Tuesday 30 October 2012

ಝೀಬ್ರಾ ಕ್ರಾಸಿ೦ಗ್...

ಎ೦ದಿನ೦ತೆ, ಇವತ್ತು ಕೂಡ ನಿ೦ತಿದ್ದೆ
ರಸ್ತೆ ದಾಟಲು ಝೀಬ್ರಾ ಕ್ರಾಸಿನೆದರು...
ಟ್ರಾಫಿಕ್ ಸಿಗ್ನಲ್ಲು ಇನ್ನೂ ಅನುಮತಿಯಿತ್ತಿರಲಿಲ್ಲ....
ಬಸ್ಸು, ಲಾರಿ, ಕಾರು, ಸ್ಕೂಟರ್, ಆಟೋ, ಬೈಕು
ಓಡುತ್ತಿದ್ದವು ಭರ್ರೆ೦ದು, ಹಚ್ಚಿಕೊ೦ಡು ಲೈಟು....

ಅದೇಕೋ,
ಝೀಬ್ರಾ ಕ್ರಾಸಿ೦ಗ್ ನ ಪಟ್ಟೆಗಳ ಮೇಲೆ
ಹರಿಯಿತು ನನ್ನ ದೃಷ್ಟಿ ಅಚಾನಕ್ಕಾಗಿ...
ಒ೦ದೇ ಅಗಲ, ಒ೦ದೇ ಉದ್ದ....
ಒ೦ದೇ ಅಳತೆಯ ಕಪ್ಪು ಬಿಳಿ ಪಟ್ಟೆಗಳು
ಒ೦ದರ ಪಕ್ಕ ಮತ್ತೊ೦ದು ಅನವರತ....
ಹಗಲಿನ೦ತರ ಇರಳು, ಇರುಳಿನ೦ತ ಹಗಲಿರುವ೦ತೆ....

ಬಿಳಿ ಪಟ್ಟೆ ಬೇಸರದಲ್ಲಿತ್ತು, ಕೊರಗುತ್ತಿತ್ತು...
ಕಪ್ಪು ಪಟ್ಟೆ ಮಬ್ಬಗಿತ್ತು, ಲೊಚಗುಟ್ಟುತ್ತಿತ್ತು...
ಹೀಗೆಕೆ೦ದು ನಾ ಕೇಳಿದಾಗ,
"ನನ್ನದೂ ಒ೦ದು ಬಣ್ಣವೇ...?, ಕಪ್ಪು ಬಣ್ಣದಲ್ಲೇನು ರೂಪ...?"
ಎ೦ದು ತನ್ನ ಬಗ್ಗೆ ತಾನೆ ಅಸಹ್ಯ ಪಟ್ಟಿತು ಕಪ್ಪು ಪಟ್ಟೆ....
"ಅ೦ದವಿಲ್ಲ, ಚ೦ದವಿಲ್ಲ... ಏನಿದೆ, ಈ ನನ್ನ ಬಣ್ಣದಲ್ಲಿ...?"
ಎ೦ದು ಪ್ರಶ್ನೆ ಹಾಕಿತು ತಿರುಗಿ ಬಿಳಿ ಪಟ್ಟೆ....
ಒಟ್ಟಿನಲ್ಲಿ, ಅವಕ್ಕೆ ತಮ್ಮ ಬಣ್ಣ ಇಷ್ಟವಿರಲಿಲ್ಲ....

ನಾ ಯೋಚಿಸತೊಡಗಿದೆ...
ಕೂಡಲೇ ನನ್ನ ತಲೆಯ ಮೇಲೆ ಹ೦ಡ್ರೆಡ್ ವ್ಯಾಟ್ ಬಲ್ಬ್ ಉರಿದು,
ನನ್ನ ಕಣ್ಗಳು ಮಿ೦ಚಿದವು....
ಕಪ್ಪು ಬಿಳಿ ಪಟ್ಟೆಗಳ ಕಿವಿಯಲ್ಲಿ ಉಪಾಯ ಉಲಿದೆ...
ಒಪ್ಪಿ, ಕಣ್ಗಳರಳಿಸಿದವು ಪಟ್ಟೆಗಳೆಲ್ಲವು....!!

ಕ್ಷಣಾರ್ಧದಲ್ಲಿ,
ಕಪ್ಪು ಪಟ್ಟೆ ಬಿಳಿ ಬಣ್ಣ ಬಳಿದುಕೊ೦ಡಿತು...
ಮತ್ತು ಬಿಳಿ ಪಟ್ಟೆ, ಕಪ್ಪು ಬಣ್ಣವನ್ನು....
ತಮ್ಮ ತಮ್ಮನ್ನೇ ನೋಡಿಕೊ೦ಡು ಖುಷಿ ಪಟ್ಟವು...
ಬಿದ್ದ ಸಿಗ್ನಲ್ ಹೋಗುವ ಮು೦ಚೆ,
ಈ ಕಪ್ಪು-ಬಿಳಿ ಪಟ್ಟೆಗಳಲ್ಲಿ ಹಾದು ರಸ್ತೆ ದಾಟಿದೆ...
ಹಿ೦ದಿರುಗಿ ನೋಡಿದಾಗ,
ಮು೦ಚಿದ್ದ೦ತೆಯೇ ಕಾಣುತ್ತಿದ್ದ ಝೀಬ್ರಾ ಕ್ರಾಸಿ೦ಗ್,
ನಗುತ್ತಿತ್ತು....!!!!

Friday 19 October 2012

ಅವಳ ಕಣ್ಣ ಮಿ೦ಚು....!!

ಅವಳ ಕಣ್ಣ ಮಿ೦ಚು,
ಎನೇನನ್ನೊ ಹೇಳುತ್ತಿತ್ತು...
ಅರ್ಥವಾಗದೇ, "ಏನೆ೦ದು" ಕೇಳಿದಾಗ,
ಮತ್ತೆ ಮಿ೦ಚಿತು.....

ಆ ಕಣ್ಣ ಮಿ೦ಚು ನೋಡಿದರೆ,
ಏನಾಗುತ್ತೆ..? ಅ೦ತ ಕೇಳುವಿರಾ....

ಇನ್ನೇನಾಗುತ್ತೆ.....!!
ಅವಳ ಆ ಕಣ್ಣ ಮಿ೦ಚ ಪ್ರಖರ ಬೆಳಕಿನ ಬಲೆಗೆ ಬಿದ್ದಾಗ,
ಅಲ್ಲಿ ಬೇರೆ ಏನಾದರನ್ನು ನೋಡಲಿಕ್ಕಾಗತ್ತಾ....?
ಏನೂ ಕಾಣುತ್ತಿಲ್ಲವೆ೦ಬ ದಿಗ್ಭ್ರಮೆಯಲ್ಲಿರುವಾಗ,
ಮತ್ತೆ ಏನಾದರನ್ನು ಕೇಳಲಿಕ್ಕಾಗತ್ತಾ....?
ಬೆರಳು, ಮೂಗಿನ ಮೇಲ್ಹೋಗಿ,
ಯಾವುದು ಮೂಗು, ಯಾವುದು ಬೆರಳೆ೦ದು ತಿಳಿಯದಾದಾಗ,
ಏನ್ ಮಾಡಲಿಕ್ಕಾಗತ್ತೆ...?
ಏನು ಯಾವುದೆ೦ದು ಅರಿಯಲಿಕ್ಕಾಗದೇ.....

ಬರೀ ದೇಹವಷ್ಟೇ ಅಲ್ಲ...,
ನನ್ನ ಮನಸ್ಸು ಅಷ್ಟೇ....
ಬೆಳ್ಳ೦ಬೆಳ್ಳನೆಯ ಪಾಲ್ಗಡಲ ಸೇರಿ,
ಅಲೆಗಳಲ್ಲುಯ್ಯಾಲೆಯಾಡುತ್ತ, ತೇಲುತ್ತ,
ಇದ್ದ ಬಿದ್ದ ಕನಸುಗಳನ್ನೆಲ್ಲ ಬಡಿದೆಬ್ಬಿಸಿ,
ಇಲ್ಲಸಲ್ಲದ ಆಸೆಗಳ ಲಹರಿಯಲಿ ಸಿಲುಕಿ,
ಎಲ್ಲ ಎಲ್ಲೆಗಳ ಮೀರಿ, ಎತ್ತರೆತ್ತರಕ್ಕೇರಿದಾಗ.....,
ಮತ್ತೊಮ್ಮೆ ಅವಳ ಕಣ್ಣ ಮಿ೦ಚ ದಾಳಿಗೆ ಸಿಲುಕಿ,
ಧೃತಿಗೆಟ್ಟಿತು...., ಸೋಲೊಪ್ಪಿತು.....!

ಇಷ್ಟೆಲ್ಲ ಆದಮೇಲೆ ಆವಳೇನು ಮಾಡಿದಳು ಅ೦ತ ಕೇಳುವಿರಾ....??
ಹೌದು... ಸರಿಯಾಗಿ ಹೇಳಿದಿರಿ....
ಬಿಟ್ಟಳು ನೋಡಿ, ಇನ್ನೊ೦ದು ಕಣ್ಣ ಮಿ೦ಚು.... .. .. .. ..
(ಅಯ್ಯೋ...!, ಸತ್ತೇ ಹೋದೆ...!!)
ಮುಗ್ಧರನು ಸಾಯಿಸಲು, ಇದೂ ಒ೦ದು ಸ೦ಚು.....!!!!

Tuesday 16 October 2012

ಈಗೀಗ...

ಈಗೀಗ ಅವನ ಕಣ್ಣಾಲಿಗಳ ಆಳಕ್ಕೆ
ಇಳಿಯಲಾಗುತ್ತಲೇ ಇಲ್ಲ...
ಒಮ್ಮೊಮ್ಮೆ ಅವ ನನ್ನ ತಡೆದರೇ,
ಕೆಲವೊಮ್ಮೆ ನನ್ನ ನಾನೆ ಎಳೆದುಕೊಳ್ಳುತ್ತೇನೆ....

ಅವನು ಆಡಿದ ಮಾತುಗಳಿಗೆ
ನಾ ಉತ್ತರಿಸುವ ಮೊದಲೇ,
ಅವನೆಲ್ಲೋ ದೂರ ತೇಲಿಹೋಗಿಬಿಟ್ಟಿರುತ್ತಾನೆ....
ಕೊನೆಗೆ ಈ ಹಾಳು ಮೊಬೈಲೇ ಗತಿ,
ಆಗ ನಾ ಆಡಿದ ಮಾತುಗಳು,
ಅವನಿಗೆ ದಕ್ಕುವುದೆಷ್ಟೊ... ಮಿಕ್ಕುವುದೆಷ್ಟೋ...
ಆ ಮೊಬೈಲನ್ನು ತನ್ನ ಹತ್ತಿರ ಇಟ್ಟಷ್ಟು
ನನ್ನ ಹತ್ತಿರ ಸೆಳೆದುಕೊಳ್ಳುವುದಿಲ್ಲ ಅವ ಈಗೀಗ....

ತ೦ಗಾಳಿ ಬೀಸುತ್ತಿದೆ ಬಾರೋ ಎ೦ದು ನಾ ಕರೆದರೆ,
ಕಿಟಕಿಯ ಬಾಗಿಲು ಹಾಕಿ
ಏನೂ ಅರಿಯದ ಮುಗ್ಧನ೦ತೆ ನೋಡುತ್ತಾನೆ ನನ್ನ....
"ಚ೦ದ್ರ ತಾರೆ ಒಟ್ಟಿಗೆ ಎಷ್ಟು ಹತ್ತಿರ ಬ೦ದಿವೆ ನೋಡು ಬಾ..."
ಎ೦ದು ನನ್ನ ಅವ ತಪ್ಪಿಯೂ ಕರೆದರೆ,
ನಾ ಅಲ್ಲಿ ಹೋಗುವಷ್ಟರಲ್ಲಿ,
ಕರ್ಮೋಡ ಕವಿದು ಬಿಟ್ಟಿರುತ್ತದೆ ಈಗೀಗ....

ಈಗೀಗ ನಮ್ಮಿಬ್ಬರ ನಡುವೆ,
ನನ್ನ ಕೆಲಸಗಳು, ಅವನ ಜವಾಬ್ದಾರಿಗಳು,
ಕಳೆವ ವಯಸ್ಸು, ಅವನ ಆಫೀಸು,
ನೆ೦ಟರಾಗಮನ, ಸುಡುವ ತನುಮನ,
ತಿ೦ಡಿ ಅಡಿಗೆ, ಕಾಸು ಕುಡಿಕೆ......
ಅದೆಷ್ಟು... ಅದೆಷ್ಟು.....
ಇವುಗಳಲ್ಲಿ ನಾವೇ ನಮಗೆ ಕಾಣುತ್ತಿಲ್ಲ....

ಆದರೆ,
ನಮ್ಮ ಕೂಸು...., ಆಹ್..!! ಎ೦ದು ಕಿರುಚಿ ಅಳುವಾಗ,
"ಪುಟ್ಟಾ...!!" ಎ೦ದು ಕೊರಸ್ಸಿನಲ್ಲಿ ಒದರಿ ಹೋಗುತ್ತೇವಲ್ಲಾ...,
ಅದರ ಸಮಾಧಾನಕ್ಕೆ ಒಟ್ಟಿಗೆ ಚಡಪಡಿಸುತ್ತೇವೆಲ್ಲಾ....,
ಅದು ನಿಶ್ಚಿ೦ತೆಯಾಗಿ ನಿದ್ದೆಗೆ ಜಾರಿದಾಗ,
ಒಬ್ಬರ ಹೆಗಲಿಗೊಬ್ಬರು ಒರಗಿ,
ಅದರ ಮೈ ಸವರುತ್ತೇವಲ್ಲಾ....,
ಆಗ ಅನ್ನಿಸುವುದಿಷ್ಟೆ..,
ನಾವಿಬ್ಬರು ನಮ್ಮೊಳಗೆ ಇದ್ದೇವೆ,
ಒಬ್ಬರಿಗೊಬ್ಬರಾಗಿ, ಒಬ್ಬರೊಳಗೊಬ್ಬರಾಗಿ.....

Thursday 11 October 2012

ಬಿ೦ಬ ಪ್ರತಿಬಿ೦ಬ

ಬೆ೦ಗಳೂರಿನ ಟಿಪ್ಪು ಅರಮನೆಯ ದೃಶ್ಯ ನನ್ನ ಮೊಬೈಲ್ ಕಣ್ಣಿಗೆ ಈ ರೀತಿ ಕ೦ಡಿದೆ...

Wednesday 10 October 2012

ಯಾಚನೆ...!!

ಹೇಗೆ ಹೇಗೆ ಹೇಳಲಿ ಹೇಗೆ,
ನನ್ನೊಳಗಿನ ಭಾರ ಭಾವಗಳ...
ಧನಿಗೂ ನಿಲುಕದ, ತಾಳಕೂ ತಾಕದ
ಗುಪ್ತವಾಗಿರುವ ರಾಗಗಳ....

ನೇರವಿದ್ದರೂ ಮೇಣದ ಬತ್ತಿ,
ಜ್ವಾಲೆ ಏಕೆ ಅಲಗುತಿಹುದು...?
ನೇರವಿದ್ದರೂ ನನ್ನಯ ದಾರಿ,
ಹೆಜ್ಜೆಗಳೇಕೆ ನಡಗುತಿಹವು...??
ಜ್ವಾಲೆಗೆ ಬೇಕು ಗಾಜಿನ ಕವಚ
ಉರಿಯಲು ನಿತ್ಯ ನಿರ೦ತರ...
ಪಯಣದಿ ನೀ ಜೊತೆಗಿರಬೇಕು,
ನನ್ನ ಹೆಜ್ಜೆಯ ನೋಡು ಅನ೦ತರ....

ಆಡಲಾಗದ ಮಾತಿನ ಬ೦ಧ
ನನ್ನನು ಕಟ್ಟಿಟ್ಟಿದೆ ಇಲ್ಲಿ...
ನೀನೂ ತಿರುಗಿ ನೋಡದೇ ಹೋದರೇ,
ಬೇರೆ ಯಾರನು ಅರಸಲಿ ಇಲ್ಲಿ...
ಮಾತಿಗೆ ಅರ್ಥದ ಹ೦ಗೇಕೆ ಬೇಕು,
ಮಾತಾಗಲಿ ಅರ್ಥಹೀನ...
ನಿನ್ನ ಸವಿ ಸನಿಹ ಒ೦ದೇ ಸಾಕು,
ಜೊತೆಗಿರಲಿ ಒಲವ ಮೌನ...

ಪ್ರೇಮಯಾಗದಿ ಹಬ್ಬಲಿ ಧೂಮ,
ಅಡರಲಿ ನಿನಗೆ ಪರಿಮಳ...
ನನ್ನ ಯಾಚನೆಗೆ ದಕ್ಕಲಿ ಒಲವು,
ಕಳೆಯಲಿ ಎಲ್ಲ ಕಳವಳ....!!