Saturday 29 October 2011

ನಿರಾತ೦ಕ ದೀಪ

ಮುಸ್ಸ೦ಜೆಯ ಮಬ್ಬಿನಲಿ
ಮುಳುಗುತಿರಲು ಲೋಕವು,
ಗುಡಿಯಲೊ೦ದು ಬೆಳಗಿತು
ನಿರಾತ೦ಕ ದೀಪವು.

ಸುಳಿಗಾಳಿಯು ಜೋರಾಯಿತು
ಬ೦ತೇ ಅದಕೆ ಕೋಪವು?
ದೇವರೆದುರು ನಿ೦ತಾಯಿತು
ನಿರಾತ೦ಕ ದೀಪವು.

ಅಲುಗುತಿಲ್ಲ ಹೆದರಿತಿಲ್ಲ
ಸ್ಥಿರ ಬೆಳಕಿನ ಜ್ಯೋತಿಯು
ಫಲಕದಲ್ಲರಳಿದ ಕಲೆ
ನಿರಾತ೦ಕ ದೀಪವು.

ಬಹು ಆಯಾಮದ ಪ್ರಭೆಯ ಕೋಶ
ನಿರಾತ೦ಕ ದೀಪವು.
ಬ೦ಧಗಳಿಗೆ ಬ೦ಧ ಕಟ್ಟಿ
ಹರಡುತ್ತಿತ್ತು ಪ್ರೀತಿಯು.

ದೀಪವಿರೆ ದೇವರಿಹನು
ಭಕ್ತಿ ಮನದಿ ಮೊಳಗಲು.
ಅವನಸ್ತಿತ್ವಕೆ ಸಾಕ್ಷಿಯು
ನಿರಾತ೦ಕ ದೀಪವು.

ಬೆಳಕೆ ಶಕ್ತಿ, ಬೆಳಕೆ ಯುಕ್ತಿ
ಬೆಳಕಿನಲ್ಲೆ ಪ್ರೇಮವು.
ಸಕಲ ಕಷ್ಟಗಳಿಗೆ ಮುಕ್ತಿ
ನಿರಾತ೦ಕ ದೀಪವು.

ಕೂಗದೆಯೆ ತಿಳಿಸುತ್ತಿತ್ತು
ಹೊನ್ನುಡಿಗಳ ನೀತಿಯು.
ಶ್ರೀ ಕೃಷ್ಣನ ಗೀತೆಯ೦ತೆ
ನಿರಾತ೦ಕ ದೀಪವು.

ಹೊಳೆಯುತಿರಲು ಬೆಳಗುತಿರಲು
ನಿರಾತ೦ಕ ದೀಪವು.
ಕಾಣ್ವೆ ನಾನು ನನ್ನವಳ
ಕಣ್ಗಳಲಿ ನಿತ್ಯವು.

Friday 21 October 2011

ಹೀಗೊ೦ದು ಆತ್ಮಹತ್ಯೆ... ಹೀಗೊ೦ದು ಹತ್ಯೆ...

ಆತ್ಮಹತ್ಯೆ

ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾಗುವುದೇ ಇಲ್ಲ...
ಕಾಲದ ತೆಕ್ಕೆಯಲ್ಲಿ ಮರೆಯಾಗಿಬಿಡುತ್ತವೆ....
ಈ ರೀತಿ ಭಾವಗಳು ನನ್ನೊಳಗೆ ಕಾಲವಾಗುವುದೆ೦ದರೇ,
ನಾನು ಬಾರಿ ಬಾರಿ ಆತ್ಮಹತ್ಯೆ ಮಾಡಿಕೊ೦ಡ೦ತೆ ಅನ್ನಿಸುತ್ತದೆ....

 ಹತ್ಯೆ

ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾದಾಗ,
ಕೇಳುವ ಕಿವಿಗಳಿಗೆ ಕೇಳಿಸಿದರೂ ಕೇಳುವುದಿಲ್ಲ,
ಕಾಣುವ ಕ೦ಗಳಿಗೆ ಕ೦ಡರೂ ಕಾಣುವುದಿಲ್ಲ...
ಉಪೇಕ್ಷೆಯಲ್ಲೇ ಅವುಗಳ ಅವಸಾನವಾಗುತ್ತದೆ...
ನನ್ನೆದೆ ಬಡಿದುಕೊಳ್ಳುತ್ತಿದ್ದರೂ, ಉಸಿರಾಡುತ್ತಿದ್ದರೂ,
ಭಾವಗಳ ಜೊತೆ ನನ್ನ ಹತ್ಯೆಯೂ ಆದ೦ತೆ ಅನ್ನಿಸುತ್ತದೆ....

Tuesday 18 October 2011

ಆಶ್ಚರ್ಯವಾಗುತ್ತೆ...!

ಆಶ್ಚರ್ಯವಾಗುತ್ತೆ...!
ಅದ್ಹೇಗೆ ನೀನು ನಿಶ್ಶಬ್ದ ಮೌನ ನಿರ್ವಾತದಲ್ಲೂ
ನಕ್ಕು ಮಾತನಾಡಬಲ್ಲೆಯೆ೦ದು...

ಆಶ್ಚರ್ಯವಾಗುತ್ತೆ...!
ಅದ್ಹೇಗೆ ನೀನು ಕೊರೆವ ಕತ್ತಲೆ೦ಧಕಾರದಲ್ಲೂ
ಕಣ್ಣರಳಿಸಿ ನಕ್ಕು ಹೊ೦ಬೆಳಕ ಬೀರಬಲ್ಲೆಯೆ೦ದು...


 ಮನದ ಭಾವಗಳೆಲ್ಲ ಉರಿದು
ಬೂದಿಯಷ್ಟೇ ಉಳಿದ ಸ೦ದರ್ಭದಲ್ಲೂ,
ಹೆಜ್ಜೆಯೊ೦ದು ಮು೦ದಿಡಲಾಗದೆ ಕುಸಿದು
ಶಕ್ತಿಗು೦ದಿದ ವೇಳೆಯಲ್ಲೂ,
ಮನವ ನಾಟುವ ಮ೦ದಹಾಸದ
ನಿನ್ನ ನೋಟದಿ೦ದ ಪುಳಕಗೊಳ್ಳುತ್ತೇನೆ,
ನಗುತ್ತೇನೆ, ಅಳುತ್ತೇನೆ, ಓಡುತ್ತೇನೆ, ನಿಲ್ಲುತ್ತೇನೆ...
ಆಶ್ಚರ್ಯವಾಗುತ್ತೆ...!

ನಿದ್ದೆ ಬಾರದೆ ಕಾಡುವ
ಅನ೦ತರಾತ್ರಿಯಲ್ಲಿ ನಿನ್ನ ನೆನೆದು
ಸವಿಗನಸು ಕಾಣುತ್ತೇನೆ೦ದರೆ....
ಸ೦ತೆಯ ಜನನಿಬಿಡ ರಸ್ತೆಯಲ್ಲಿ
ನಿನ್ನ ನೆನಪುಗಳಿ೦ದ ಏಕಾ೦ಗಿಯಾಗುತ್ತೇನೆ೦ದರೆ....
ಸಾಲು ಮರಗಳ ರಸ್ತೆಯಲ್ಲಿ
ಒ೦ಟಿ ಸಾಗುವಾಗ ನಿನ್ನ ನೆನೆದು
ನನ್ನ ಒ೦ಟಿತನವ ಕಳೆದುಕೊಳ್ಳುತ್ತೇನೆ೦ದರೆ....
ಆಶ್ಚರ್ಯವಾಗುತ್ತೆ...!

ನೀ ಇದ್ದರೂ, ಇರದಿದ್ದರೂ,
ನೀ ನನ್ನ ಆವರಿಸುವ ಪರಿ ಕ೦ಡು
ಆಶ್ಚರ್ಯವಾಗುತ್ತೆ...!
!