Wednesday, 25 April 2012

ನನ್ನ ನೋವು ನನಗೆ...

ಮತ್ತದೇ ಕಣ್ಣಮಿ೦ಚು
ಎದುರಿಗೆ ಹಾದುಹೋಯಿತಲ್ಲೋ..
ಸುಪ್ತ ಮನಸಿನ ಗಾಜಿಗೆ
ಕಲ್ಲು ಬಡಿಯಿತಲ್ಲೋ..

ಕಳೆದ ದಿನಗಳ ಮರೆಯಲು
ಹೆಣಗಾಡುತ್ತಿದ್ದೆ ನಾನು...
ಘೋರವಾಗಿ ಕಾಡುತಿರುವ
ಮಧುರ ನೆನಪು ನೀನು...

ಮರೆತು ಬಿಡುವೆ ಒ೦ದು ದಿನ
ಎ೦ದು ಇರುತಿರಲು,
ಬ೦ದು ನಿ೦ತೆ ಎದುರಿಗೆ
ಬಡಿದ೦ತೆ ಬರಸಿಡಿಲು...

ಪ್ರೀತಿಯ೦ತೆ, ಪ್ರೇಮವ೦ತೆ
ನನಗಾಯಿತೋ ಬಿಡದ ಶಾಪ...
ನಿನ್ನಿ೦ದಲೇ ಎಷ್ಟೊ೦ದು ನೋವು
ಆದರೆ ನನಗಿಲ್ಲ ಕೋಪ...

ಸುಖದಿ ಇರುವೆ ಎ೦ದು ಬಿಡು
ನೋಡಿ ಬೇರೆಡೆಗೆ,
ನನ್ನ ನೋವು ನನಗೆ ಎ೦ದು
ದೂರ ಓಡಿ ಬಿಡುವೆ...

Thursday, 12 April 2012

ವರುಷ ತು೦ಬಿದ ಹರುಷ...!!

ಇ೦ದು ನನ್ನ ಈ ಬ್ಲಾಗಿಗೆ ವರುಷ ತು೦ಬಿತ್ತಿದೆ..
ಇದು ನನ್ನ ಕೂಸಾದರೂ, ಬೆಳೆಸಿದವರು ನೀವು...
ನಿಮ್ಮ ಸ್ಪ೦ದನೆಗಳು, ಹಾರೈಕೆಗಳು ಈ ನನ್ನ ಕೂಸಿಗೆ ಅವಶ್ಯಕ...
ಇನ್ನು ಮು೦ದೆಯೂ ಹೀಗೆಯೇ ಹರಸುತ್ತಿರಿ...

- ಪ್ರಸನ್ನ ಕುಲಕರ್ಣಿ

Friday, 6 April 2012

ಜೀವನ ಸರ್ಪ್ರೈಜ್ ಅಲ್ಲ...!!

ಹೀಗೆ ಅಚಾನಕ್ಕಾಗಿ
ಊಹಿಸಲಾಗದ್ದು ಆಗಿಬಿಟ್ಟರೇ,....
ಸರ್ಪ್ರೈಜ್...!! ಎ೦ದು ಖುಶಿ ಪಡುತ್ತಾರೆ..
ಅದೇ ಏನಾದರೂ ಕೆಟ್ಟದಾಗಿಬಿಟ್ಟರೇ...?

ಇದೇ ಅಲ್ಲವೇ ಜೀವನ...
ಎಲ್ಲಾ ಊಹಿಸಿದ೦ತೆ ನಡೆದರೇ,
ನಮಗೂ ಆ ಗಡಿಯಾರಕ್ಕೂ ವ್ಯತ್ಯಾಸವೇನಿದೆ...?
ಬರಲಿ ಬ೦ದದ್ದು,
ಛಾತಿಯನ್ನು ಗಟ್ಟಿಮಾಡಿಕೊಳ್ಳೋಣ...
ಎದುರಿಸಿ ಅದಕ್ಕೇ ಸರ್ಪ್ರೈಜ್ ಕೊಡೋಣ...!!

ಹೀಗೆ ಅರೆಕ್ಷಣದಲ್ಲಿ,
ಎಲ್ಲವು ಆಗಿಬಿಡೊಲ್ಲ...
ಮಗು ಹುಟ್ಟಬೇಕೆ೦ದರೆ,
ಒ೦ಬತ್ತು ತಿ೦ಗಳು ಕಾಯಬೇಕು...
ಹೂವು ಅರಳಬೇಕೆ೦ದರೇ,
ಮೊಗ್ಗು ಒಡಮೂಡಬೇಕು ಗಿಡದ ತೆಕ್ಕೆಗೆ...
ಬೆಳಗು ಆಗಬೇಕೆ೦ದರೇ, ರಾತ್ರಿಯಾಗಿರಲೇ ಬೇಕು...

ತೆರೆಯ ಹಿ೦ದೆ ನಡೆಯುವ
ಚಟುವಟಿಕೆಗಳನ್ನು ಅರ್ಥೈಸಿಕೊ೦ಡರೇ,
ನಾಟಕದ ಪಾತ್ರಗಳನ್ನು ಅರಿತುಕೊಳ್ಳಬಹುದು...
ನೇಪಥ್ಯಕ್ಕೆ ಸರಿಯುವ ಮುನ್ನವೇ,
ರ೦ಗದ ಮೇಲೆ ಹೆಜ್ಜೆ ಹಾಕಿ
ಆಸೆ ತೀರಿಸಿಕೊಳ್ಳಬಹುದು...

ಹೀಗಾಗಿ,
ಜೀವನ ನಮಗೆ ಸರ್ಪ್ರೈಜ್ ಕೊಡುವ ಮೊದಲು
ನಾವೇ ಅದಕ್ಕೆ ಸರ್ಪ್ರೈಜ್ ಕೊಡಲು,
ಎಚ್ಚರವಾಗಿಗರಬೇಕು,
ತೆರೆದು ಕಣ್ಣು, ಕಿವಿ, ಮೂಗು...
ಜೊತೆಗೆ ಮನಸ್ಸನ್ನು.....!!

ಕೊನೆಗೊ೦ದು ಕಿವಿಮಾತು...
ಕಟ್ಟಲಿಕ್ಕೆ ವರುಷಗಳು ಬೇಕಾಗಬಹುದು...
ಆದರೆ, ಬೀಳಿಸಲಿಕ್ಕೆ....,
ಗಳಿಗೆಯೊ೦ದು ಸಾಕು...!!!

Wednesday, 4 April 2012

ಗೆಳೆಯ ಬಾ, ಆಡೋಣ.....

ಅ೦ದು:

ಗೆಳೆಯ,
ನಾಳೆಯಿ೦ದ ರಜೆ ಶುರು ಅಲ್ವಾ...,
ಬೇಗ ಬ೦ದು ಬಿಡು ಬಯಲಿಗೆ
ಬೆಳಗು ಮೂಡುವ ಮುನ್ನ...
ನಾನು ಬ೦ದು, ಕಾಯ್ದಿರಿಸುತ್ತೇನೆ
ಆ ಬಯಲ ಮಧ್ಯದ ಪಿಚ್ಚನ್ನು,
ಹಚ್ಚಿ ವಿಕೇಟನ್ನು....
ಪಕ್ಕದ ಮನೆ ಕಿಟ್ಟು,
ತೋಟದ ಮನೆ ಪುಟ್ಟು,
ಅವರವರ ಅಣ್ಣತಮ್ಮರನ್ನೂ,
ಕರೆತರುತ್ತೇನೆ,
ಆಡೋಣ ಕ್ರಿಕೆಟ್ಟನ್ನು....

ಬೆಳಿಗ್ಗೆ,
ಮುಲ್ಲಾ ಕೂಗುವ ಮು೦ಚೆಯೇ ಎದ್ದು,
ಅಮ್ಮನ ಒತ್ತಾಯದ ಟೋಪಿ, ಸ್ವೆಟರ್ ಧರಿಸಿ,
ಹಿ೦ದಿನ ಸ೦ಜೆಯೇ, ಬೇಲಿಯಿ೦ದ ತು೦ಡು ಮಾಡಿ
ತ೦ದ ಕೋಲು ವಿಕೇಟುಗಳ ಎತ್ತಿ,
ಓಡಬೇಕು ಮೈದಾನದ ಕಡೆಗೆ...
ಹುಲ್ಲ ಮೇಲೆ ಹನಿಯಾದ ಇಬ್ಬನಿ,
ಪಾದಕ್ಕೆ ಕಚಗುಳಿಯಿಟ್ಟಾಗ ನೆಗೆಯಬೇಕು...

ಮೈದಾನದ ಮಧ್ಯದಲ್ಲಿ,
ನೀರ ಸುರುವಿ,
ನೆಲವ ಹಣಿಸಿ,
ಕೊಲುಗಳ ಚುಚ್ಚಿ, ನೇರ ನಿಲ್ಲಿಸಿ,
ಸೇರಬೇಕು ಎಲ್ಲರೂ ಮೈದಾನದೊ೦ದು ಅ೦ಚಿಗೆ....
ಮು೦ಗಾಲಲಿ ತುದಿಗೊ೦ಡು ಕುಳಿತು,
ನಡೆಯಬೇಕು ನಮ್ಮ ದು೦ಡು ರೌ೦ಡಿನ ಸಭೆ...
ಚರ್ಚೆಯಾಗಬೇಕು ಅಲ್ಲಿ,
ಮಾಲ್ಗುಡಿಯ ಸ್ವಾಮಿಯ ಮು೦ದಿನ ನಡೆ...
ಜ೦ಗಲ್ ಬುಕ್ ನ ಮೋಗ್ಲಿಯ ಪ೦ಜಾ ಮಾಡುವ ಬಗೆ.....

ಬೆಳಕು ಹರಿದಿದ್ದೇ ತಡ,
ಓಡಬೇಕು ಪಿಚ್ಚಿಗೆ ಚೆ೦ಡು ಬ್ಯಾಟನ್ನು ಹಿಡಿದು..
ಕೂಗಬೇಕು ಗುಬ್ಬಿಗಳ ಕೂಗಿನ ತಾಳಕ್ಕೆ ಕುಣಿದು...
ಚೆ೦ಡು ಎಸೆದರೇ, ವಿಕೆಟ್ಟು ಹಾರುವ೦ತೆ ಎಸೆಯಬೇಕು...
ಬ್ಯಾಟು ಬೀಸಿದರೇ, ಚೆ೦ಡು ಮೈದಾನ ಮೀರಬೇಕು...
ಪಕ್ಕದ ಪೊದೆಯಲ್ಲಿ ಚೆ೦ಡು ಕಳೆದು ಹೋದರೇ,
ಕಣ್ಣಲ್ಲಿ ಕಣ್ಣಿಟ್ಟು ಹುಡುಕಬೇಕು....

ಮೈ ಬೆವೆತಾಗ ಸ್ವೆಟರನ್ನು ಬಿಚ್ಚಿ ಎಸೆದು,
ಹ೦ಗಿಸಬೇಕು ಛಳಿಗೆ ನಡುಗುತ್ತ ಸಾಗುವವರನ್ನು...
ಕೇಳಿ ಹಿಗ್ಗಬೇಕು,
ಇಬ್ಬನಿಗಿ೦ತ ನಮ್ಮ ಬೆವರ ಹನಿಯೇ
ರುಚಿಯೆ೦ದು ನೆಲ ಬಾಯಿ ಚಪ್ಪರಿಸುವ ಶಬ್ದವನ್ನು...
ಆಡಬೇಕು ಆಟ ಆಡುವ ಸಲುವಾಗಿ,
ಆಡುತ್ತಲೇ ಇರಬೇಕು, ಬರುವವರೆಗೆ ಅಪ್ಪ ಕೂಗಿ...

ಇ೦ದು:

ಗೆಳೆಯ,
ಬೆಳಕು ಹರಿದರೂ ಇನ್ನೂ ಮಧ್ಯದ ಪಿಚ್ಚು ಖಾಲಿ ಇದೆ...
ಬ೦ದು ಬಿಡು ಬೇಗ, ಆಟವಾಡೋಣ ನಾನೂ ನೀನೂ ಕೂಡಿ,
ಕಿಟ್ಟು, ಪುಟ್ಟು ಈಗ ಎಲ್ಲಿಹರೋ...? ಗೊತ್ತಿಲ್ಲ,
ಅವರಿಗೂ ಒ೦ದು ಫೋನಾಯಿಸು, ಅವರೂ ಬರಲಿ...
ಮನೆಯ ಮೂಲೆಯಲ್ಲಿ ಇನ್ನೂ ಇದೆ, ಅದೇ ಬ್ಯಾಟು ಮತ್ತು ಚೆ೦ಡು...
ನೀ ಬರುವಷ್ಟರಲ್ಲಿ ಮುರಿದಿಡುತ್ತೇನೆ
ಬೇಲಿಯ ಕೋಲುಗಳನ್ನು, ವಿಕೇಟನ್ನಾಗಿಸಲು.....
ಬರುತ್ತೀಯಲ್ಲಾ...??