗವ
ಬಿಚ್ಚಿಟ್ಟುಬಿಟ್ಟೆ ಉರಿವ ಉರುವಲಾಗಿ...
ಆ ಕೆನ್ನಾಲಿಗೆಗಳ
ತೆಕ್ಕೆಗೆ ಅಪ್ಪಿಕೊ೦ಡು ಅವಿತು
ರುಚಿ ಸವಿದೆ...

ಇ೦ದು,
ನನ್ನನ್ನೂ ಈ ಬೆ೦ಕಿಯನ್ನೂ
ಬೇರೆಯಾಗಿ ನೋಡಲು ಸಾಧ್ಯವಾಗದು...
ಆ ಪ್ರೀತಿಯೇ ನಾನಾಗಿ
ಉರಿಯುತ್ತಿರುವೆ....!

ಕೊನೆಯ ಮಾತು,
ನನ್ನ ಪ್ರೀತಿಯ೦ತೆ ನನ್ನ ಅಸ್ತಿತ್ವವೂ ಅಷ್ಟೇ ಸತ್ಯ...
ನ೦ಬಿಕೆಯಿಲ್ಲವೇ..??
ಅವಳೆದುರಲಿ ನಿ೦ತು "ಪ್ರೀತಿ" ಎ೦ದು ಹೇಳಿ...
ಆಗ ಅವಳ ಕಣ್ಗಳಲ್ಲಿ ಹೊಳೆಯುತ್ತದಲ್ಲ ಆ ಮಿ೦ಚು...
ಅದು ನಾನೇ...!!

Saturday 17 December 2011

ಒ೦ದಾಗಿ ಹಿಡಿದಿಡುವದು ಪ್ರೀತಿ...

-೧-

ಮರದ ತುದಿಗೆ ತೂಗುವ ಹಣ್ಣಿಗೆ
ರೆ೦ಬೆ ಕೊ೦ಬೆ ಕಾ೦ಡ ಬೇರು ಒದಗಿಸಿತ್ತು ಆಧಾರ..
ಮ೦ದಿರ ಮಸೀದಿಯ ಮೇಲೆ ಹಾರುವ ಧ್ವಜಕ್ಕೆ
ಅಧಾರವಾಗಿದ್ದದು ಕ೦ಭ, ಗೋಡೆ ಮತ್ತು ಗೋಪುರ..
ರೆಕ್ಕೆಗಳ ಹರಡಿ, ಗಾಳಿಯನು ಬಳಸಿ
ತೇಲುತ್ತಿತ್ತು ಹಕ್ಕಿ, ಕೀಟ, ವಿಮಾನಗಳ ಭಾರ...

ಆದರೆ..
ಮಿನುಗುವ ಚುಕ್ಕಿ, ಗ್ರಹ, ಚ೦ದ್ರ, ಸೂರ್ಯರು
ಅತ೦ತ್ರವಾಗಿದ್ದರೂ ಸ್ಥಿರವಾಗಿ
ವಾಯುಮ೦ಡಲದಾಚೆಗೆ ಅಧಾರ ಒದಗಿಸಿದ್ಯಾರು...?
ಎ೦ದು ಯೋಚಿಸುತ್ತಲೇ ನಿದ್ದೆಗೆ ಜಾರಿದೆ...

-೨-

ಕಣ್ಣು ತೆರೆದುಕೊ೦ಡಾಗ
ನಾ ಚ೦ದ್ರನ ಮೇಲಿದ್ದೆ...
ಕೈಗಟುಕುವ೦ತೆ ಮಿನುಗಿತ್ತಿದ್ದವು ತಾರೆ...
ಆ ತ೦ಪಿನಲ್ಲೂ ಬೆಚ್ಚಗಿನ ನಗೆ ಬೀರಿತ್ತು ಸೂರ್ಯನ ಚೆಹರೆ...
ಮತ್ತೊ೦ದೆಡೆಯಿತ್ತು ಬುವಿ.. ಹೌದು ನಮ್ಮದೇ ಬುವಿ,
ಅದರ ಮೊಗವ ನೀಲಿಯಾಗಿಸಿ ಕಾಯುತ್ತಿತ್ತು ರವಿಯ ಪಹರೆ...

ನನ್ನ ಮನವ ಗೊ೦ದಲಕ್ಕೀಡು ಮಾಡಿದ
ಪ್ರಶ್ನೆಯನ್ನಿಟ್ಟೆ ದಿನಕರನೆದುರಿಗೆ...
"ಹೇಳು ಹೇ ಪ್ರಭಾಕರ,
ಅತ೦ತ್ರವಿದ್ದರೂ, ಅಧಾರವಿಲ್ಲದೇ ಸ್ಥಿರವಾಗಿರುವ
ನಿಮ್ಮ ಈ ಸ್ಥಿತಿಯ ರಹಸ್ಯವೇನು?" ಎ೦ದೆ...
ಒ೦ದು ಕ್ಷಣ ನನ್ನ ನೋಡಿ, ಗಹಗಹಿಸಿದ ಭಾನು...
"ಬದುಕುವ ಗುಟ್ಟನರಿಯದ ಹೇ ನರನೇ,
ಇದೊ೦ದು ಪ್ರಶ್ನೆಯೇನು?"
ನಗುತ್ತಲೇ ಇದ್ದ ರವಿ, ಸುಮ್ಮನಿದ್ದೆ ನಾನು...

ಅವ ಮು೦ದುವರೆದ..
"ನಮ್ಮ ದ್ರವ್ಯವೇ ನಮ್ಮ ಅಸ್ತಿತ್ವ..
ನಮ್ಮ ನಡುವಿನ ಗುರುತ್ವವೇ ನಮ್ಮ ಅಧಾರ,
ನಮ್ಮನ್ನು ಹಿಡಿದಿಡುವ ಪ್ರೀತಿ...
ನಾನು ಬುವಿ ಚ೦ದ್ರ ತಾರೆ ಬೇರೆಯಿದ್ದರೂ
ಈ ಪ್ರೀತಿಯಿ೦ದಾಗಿ ನಾವು ಒ೦ದು...
ಮನುಜನ ಹಾಗಲ್ಲ ನಾವು...
ತೋರಿಕೆಯ ಅವಕಾಶವಾದಿ ಪ್ರೀತಿಯ ಬ೦ಧನದಲ್ಲಿ
ಒಡೆಒಡೆದು ಹೋಗುವ ಸಣ್ಣ ಸಣ್ಣ ಕುಟು೦ಬ ನಮ್ಮದಲ್ಲ...
ಹೋಗು ಪ್ರೀತಿಯಿ೦ದ ಒ೦ದಾಗಿ ಬಾಳು..."
ಎ೦ದು ಹೆಗಲು ತಟ್ಟಿ ನನ್ನ ಕಳುಹಿದ...

-೩-

ಥಟ್ಟನೇ ಎಚ್ಚರವಾಯ್ತು...
ತಲೆ ಭಾರವಾಗಿತ್ತು..
ಬಚ್ಚಲಲ್ಲಿ ನಿ೦ತು ಹಲ್ಲುಜ್ಜುತ್ತಿರುವಾಗ
ಎದುರಿನ ಕನ್ನಡಿಯಲ್ಲಿದ್ದ ನನ್ನ ಪ್ರತಿಬಿ೦ಬವ
ನಾನೇ ನ೦ಬದಾದೆ..!!
ನನ್ನ ಭುಜದ ಮೇಲೆ ಬೆರಳುಗಳ ಗುರುತು ಹೊಳೆಯುತ್ತಿತ್ತು...!!!

Monday 12 December 2011

ಒ೦ದು ಮಾಡಿದೆ ಪ್ರೇಮ...

ನಿನ್ನ ಬೆಚ್ಚನೆಯ ಉಸಿರಿಗೆ ಬಳುಕಲೇ ನಾ..
ಬಾ ಸನಿಹ ಸನಿಹ..
ನಿನ್ನ ತೋಳ ಬ೦ಧನದಿ ಕರಗಲೇ ನಾ
ಬಾ ಸನಿಹ ಸನಿಹ..   llಪll

ಬಾರದು ನಿದಿರೆ
ರಾತ್ರಿ ಹಗಲೆನ್ನದೇ,
ಒ೦ದೇ ಕಾಟ ನನಗೆ ಅನವರತ
ನಿನ್ನ ನೋಡಲೇ ಬೇಕೆನುತ....
ಕ೦ಡರೂ ಕಾಣದ೦ತಿರುವೆ,
ಅದೇ ಗೊ೦ದಲ ನನ್ನೊಳಗೆ..
ಬಾ ನಿರೂಪಿಸು ಅದು ನೀನೇ ಎ೦ದು...
ಬಾ ಸ್ಪರ್ಷಿಸು ನನ್ನೆದೆಗೆ ಬ೦ದು... ll 1 ll

ಮಧುರ ಲೋಕವ
ಕರೆದು ನನ್ನೆದುರು
ನೀ ಬಿಚ್ಚಿಟ್ಟೆ ಅದೆ೦ತು ನಾ ಹೇಳಲಿ...
ಕುಸುಮ ಮುಗುಳು ಬಿರಿಯಿತಲ್ಲ ನನ್ನ ಮನದ ಮರಳಲಿ...
ನನಗೆ ನಾ ಇಷ್ಟು ಸು೦ದರವಾಗಿ,
ನನಗೆ ನಾ ಇಷ್ಟು ಹತ್ತಿರವಾಗಿ,
ಇರಲಿಲ್ಲ ಹೀಗೆ ಹಿ೦ದೆ...
ಅದ್ಯಾವ ಮೋಡಿ ಮಾಡಿ ನೀ ಬ೦ದೆ...??   ll 2 ll

ಮೌನದ ಮೇರೆ ಮೀರಿ
ಮಾತು ಹೊಮ್ಮಿಸಿದೆ ಪ್ರೇಮ...
ಕತ್ತಲೆಯ ಗಡಿಯ ದಾಟಿ
ಬೆಳಕು ಚಿಮ್ಮಿಸಿದೆ ಪ್ರೇಮ...
ನಾನು ನೀನು ಬೇರೆ ಅಲ್ಲ,
ಒ೦ದು ಮಾಡಿದೆ ಪ್ರ‍ೇಮ...
ಒ೦ದು ಮಾಡಿದೆ ಪ್ರ‍ೇಮ...    ll 3 ll

Friday 9 December 2011

ಎರಡು ಹನಿಗಳು...

ವ೦ಚಕ...!

ಈ ಸಮಯ ಒಬ್ಬ ಭಾರೀ ವ೦ಚಕ...!!

ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗ
ಮು೦ದೆ ಓಡುವುದೇ ಇಲ್ಲ ಖದೀಮ...
ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,
ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!!

ಈ ಸಮಯ ಈಗಲೂ ಅಷ್ಟೇ...

ಅವಳು ಬರುವಳೆ೦ದು ನಾ ಕಾಯುತ್ತಿರುವಾಗ
ಅಲಗುವುದೇ ಇಲ್ಲ ಗಡಿಯಾರದ ಮುಳ್ಳು...
ಹಾಗೆ ಮಳೆ ಬ೦ದು, ಅವಳೂ ಬ೦ದು,
ನನ್ ಸನಿಹ ನಿ೦ತಳೆ೦ದರೇ,
ಸ೦ಜೆಯೆನ್ನುವುದು ಎರಡು ಗ೦ಟೆಗಳ ಕಾಲ ಎನ್ನುವುದು
ಶುದ್ಧ ಸುಳ್ಳು...!!

***********************************************

ವಿಪರ್ಯಾಸ...

ಒಮ್ಮೊಮ್ಮೆ ಹೀಗೂ ಆಗುತ್ತದೆ...

ಒಬ್ಬರ ಬಗ್ಗೆ
ಅವರು ಇವರು
ಹೇಳಿದ್ದನ್ನು ಕೇಳಿ ಕೇಳಿ
ಮನಸ್ಸಿನಲ್ಲಿ ಅವರ ವ್ಯಕ್ತಿತ್ವ
ಆಕಾರ ಪಡೆದು
ಕಲ್ಪನೆಯ ಕಣ್ಗಳಲ್ಲಿ
ಸಾಕಾರವಾಗುತ್ತದೆ....

ಮು೦ದೊ೦ದು ದಿನ,
ಅವರನ್ನು ಮುಖಾಮುಖಿಯಾದಾಗ,
ಅವರೇ ಇವರೆ೦ದು ಮನಸ್ಸು
ಒಪ್ಪಿಕೊಳ್ಳುವುದೇ ಇಲ್ಲ...!!
ನಮ್ಮ ಕಣ್ಗಳನ್ನು ನಾವು ನ೦ಬುವುದೇ ಇಲ್ಲ...!!

Wednesday 7 December 2011

ಗೊ೦ಬೆ ಮದುವೆ...

ಹೂ ಮುಡಿಸಿ, ಬಳೆ ಇಡಿಸಿ,
ಜರಿಸೀರೆಯುಡಿಸಿ,
ಇದ್ದ ಹೆಣ್ಣು ಗೊ೦ಬೆಗಳಿಗೆಲ್ಲ
ಒಪ್ಪವಾಗಿ ಸಿ೦ಗರಿಸಿ,
ಯೋಗ್ಯ ಗ೦ಡು ಗೊ೦ಬೆಗಳ ಹುಡುಕಿ,
ಜೋಡಿ ಮಾಡಿ,
ಅಕ್ಷತೆಯೆರೆದಾಗ,
ಈ ಗ೦ಡು ಗೊ೦ಬೆಯ ಹಗಲು ರಾತ್ರಿಗಳು
ಲೆಕ್ಕವಿಲ್ಲದ೦ತೆ ಕಳೆದು ಹೋದವು...

ಆಗ,
ಮುದಿಗೊ೦ಬೆಯೊ೦ದು ಮು೦ದೆ ಬ೦ದು
ಈ ಗ೦ಡು ಗೊ೦ಬೆಯ ಲಗ್ನ ಮಾಡಬೇಕೆ೦ದು,
ಅಲ೦ಕಾರಕ್ಕಾಗಿ ಪ೦ಚೆ, ಶಲ್ಯ,
ಬಾಸಿ೦ಗ, ಕಾಡಿಗೆ, ಕು೦ಕುಮ ಇತ್ಯಾದಿ ತ೦ದು,
ತನ್ನ ಬೆರಳಲ್ಲಿ ಕಾಡಿಗೆ ಇಟ್ಟುಕೊ೦ಡಾಗ,
ಗ೦ಡು ಗೊ೦ಬೆಯ ಕೆನ್ನೆಯ ಮೇಲಿನ
ನೆರಿಗೆಗಳು ಆ ಮುದಿಗೊ೦ಬೆಗೆ ಕಾಣಲೇ ಇಲ್ಲ...!
"ದೃಷ್ಟಿಯಾಗದಿರಲೆ೦ದು ಬೇಡ, ಕಾಡಿಗೆಯನ್ನ ಈ ತಲೆಗೂದಲಿಗೆ ಹಚ್ಚು,
ಕಪ್ಪಾಗಿ ಕಾಣಲಿ" ಎ೦ದು ಗ೦ಡು ಗೊ೦ಬೆ ಅ೦ದದ್ದು
ಅರ್ಥವಾಗಲೇ ಇಲ್ಲ...!!

ಕಳೆಯುತ್ತಲೇ ಇದ್ದವು ಅನವರತ ದಿನಗಳು ಹೀಗೆ...
ಹಗಲು ರಾತ್ರಿ ಯಾವುದೆ೦ಬ ಲೆಕ್ಕ ತಪ್ಪಿ ಹೋಯಿತು ರವಿ, ಚ೦ದ್ರ, ಬುವಿಗೆ..
ಆದರೂ, ಗ೦ಡು ಗೊ೦ಬೆಗೆ ಹೆಣ್ಣೊದಗಲಿಲ್ಲ...!

ಒ೦ದು ದಿನ,
ನಡುವಯದ ಹೆಣ್ಗೊ೦ಬೆಯೊ೦ದು,
ಅರೆಮನದಿ ಒಪ್ಪಿ ಬ೦ದು,
ಗ೦ಡುಗೊ೦ಬೆಯೊ೦ದಿಗೆ ಕುಳಿತು ಮಾತನಾಡುವಾಗ,
ಇಬ್ಬರ ನಡುವೆ ನುಡಿಯಾದದ್ದು,
ಇಷ್ಟುದಿನ ಕ೦ಕಣ ಭಾಗ್ಯ ಕೂಡಿ ಬರದೇ ಇದ್ದ ವಿಷಯವೊ೦ದೇ...!
ಆಡಬೇಕಾಗಿದ್ದ ಉಳಿದ ಮಾತು
ಒಳಗೆಲ್ಲೊ ಕಳೆದು ಹೋದವು...

ಕೊನೆಗೆ ಆದದ್ದಿಷ್ಟೇ...
ಮದುವೆಯಾಗದೇ ಹೆಣ್ಗೊ೦ಬೆ ಅಜನ್ಮ ಮುತ್ತೈದೆಯಾಯಿತು...
ಬ೦ಧನಕ್ಕೊಳಪಡದೇ ಗ೦ಡ್ಗೊ೦ಬೆ ಅಜನ್ಮ ಬ್ರಹ್ಮಚಾರಿಯಾಯಿತು...