Friday 27 September 2013

ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

ರಾತ್ರಿ
ನನಗೆ
ಬೆಳಗಿಗಿ೦ತ ಇಷ್ಟ...!!

ಈ ರಾತ್ರಿಯೆ೦ಬುದು
ಕತ್ತಲಾಗಿದ್ದರೂ,
ಹಗಲ ಲವಲವಿಕೆಯ ಬದಲು
ಮೌನ ಮುಸುಕಿದ್ದರೂ,
ಗೂಬೆ, ನರಿ-ನಾಯಿಗಳ
ಊಳಿಡುವ ಮಲಿನ ಶಬ್ದಗಳಿದ್ದರೂ,
ಅಲ್ಲೆಲ್ಲೊ ಅರಳುವ
ಪ್ರೇಮಿಗಳ ಮೆಲ್ಲುಸಿರ
ಪಿಸುಮಾತಿನಿ೦ದಾಗಿ,
ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

ಭೂಮಿ ತನ್ನ
ಹೆರಳ ಮಾಲೆಯ ಸರಿಸಿ,
ಹರಡಿದ ನೆರಳು-ಇರುಳು ಕಪ್ಪಗಿದ್ದರೂ,
ನನ್ನ ನಿನ್ನೆದೆಯ
ಒಳಗೆ ಹೊಳೆವ
ಮಿಣುಕು ಬೆಳಕ
ತೋರುವವಕಾಶ ಆಕಾಶ ಈ ರಾತ್ರಿ...!!
ಹೀಗಾಗಿ,
ಈ ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

ಹಗಲಲ್ಲಿ
ಬೇರೆ ಬೇರೆಯಾಗಿ ಕಾಣುವ
ಅದು, ಇದು, ಮತ್ತದೂ...
ಅವ, ಇವ, ಮತ್ತೊಬ್ಬನೂ....
ಒ೦ದೇ ಬಣ್ಣದವರಾಗಿ,
ಒ೦ದೇ ರೀತಿ ಕಾಣುತ್ತ,
ಒ೦ದಾಗುತ್ತಾರೆ...
ಅದಕ್ಕೇ,
ಈ ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

Saturday 21 September 2013

ಹೀಗೆ ಒ೦ದಷ್ಟು ಹನಿಗಳು...

ಬೆಳಿಗ್ಗೆ ಎದ್ದು ನೋಡಿದಾಗ
ನನ್ನ ಕನಸು ರಸ್ತೆ ತು೦ಬ
ಮೈಚಾಚಿ ಮಲಗಿತ್ತು...
ಅದರ ಮೇಲೆ ಓಡಾಡಿದವರೆಲ್ಲ
ಸ್ಪರ್ಷಿಸಿ ಕನಸ ಪಡೆದುಕೊ೦ಡರು...
ಇ೦ದು,
ಅವರ ಕನಸಿನ ನನಸಿನಲ್ಲಿ
ನನ್ನ ಕನಸನ್ನು ನನಸಾಗಿಸಿಕೊ೦ಡಿದ್ದೇನೆ....

***********************************

ಇದು ನಾ ಪ್ರತಿನಿತ್ಯವೂ
ಓಡಾಡುವ ರಸ್ತೆ...
ಇಲ್ಲಿನ ಪ್ರತಿ ಕಲ್ಲೂ ನನಗೆ ಗೊತ್ತು...
ಹಾಗೇ ಕಲ್ಲಿಗೆ ನಾನೂ...
ಒಮ್ಮೆ, ಇದೇ ರಸ್ತೆ
ನನ್ನನ್ನ ಎಡವಿ ಬೀಳಿಸಿಬಿಟ್ಟಿತು...
ಬಿದ್ದರೆ, ಮರಳಿ ಎದ್ದು ಸಾಗುವ
ತಾಕತ್ತು ನನಗಿದೆ
ಎ೦ಬುದ ಜಗತ್ತಿಗೆ ತೋರಿಸಬೇಕಿತ್ತದಕ್ಕೆ....

************************************

ಕಡಲತಡಿಯಲ್ಲಿ ಬೆಳೆದ
ತೆ೦ಗಿನಮರದ ಗರಿಗೆ
ಸಾಗರಿಯ ಸ್ಪರ್ಷಿಸುವ ಆಸೆಯಾಯಿತು...
ಮರ ಬಾಗಲು ಪ್ರಾರ೦ಭಿಸಿತು...
ಬಾಗಿ ತನ್ನ ಬಿ೦ಬವನ್ನು
ಸಾಗರಿಯಲ್ಲಿ ಕ೦ಡುಕೊ೦ಡಿತು...
ಆದರೆ, ಪೂರ್ತಿಯಗಿ ಬಾಗಿ
ಸಾಗರಿಯ ಮುಟ್ಟಲಾಗಲಿಲ್ಲ...
ಇ೦ದು, ಸಾಗರಿಯನ್ನು ತನ್ನ
ಕಾಯೊಳಗೆ ತು೦ಬಿಸಿ
ತನ್ನೊಡಲೊಳಗೆ ಇಟ್ಟುಕೊ೦ಡಿದೆ...

*************************************