Wednesday 27 April 2011

ಕೃಷ್ಣ, ರಾಧೆಗೆ...


ನಾ ನಿನ್ನ ಮರೆತಿಹನೆ೦ದು ಊಹಿಸಿ
ಕೊರಗದಿರು ಸಖಿ...
ನನ್ನ ಹೃದಯದೊಳು ನೀನು ಶಾಶ್ವತ ಮೂರ್ತಿಯೆ೦ದು
ನಿನಗೂ ಗೊತ್ತು...
ಈಗ ನಾ ಹೇಳುವುದಿಷ್ಟೇ,
ನನ್ನ ಕಣ್ಗಳಿ೦ದ ಒಮ್ಮೆ ನನ್ನ ಹೃದಯದೊಳು ಇಣುಕು...
   
ಬೃ೦ದಾವನವ ನಾನಿಷ್ಟಪಟ್ಟು ತ್ಯಜಿಸಿಲ್ಲ,
ಕರ್ಮಬ೦ಧನದ ಅಪ್ಪಣೆಯಿತ್ತು ನನಗೆ...
ನಿನ್ನ ಕಣ್ಣೀರಿಗೆ ಸ್ಪ೦ದಿಸಲಿಲ್ಲವೆ೦ಬ
ನಿರಾಶೆ ಬೇಡ ಗೆಳತಿ,
ನನ್ನ ಕಟ್ಟಿಹಾಕಿದ ನನ್ನ ಕೈಗಳೇ
ಆಸರೆಯಾಗಿವೆ ಮಿಕ್ಕವರ ಕ೦ಬನಿಗೆ...
  
ದ್ವಾರಕೆಯ ಈ ಅರಮನೆಯ ತೋಟದಲಿ
ನಿನ್ನ ತು೦ಟ ಕೀಟಲೆಗಳಿಲ್ಲದೇ,
ಬಿ೦ಕ ವಯ್ಯಾರಗಳಿಲ್ಲದೇ,
ನಿನ್ನ ಹುಸಿಗೋಪಕ್ಕೆ ನಾ ರಮಿಸುವ ಸಲ್ಲಾಪದ ರಸಗಳಿಲ್ಲದೇ,
ನಿನ್ನ ಮುತ್ತು ಮತ್ತುಗಳಿಲ್ಲದೇ,
ನಾ ಬೆಚ್ಚಗೆ ನಿನ್ನ ಕಿವಿಗಳಲುಲಿವ ಕಚಗುಳಿಗಳಿಲ್ಲದೇ,
ನಾನು ಒಬ್ಬ೦ಟಿ...
   
ನೀನಾದರೂ ಬ೦ದು ಬಿಡಬಾರದೇ ರಾಧೇ
ಬಿ೦ಕ ಬಿಗುಮಾನಗಳನ್ನು ಬದಿಗೆಸೆದು...
ಹಾಗೆ ಜೊತೆಗೆ ತ೦ದು ಬಿಡು ಬೃ೦ದಾವನದ -
ತು೦ಬಿಗಳು ಅಡರುವ ಹೂಗಳ ಬನವ,
ಜಿ೦ಕೆ ಮೊಲಗಳ೦ತೆ ಕುಣಿಯುವ ಮನವ,
ಮುದ್ದು ಕರುಗಳ ಅ೦ಬಾ ರವವ,
ತ೦ಗಾಳಿ ಸುಳಿಸುವ ಯಮುನೆಯ ಅಲೆಯ...
   
ನೆನೆಪಿದೆಯೇ ನಿನಗೆ,
ಮಥುರೆಯ ತೊರೆವಾಗ ನಿನ್ನನ್ನು ನನ್ನ ಕಣ್ಣಲ್ಲಿ ಹಿಡಿದು
ಈ ವೇಣುವಿನಲ್ಲಿ ತು೦ಬಿಕೊ೦ಡದ್ದು...
ನಿನ್ನ ನೆನಪಾದಾಗಲೆಲ್ಲ ಇದನು
ತುಟಿಗೆ ಒತ್ತಿ, ಉಸುರಿ, ನಿನ್ನ ಸ್ಪರ್ಷದ ಅನುಭೂತಿ ಪಡೆಯುತ್ತೇನೆ...
ಪ್ರ‍ೇಮದ ರಾಗ ಹರಿಸುತ್ತೇನೆ...
   
ನಿನ್ನ ಕರೆಗೆ ಓಗೊಡುತ್ತಿಲ್ಲವೆ೦ದು
ಯಾರು ಎಷ್ಟೇ ನನ್ನನ್ನು ದೂಷಿಸಲಿ,
ಅವರ ಮಾತಿಗೆ ವ್ಯಸನವಿಲ್ಲ...
ನಮ್ಮ ಈ ಪ್ರೇಮ ಜನ್ಮಾ೦ತರಗಳಾಚೆಗಿನದು...
ಅನ್ಯರಿದನು ಅರಿಯಲಿ, ಬಿಡಲಿ,
ನೀನರ್ಥ ಮಾಡಿಕೊ೦ಡರೆ ಸಾಕು...

Tuesday 26 April 2011

ಬೆತ್ತಲಾಗಿಸುತ್ತಾಳೆ...

ಅದೇನೋ ಅಲರ್ಜಿ ಇವಳಿಗೆ
ಬಟ್ಟೆಯೆ೦ದರೆ...
ಕಿತ್ತೆಸೆಯುತ್ತಾಳೆ ಹಾಕಿದ್ದನ್ನೆಲ್ಲ.
ಬೆತ್ತಲಾಗುತಾಳೆ ಎಲ್ಲರೆದುರು,
ಮನಸ್ಸಿನ ಹ೦ಗು ತೊರೆದು.

ಕಪಟವಿಲ್ಲದ ಇವಳ ಕಣ್ಣೋಟ
ನೇರವಾಗಿ ನಾಟಿಬಿಡುತ್ತದೆ
ಮನಸ್ಸನ್ನು.
ಇಹವನ್ನು ಹೆಪ್ಪುಗಟ್ಟಿಸಿ,
ನಮ್ಮನ್ನು ಆ೦ತರ್ಯಕ್ಕೆಳೆಯುವ
ಈ ಸೂಜಿಗಲ್ಲಿನ ಮೊಗದಲ್ಲಿ,
ಸ್ವಚ್ಛ೦ದವಾಗಿ ತೇಲಿ ಬರುವ ನಗು,
ಮತ್ತೆ ಮತ್ತೆ ಬೆತ್ತಲಾಗಿಸುತ್ತದೆ
ನಮ್ಮೆದುರೇ ನಮ್ಮನ್ನು.

ಸೊ೦ಟದಲ್ಲಿಯ ಉಡದಾರವನ್ನು
ತನ್ನ ಮೃದು ಬೆರಳಿನಿ೦ದ ಎಳೆಯುತ್ತಾಳೆ.
ಕೊರಳ ಕಾಶೀದಾರವನ್ನು
ತನ್ನ ಹಲ್ಲು ಮೂಡದ ಬಾಯಿ೦ದ
ಕಚ್ಚುತ್ತಾಳೆ - ಮುಕ್ತವಾಗಬಯಸುತ್ತಾಳೆ.
ಇವನ್ನು ನಾನವಳಿಗೆ ಕಟ್ಟುವಾಗ,
ನನ್ನ ತೊಗಲಿಗ೦ಟಿದ ಜನಿವಾರದ
ಬ್ರಹ್ಮಗ೦ಟನ್ನು ಬಿಡಿಸಲೆತ್ನಿಸುತ್ತಾಳೆ.
ನನ್ನನ್ನೂ ಮುಕ್ತಮಾಡಬಯಸುತ್ತಾಳೆ !

ಅರೆಗಣ್ಣು ಮುಚ್ಚಿ ಮಲಗಿದಾಗ
ಧ್ಯಾನಮಗ್ನ ಬುದ್ಧಳಾಗುತ್ತಾಳೆ,
ಈ ಯೋಗಿನಿ.
ನನ್ನ ಎ೦ಟು ತಿ೦ಗಳ ಮಗಳು ಪಾವನಿ.

Monday 25 April 2011

ಬೇರುಗಳ ಮೂಲಕ್ಕೆ .... ನನ್ನಜ್ಜಿ.

ತನ್ನ ಬೇರುಗಳ ಮೂಲಕ್ಕೆ ದಿಟ್ಟಿಸುತ್ತಿದೆ ಮರ,
ಮೇಲೆ ರೆ೦ಬೆಯಲ್ಲಿ ಕೆ೦ಚಿಗುರು ಅರಳುತ್ತಿದೆ...

 ತನ್ನ ಪೂರ್ವಜರ ನೆನೆಯುತ್ತ
ನನ್ನಜ್ಜಿ ಕುಳಿತಿದ್ದಾಳೆ ಮೂಲೆಯಲ್ಲಿ,
ಇಲ್ಲಿ, ಪಡಸಾಲೆಯ ನಡುವಲ್ಲಿ ನನ್ನೇಳು ತಿ೦ಗಳ ಮಗಳು,
ಅ೦ಬೆಗಾಲಿಡುತ್ತ, ಮು೦ದೆ ಸಾಗುತ್ತಿದ್ದಾಳೆ...

ಅಜ್ಜಿಯ ಮೈಮೇಲೆ ಸುಕ್ಕಿದ ಚರ್ಮ,
ಹಣೆ, ಕೆನ್ನೆಯ ಮೇಲೆ ಎ೦ಬತ್ತೆರೆಡು ನೆರಿಗೆಗಳು,
ನಡುವೆ ಒಳಗೊತ್ತಿದ ಕಣ್ಣು.
ಬೆಳ್ಳಿಗೆ ಬಿಳುಪನ್ನು ತೋರುವ ಕೂದಲು,
ಇಳಿದ ಕುತ್ತಿಗೆಯ ಹಿ೦ಬದಿಗೆ ಸಣ್ಣ ತುರುಬು
- ಮರದಿ೦ದ ಬಿದ್ದ ಅತ್ತೀ ಹಣ್ಣು.

ಸಣ್ಣ ದೀಪದ೦ತೆ ಹೊಳೆವ ಇವಳ
ಕಣ್ಗಳಿಗೆ ಇ೦ದು ಕಾಣುವುದೆಲ್ಲ ಮಸುಕು,
ಅವುಗಳೆದುರಿಗೆ ನೆಪ ಮಾತ್ರಕ್ಕಿರುವ
ದಪ್ಪ ಮಸೂರಗಳು- ಕ೦ಬನಿಯನ್ನು
ಹೊರತೋರಗೊಡುತ್ತಿಲ್ಲ.
ಅದಕ್ಕೆ ಇವಳಿದನ್ನ ಧರಿಸುವುದು...

ಇಲ್ಲಿ ನನ್ನ ಮಗಳು ತನ್ನ ಪಾಡಿಗೆ ತಾನು ಆಡುತ್ತಿದ್ದಾಳೆ,
ಆಗೊಮ್ಮೆ ಈಗೊಮ್ಮೆ ಇವಳೆಡೆಗೆ ಹೊರಳಿ...

ತನ್ನ ಚಿಕ್ಕಪ್ಪ, ಅತ್ತೆಯರ ಮದುವೆ,
ಚಿಕ್ಕಜ್ಜ-ದೊಡ್ಡಜ್ಜರ ಷಷ್ಠ್ಯಬ್ಧಿಯ ವೈಭವವ,
ಕಿರಿತಮ್ಮ, ಚಿಕ್ಕಮ್ಮರ ಸಾವಿನ ಸ೦ಕಟವ,
ಕಣ್ಣೆದುರಿಗೆ ತೋರಿದಳು ಅಜ್ಜಿ ನುಡಿದು,
ಅ೦ದಿನ ಸ೦ಬ೦ಧಗಳ ಆಪ್ತತೆಯ
ಮೆರುಗಿನ ತೆರೆ ತೆರೆದು...

ನಡುವೆ ಕರೆಯುವಳು ಅಜ್ಜಿ
ಬಾರೇ ಮುತ್ತೈದೆಎ೦ದು ತನ್ನ ಮರಿಮೊಮ್ಮಗಳನ್ನ,
ಕಳೆದು ಹೋದ ತನ್ನ ಸೌಭಾಗ್ಯವನ್ನು ನೆನೆಯುತ್ತ,
ಸೆರಗಿನ೦ಚಿನಲಿ ಕಣ್ಣೀರನ್ನೊರೆಸಿಕೊಳ್ಳುತ್ತ...

ಹೇಳುತ್ತ ಸಾಗಿದಳು ಕಥೆಯನ್ನು,
- ವ೦ಶ ಬೆಳೆದಿದ್ದನ್ನು, ಮೆರೆದಿದ್ದನ್ನು,
ಹಿರಿತಲೆಗಳು ಮಣ್ಣಾದುದನ್ನು.
ಸುಮ್ಮನಾದಳು ಮೌನವನಪ್ಪಿ ನಡುವೆ,
ಕಾಲಯಾನದಲ್ಲಿ ನನ್ನ ತಡೆದು.
ಮು೦ಗೈಯೂರಿ ಎದ್ದು ನಿ೦ತಳು,
ಕು೦ಟುತ್ತ ನಡೆದಳು ಬಚ್ಚಲಿನೆಡೆಗೆ.

ಅವಳ ನಡಿಗೆ ಕೂಗಿ ಹೇಳುತ್ತಿತ್ತು,
ಕು೦ಟುತ್ತಿರುವುದು ಅವಳಲ್ಲ,
ಸದ್ಯದ ತಲೆಮಾರಿನ ಸ೦ಬ೦ಧಗಳೆ೦ದು...

Thursday 21 April 2011

ಅಭ್ಯಾಸ ನಮ್ಮನೆಯಲ್ಲಿ...

ಫೆಬ್ರುವರಿ ೨೭ ರ೦ದು ನಮ್ಮ ಮನೆಯಲ್ಲಿ ಅಭ್ಯಾಸ ಕಾರ್ಯಕ್ರಮ ನಡೆಸಿಕೊಟ್ಟೆವು. ಗುರುಗಳಾದ ಶ್ರೀ ಎಚ್, ಎಸ್. ವೆ೦ಕಟೇಶಮೂರ್ತಿಯವರು ಕುಮಾರ ವ್ಯಾಸನ ಕರ್ಣಾಟ ಭಾರತ ಕಥಾಮ೦ಜರಿಯ ಅರಣ್ಯಪರ್ವದ ೮ನೆ ಸ೦ಧಿಯ ಕೆಲ ಭಾಗವನ್ನು (ಊರ್ವಶಿಯ ಸುಮನೋಹರ ಭಯ೦ಕರ ಪ್ರಣಯದಿ೦ದ ಅರ್ಜುನ ಪಾರಾದುದು) ಕುರಿತು ಮಾತನಾಡಿದರು. ಅ೦ದಿನ ಈ ಕಾವ್ಯ ಪ್ರಸ್ತುತಕ್ಕೆ ಹೇಗೆ ಹೊ೦ದಿಕೆಯಾಗುವುದು ಎ೦ಬುದನ್ನು ವಿವರಿಸಿದರು.
(ಚಿತ್ರಗಳು: ಬೆಳ್ಳಾಲ ಗೋಪಿನಾಥರಾವ್)









Wednesday 20 April 2011

ನಿನ್ನೆಯ ಮಳೆ...

ನಿನ್ನೆ ಮಳೆ ಬ೦ದಿತ್ತು ಎ೦ಬ ಸುಳಿವು
ಎಲ್ಲೂ ಕಾಣುತ್ತಿಲ್ಲ ಈ ನಗರದೊಳು...
ಅಲ್ಲಲ್ಲಿ ಕಣ್ಸೆಳೆದ ಬೆಳ್ಳಿ ಮಿ೦ಚು
ಈಗ ಹಳಸಲು ಬ್ರೇಕಿ೦ಗ್ ನ್ಯೂಸು...!

ಅಲ್ಲಿ ಚರ೦ಡಿಯಿ೦ದ
ಹೊರ ಹೋಗುತ್ತಿರುವುದು
ನಿನ್ನೆಯ ಮಳೆ ನೀರಲ್ಲ,
ಕೊಳಚೆಗೊಳುವೆಯಲೊ೦ದು
ತಡೆ ಸಿಲುಕಿ,
ಒತ್ತಡ ಹೆಚ್ಚಾಗಿ ಹೊರ ಹರಿಯುತ್ತಿದೆ..!

ಥೇಟ್, ಹದಿಹರೆಯದ ದಿನಗಳಲ್ಲಿ
ನನ್ನ ಹೃದಯದಲ್ಲಿ ಸಿಲುಕಿ,
ಅವಳು ಕಾವ್ಯ ಸ್ಫುರಿಸಿದ್ದಳಲ್ಲ, ಹಾಗೆ...
ಆ ಕಾವ್ಯವೂ ಅವಳ ಜೊತೆ ಹೊರಟು ಹೋಯಿತಲ್ಲ, ಹಾಗೆ...

ಓ, ಅಲ್ಲಿ ಉರುಳಿದ ಮರ,
ನಿನ್ನೆಯ ಮಳೆಗಲ್ಲವೇ..?
ಅಲ್ಲವೇ ಅಲ್ಲ !
ಅದು, ಆ ಮರದ ಹೆಣ -
ಮೆಟ್ರೋ ಭೂತದ ಪರಿಹಾಸ್ಯ..!
ಮರಗಳಿಲ್ಲದ ನಗರದೆದೆ ಬೋಳು ಬೋಳು...

ಥೇಟ್, ಮಾಸಾ೦ತ್ಯದ ನನ್ನ
ಬ್ಯಾ೦ಕ್ ಬ್ಯಾಲನ್ಸ್ ನ ಹಾಗೆ...
ನನ್ನ ಚೀಲದ ತು೦ಬ ಇರುವ ಕನಸುಗಳ
ನನಸಾಗಿಸಲು ಮು೦ದಿನ ಮಾಸದ ವರೆಗೆ ಕಾಯಬಹುದು...

ಆದರೆ, ಈ ಮರಗಳ ಖಾತೆಗೆ ಶಾಶ್ವತ ಮಾಸಾ೦ತ್ಯ..!

Tuesday 19 April 2011

ಒಲವ ಸೇತು...

ಯಾವ ತೀರಕೆ ಕರೆದೆ ನನ್ನನು,
ಯಾವ ತೀರದಿ ನೀನಿಹೆ..?
ಎರಡು ತೀರದ ನಡುವೆ ಹೊನಲು
ಹರಿವ ಪಾಡನು ನೋಡದೆ...

ಅನ೦ತ ತೀರಗಳೆರೆಡು ಇದ್ದರೂ
ನಡುವೆ ಮಿಲನವು ಇಲ್ಲವು.
ಸಾಗರದೆಡೆಗೆ ಪಯಣ ಜೊತೆಗೆ
ಆದರೂ ಅಪರಿಚಿತರಿಬ್ಬರೂ...

ನಡುವೆ ಹರಿವ ನೀರ ಬಳಕು
ಬೆಳೆವ ಜೀವ ಜಲ ಸ೦ಕುಲ.
ಕಣ್ಗಳ೦ಚಲಿ ಒಲವ ಬೆಳಕು
ನಡುವೆ ಏಕೆ ಅ೦ತರ..?

ಕಾಲದ ಮಿ೦ಚಿನ ಓಟಕ್ಕೆ ಸೋತು
ಬಾಳ್ವೆಯಲ್ಲಿ ಏನಿದೆ..?
ಒ೦ದು ತೀರ ನಾ, ಮತ್ತೊ೦ದು ನೀ,
ಹರಿವ ಪ್ರೇಮ ಧಾರೆಗೆ...

ಎರಡು ತೀರಗಳ ನಡುವೆ ಸೇತು
ಒಲವಿನಡಿಯಲಿ ಕಟ್ಟುವ ಬಾ...
ನನ್ನಲಿ ನೀ, ನಿನ್ನಲಿ ನಾ
ಬೆರೆತ ಜೀವನ ಹರಿಸುವ ಬಾ...

Saturday 16 April 2011

ಸ೦ಜೆ ಹೊತ್ತಿನಲಿ…

ಒ೦ದು ದಿನ ಮೈಮರೆವ
ಗೋಧೂಳಿ ಸಮಯ,
ನಭವೆಲ್ಲ ಕೆ೦ಪಾಗಿ
ನಾಚಿಸಿತು ಧರೆಯ,
ರ೦ಗು ಮೈತು೦ಬಿ
ನದಿ ನೀರ ನಾದ,
ಸು೦ಯ್ಗುಟ್ಟು ತಿಳಿಗಾಳಿ
ಸೇರುತಿತ್ತಾಗ

ನದಿಗೆ೦ದೆ ಕಳೆಕೊಡುವ
ಕಲ್ಲುಗಳ ಸಾಲು,
ನೀರ ಸವರಿತ್ತು
ಹರಡಿತ್ತು ನೂರು,
ಹಕ್ಕಿಗಳು ಹಾರುತ್ತ
ತೂರುತ್ತ ಕೆಳಗೆ,
ಚು೦ಬಿಸಲು ಜೀವರಸ
ಜೀವಸೆಲೆಗೆ.

ನದಿಯ ತೀರದಲಿ
ನವ ಜೋಡಿ ನಿ೦ತಿತ್ತು,
ಸ೦ಜೆ ಹೊತ್ತಿನಲಿ
ಉನ್ಮತ್ತವಾಗಿತ್ತು.
ದಡದಿ೦ ದಡಕೆ
ಹಾಯಿಸಲು ಕಣ್ಣು,
ಸ೦ಜ್ಞೆಯಿಸಿ ನಲ್ಲನು
ಹೊಸ ಆಸೆಯನ್ನು.

ತುಸು ಸನ್ನೆ ಸಾಕು
ಪರಿಯನರಿಯಲವಳಿಗೆ.
ಇರುವವಳು ಅವನಲ್ಲೆ
ಅವನ ಮನದ ಒಳಗೆ.
ನಡೆಗವನ ನಡೆಯಿಟ್ಟಳಾ
ದಡದ ಕಡೆಗೆ,
ಆವನಾಸೆಯಾಗಸದ
ಬಿರಿದ ಮಲ್ಲಿಗೆ.

ಇಲ್ಲೊ೦ದು ಅಲ್ಲೊ೦ದು
ಮತ್ತೊ೦ದು ಅಲ್ಲಿ,
ಕಲ್ಲುಗಳು ಅಲ್ಲಿ
ಕನಸುಗಳ ಬಳ್ಳಿ,
ಪ್ರತಿ ಕಲ್ಲ ಮೇಲೆ
ಹೆಜ್ಜೆ ಗುರುತನಿರಿಸಿ,
ಸಾಗುತಿಹರಿಬ್ಬರು
ನೆನಪುಗಳ ಭರಿಸಿ.

ನದಿ ದಡಗಳ ನಡುವೆ
ಪಯಣ ತುಸು ದೂರು,
ಇವನ್ಹೆಜ್ಜೆಯ ಮೇಲೆ
ಅವಳ್ಹೆಜ್ಜೆಗಳು ನೂರು.
ಸಪ್ತಪದಿ ತುಳಿದ೦ತೆ
ದಾಟಿದರು ನದಿಯ,
ಒಲವ ಸೇತುವೆ ಕಟ್ಟಿ
ತೋರಿದರು ನಗೆಯ.