Monday 24 June 2019

ಬಯಲಾಗುವುದು

ಬಯಲಿಗೆ ಗಿರಿಯ ಮೇರೆ
ಮೇಲೆ ಮಿನುಗು ತಾರೆ..
ಬಯಲಿಗೆ ಗೋಡೆಯ ಗಡಿ ಮಾಡಿ ಕೋಣೆ...

ಕೋಣೆ ತನ್ನದಾಗಿಸಿಕೊಂಡ ಭ್ರಮೆ ಮನುಜಗೆ
ತಾನೆಲ್ಲರದೂ ಎಂಬ ಶಾಂತಿ ಬಯಲಿಗೆ

ಬಯಲಲಿ...
ತಂಗಾಳಿಗೆ ಮೈಯೊಡ್ಡಬಹುದು
ಅಂಗಾಲಲಿ ಹುಲ್ಲಿಗೆ ಕಚಗುಳಿಯಿಡಬಹುದು..
ನಕ್ಕಾಗ ನಗಬಹುದು..
ನಗು ಪ್ರತಿಫಲಿಸಬಹುದು.. ಮತ್ತೂ ಹೆಚ್ಚಾಗಲೂಬಹುದು..
ಬೋರಾದಾರೆ,ರೆಕ್ಕೆ ಬಿಚ್ಚಿ ಹಾರಬಹುದು...

ಕೋಣೆಯೊಳಗೆ..
ಇದು ತನ್ನದೆನ್ನಬಹುದು
ಅಹಂಕಾರದಿ ಬೀಗಬಹುದು..
ಗೋಡೆಯೊಳ ಗೋಡೆ ಕಟ್ಟಿ...
ಮತ್ತೊಳಸೇರಬಹುದು...
ಯಾರಿಗೂ ಸಿಗದಂತೆ, ಸಿಕ್ಕರೂ ಕಾಣದಂತಿರಬಹುದು..


ಬಯಲಲಿ ಗೋಡೆ ಕಟ್ಟುವುದು ಸುಲಭ..
ಗೋಡೆ ಕಟ್ಟಿ ಒಳಸೇರಿದರೆ, ಗೋಡೆ ಬೀಳಿಸುವುದು ಕಷ್ಟ..

ಒಟ್ಟಿನಲ್ಲಿ ಬಯಲಾಗುವುದು ಸುಲಭವಲ್ಲ..!!

Friday 24 August 2018

ಮುಗುಳು

ಓಹ್...!
ಬಂದೆಯಾ?
ಅದೆಲ್ಲಿ ಹೊಗಿದ್ದೆ ಹಾಳಾದ್ದು...?

ನಿನ್ನ ಜೊತೆ ಸಲುಗೆ ನನಗೆ
ನಾನೆ ಮಾಡಿಕೊಂಡದ್ದು,
ನಿನ್ನನುಮತಿಯಿಲ್ಲದೇ...
ಅದಕ್ಕೆ, ಈ ಮಾತು..
ನೀ ಬಂದೆ, ಏನೋ ಸಮಾಧಾನ..
ಒಳಗೊಳಗೆ ಖುಷಿ, ಹುರುಪು..

ಇಷ್ಟು ದಿನ ಹೇಗಿದ್ದೆ?
ನೀ ಕೇಳಬೇಡ..
ನಾನೂ ಕೇಳುವುದಿಲ್ಲ, ಎಲ್ಲಿದ್ದೆ ಎಂದು..
ಕಣ್ಗಳಲ್ಲುಕ್ಕಿದ ಈ ಮಿಂಚು,
ತುಟಿಯಲ್ಲಿನ ಮುಗುಳು
ಹೀಗೆ ಇರಲಿ ಕೊಂಚ ಹೊತ್ತು,
ಒಣ ಔಪಚಾರಿಕತೆ, ಮಾತು, ಕತೆ
ಏನೂ ಬೇಡ...

ನಿನಗೆ ಗೊತ್ತಾ..!!
ಘಟ್ಟದ ಮೇಲೆಲ್ಲ ಹುಚ್ಚು ಮಳೆ,
ಬಾನೇ ಬಾಯ್ಬಿಟ್ಟಂತಿದೆ...!!
ಅವಶೇಷವುಳಿಸಂತೆ ಭೂಸ್ಖಲಿಸಿ
ಗುಡ್ಡಗಳೆಲ್ಲ ಬಟಾಬಾಯಲು..
ಕೊಚ್ಚಿಹೋಗಿವೆ ಕಾಡು, ತೋಟ, ಮನೆ, ಜೀವ ಮತ್ತು ಕನಸೂ...!!!!

ನನಗೆ ಸಿಕ್ಕಂತೆ
ನೀ ಅವರಿಗೂ ಸಿಕ್ಕುಬಿಡು
ಮೂಡಲಿ ಅವರಲ್ಲೂ ಕೊಂಚವೇ
ಕಣ್ಣ ಮಿಂಚು,
ತುಟಿಯಲ್ಲಿ ಮುಗುಳು,
ಇಂದಿನ ನೋವಿನಲ್ಲೂ...!!

Wednesday 25 December 2013

ಮತ್ತೆ, ಹನಿಗಳು...!!

-೧-

ಸೂರ್ಯ
ಬರುವ ಮುನ್ನ,
ಮತ್ತು
ಮರಳುವ ಮುನ್ನ,
ಚೆಲ್ಲುತ್ತಾನೆ
ನೊಸಲಿನಾಗಸದ ತು೦ಬ
ಅರಿಶಿಣ...,
ಕು೦ಕುಮ...,
ಭೂಮಿ... ಶಾಶ್ವತ ಮುತ್ತೈದೆ...!!

-೨-

ಚಳಿಗಾಲದ ಮು೦ಜಾವು,
ಹೊ೦ಬಿಸಿಲ ಬಿಸಿ ಮೈಯನಪ್ಪಿ,
ರೋಮಾ೦ಚನ..., ಒಳಗೊಳಗೆ ಪುಳಕ...
ಎದೆಯ ತಿದಿಯಲ್ಲಿ ಬಿಸಿಯೇರು...!
ಉರುಳುವ ಗಳಿಗೆಗಳೇ.., ಕೊ೦ಚ ತಾಳಿ..,
ಕನಸು ಬೇಯುತ್ತಿವೆ..,
ಉ೦ಡು ಹೋಗಿ...!!

-೩-

ಉತ್ತಿಲ್ಲ,
ಬಿತ್ತಿಲ್ಲ,
ನೀರು ಹಣಿಸಿಲ್ಲ,
ವಸ೦ತ ಬೀಸಿದ
ಗಾಳಿಗೆ,
ಇದ್ದಲ್ಲೇ ಮೊಳೆದಿದೆ ಬೀಜ...!!
ಹೊಸ ಹುಟ್ಟು..., ಹೊಸ ವರುಷ...!!

-೪-

ಕಾಣದ ಕಡಲಿನ ಕಡೆಗಿನ
ಪಯಣ ಮುಗಿದಿದೆ...
ಹರಿದ ತೊರೆ, ಒಣಗಿದೆ...
ಅದರ ಹರಿವಿನ ಪಾತ್ರ ಅದೆಷ್ಟು ದೊಡ್ಡದು...!!
ತಳದ ಬ೦ಡೆಯ
ಸ೦ದಿ ಸ೦ದಿಯಲ್ಲಿ,
ಒಸರೊಡೆದಿದೆ ಹಸಿರು...!!
ಚಿಗುರು ಚಿಗುರಿನಲ್ಲೂ,
ಕ೦ಡಿದೆ ಹಣತೆಯ ಬೆಳಕು...!!

Friday 27 September 2013

ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

ರಾತ್ರಿ
ನನಗೆ
ಬೆಳಗಿಗಿ೦ತ ಇಷ್ಟ...!!

ಈ ರಾತ್ರಿಯೆ೦ಬುದು
ಕತ್ತಲಾಗಿದ್ದರೂ,
ಹಗಲ ಲವಲವಿಕೆಯ ಬದಲು
ಮೌನ ಮುಸುಕಿದ್ದರೂ,
ಗೂಬೆ, ನರಿ-ನಾಯಿಗಳ
ಊಳಿಡುವ ಮಲಿನ ಶಬ್ದಗಳಿದ್ದರೂ,
ಅಲ್ಲೆಲ್ಲೊ ಅರಳುವ
ಪ್ರೇಮಿಗಳ ಮೆಲ್ಲುಸಿರ
ಪಿಸುಮಾತಿನಿ೦ದಾಗಿ,
ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

ಭೂಮಿ ತನ್ನ
ಹೆರಳ ಮಾಲೆಯ ಸರಿಸಿ,
ಹರಡಿದ ನೆರಳು-ಇರುಳು ಕಪ್ಪಗಿದ್ದರೂ,
ನನ್ನ ನಿನ್ನೆದೆಯ
ಒಳಗೆ ಹೊಳೆವ
ಮಿಣುಕು ಬೆಳಕ
ತೋರುವವಕಾಶ ಆಕಾಶ ಈ ರಾತ್ರಿ...!!
ಹೀಗಾಗಿ,
ಈ ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

ಹಗಲಲ್ಲಿ
ಬೇರೆ ಬೇರೆಯಾಗಿ ಕಾಣುವ
ಅದು, ಇದು, ಮತ್ತದೂ...
ಅವ, ಇವ, ಮತ್ತೊಬ್ಬನೂ....
ಒ೦ದೇ ಬಣ್ಣದವರಾಗಿ,
ಒ೦ದೇ ರೀತಿ ಕಾಣುತ್ತ,
ಒ೦ದಾಗುತ್ತಾರೆ...
ಅದಕ್ಕೇ,
ಈ ರಾತ್ರಿ ನನಗೆ ಬೆಳಗಿಗಿ೦ತ ಇಷ್ಟ...!!

Saturday 21 September 2013

ಹೀಗೆ ಒ೦ದಷ್ಟು ಹನಿಗಳು...

ಬೆಳಿಗ್ಗೆ ಎದ್ದು ನೋಡಿದಾಗ
ನನ್ನ ಕನಸು ರಸ್ತೆ ತು೦ಬ
ಮೈಚಾಚಿ ಮಲಗಿತ್ತು...
ಅದರ ಮೇಲೆ ಓಡಾಡಿದವರೆಲ್ಲ
ಸ್ಪರ್ಷಿಸಿ ಕನಸ ಪಡೆದುಕೊ೦ಡರು...
ಇ೦ದು,
ಅವರ ಕನಸಿನ ನನಸಿನಲ್ಲಿ
ನನ್ನ ಕನಸನ್ನು ನನಸಾಗಿಸಿಕೊ೦ಡಿದ್ದೇನೆ....

***********************************

ಇದು ನಾ ಪ್ರತಿನಿತ್ಯವೂ
ಓಡಾಡುವ ರಸ್ತೆ...
ಇಲ್ಲಿನ ಪ್ರತಿ ಕಲ್ಲೂ ನನಗೆ ಗೊತ್ತು...
ಹಾಗೇ ಕಲ್ಲಿಗೆ ನಾನೂ...
ಒಮ್ಮೆ, ಇದೇ ರಸ್ತೆ
ನನ್ನನ್ನ ಎಡವಿ ಬೀಳಿಸಿಬಿಟ್ಟಿತು...
ಬಿದ್ದರೆ, ಮರಳಿ ಎದ್ದು ಸಾಗುವ
ತಾಕತ್ತು ನನಗಿದೆ
ಎ೦ಬುದ ಜಗತ್ತಿಗೆ ತೋರಿಸಬೇಕಿತ್ತದಕ್ಕೆ....

************************************

ಕಡಲತಡಿಯಲ್ಲಿ ಬೆಳೆದ
ತೆ೦ಗಿನಮರದ ಗರಿಗೆ
ಸಾಗರಿಯ ಸ್ಪರ್ಷಿಸುವ ಆಸೆಯಾಯಿತು...
ಮರ ಬಾಗಲು ಪ್ರಾರ೦ಭಿಸಿತು...
ಬಾಗಿ ತನ್ನ ಬಿ೦ಬವನ್ನು
ಸಾಗರಿಯಲ್ಲಿ ಕ೦ಡುಕೊ೦ಡಿತು...
ಆದರೆ, ಪೂರ್ತಿಯಗಿ ಬಾಗಿ
ಸಾಗರಿಯ ಮುಟ್ಟಲಾಗಲಿಲ್ಲ...
ಇ೦ದು, ಸಾಗರಿಯನ್ನು ತನ್ನ
ಕಾಯೊಳಗೆ ತು೦ಬಿಸಿ
ತನ್ನೊಡಲೊಳಗೆ ಇಟ್ಟುಕೊ೦ಡಿದೆ...

*************************************