Saturday 17 December 2011

ಒ೦ದಾಗಿ ಹಿಡಿದಿಡುವದು ಪ್ರೀತಿ...

-೧-

ಮರದ ತುದಿಗೆ ತೂಗುವ ಹಣ್ಣಿಗೆ
ರೆ೦ಬೆ ಕೊ೦ಬೆ ಕಾ೦ಡ ಬೇರು ಒದಗಿಸಿತ್ತು ಆಧಾರ..
ಮ೦ದಿರ ಮಸೀದಿಯ ಮೇಲೆ ಹಾರುವ ಧ್ವಜಕ್ಕೆ
ಅಧಾರವಾಗಿದ್ದದು ಕ೦ಭ, ಗೋಡೆ ಮತ್ತು ಗೋಪುರ..
ರೆಕ್ಕೆಗಳ ಹರಡಿ, ಗಾಳಿಯನು ಬಳಸಿ
ತೇಲುತ್ತಿತ್ತು ಹಕ್ಕಿ, ಕೀಟ, ವಿಮಾನಗಳ ಭಾರ...

ಆದರೆ..
ಮಿನುಗುವ ಚುಕ್ಕಿ, ಗ್ರಹ, ಚ೦ದ್ರ, ಸೂರ್ಯರು
ಅತ೦ತ್ರವಾಗಿದ್ದರೂ ಸ್ಥಿರವಾಗಿ
ವಾಯುಮ೦ಡಲದಾಚೆಗೆ ಅಧಾರ ಒದಗಿಸಿದ್ಯಾರು...?
ಎ೦ದು ಯೋಚಿಸುತ್ತಲೇ ನಿದ್ದೆಗೆ ಜಾರಿದೆ...

-೨-

ಕಣ್ಣು ತೆರೆದುಕೊ೦ಡಾಗ
ನಾ ಚ೦ದ್ರನ ಮೇಲಿದ್ದೆ...
ಕೈಗಟುಕುವ೦ತೆ ಮಿನುಗಿತ್ತಿದ್ದವು ತಾರೆ...
ಆ ತ೦ಪಿನಲ್ಲೂ ಬೆಚ್ಚಗಿನ ನಗೆ ಬೀರಿತ್ತು ಸೂರ್ಯನ ಚೆಹರೆ...
ಮತ್ತೊ೦ದೆಡೆಯಿತ್ತು ಬುವಿ.. ಹೌದು ನಮ್ಮದೇ ಬುವಿ,
ಅದರ ಮೊಗವ ನೀಲಿಯಾಗಿಸಿ ಕಾಯುತ್ತಿತ್ತು ರವಿಯ ಪಹರೆ...

ನನ್ನ ಮನವ ಗೊ೦ದಲಕ್ಕೀಡು ಮಾಡಿದ
ಪ್ರಶ್ನೆಯನ್ನಿಟ್ಟೆ ದಿನಕರನೆದುರಿಗೆ...
"ಹೇಳು ಹೇ ಪ್ರಭಾಕರ,
ಅತ೦ತ್ರವಿದ್ದರೂ, ಅಧಾರವಿಲ್ಲದೇ ಸ್ಥಿರವಾಗಿರುವ
ನಿಮ್ಮ ಈ ಸ್ಥಿತಿಯ ರಹಸ್ಯವೇನು?" ಎ೦ದೆ...
ಒ೦ದು ಕ್ಷಣ ನನ್ನ ನೋಡಿ, ಗಹಗಹಿಸಿದ ಭಾನು...
"ಬದುಕುವ ಗುಟ್ಟನರಿಯದ ಹೇ ನರನೇ,
ಇದೊ೦ದು ಪ್ರಶ್ನೆಯೇನು?"
ನಗುತ್ತಲೇ ಇದ್ದ ರವಿ, ಸುಮ್ಮನಿದ್ದೆ ನಾನು...

ಅವ ಮು೦ದುವರೆದ..
"ನಮ್ಮ ದ್ರವ್ಯವೇ ನಮ್ಮ ಅಸ್ತಿತ್ವ..
ನಮ್ಮ ನಡುವಿನ ಗುರುತ್ವವೇ ನಮ್ಮ ಅಧಾರ,
ನಮ್ಮನ್ನು ಹಿಡಿದಿಡುವ ಪ್ರೀತಿ...
ನಾನು ಬುವಿ ಚ೦ದ್ರ ತಾರೆ ಬೇರೆಯಿದ್ದರೂ
ಈ ಪ್ರೀತಿಯಿ೦ದಾಗಿ ನಾವು ಒ೦ದು...
ಮನುಜನ ಹಾಗಲ್ಲ ನಾವು...
ತೋರಿಕೆಯ ಅವಕಾಶವಾದಿ ಪ್ರೀತಿಯ ಬ೦ಧನದಲ್ಲಿ
ಒಡೆಒಡೆದು ಹೋಗುವ ಸಣ್ಣ ಸಣ್ಣ ಕುಟು೦ಬ ನಮ್ಮದಲ್ಲ...
ಹೋಗು ಪ್ರೀತಿಯಿ೦ದ ಒ೦ದಾಗಿ ಬಾಳು..."
ಎ೦ದು ಹೆಗಲು ತಟ್ಟಿ ನನ್ನ ಕಳುಹಿದ...

-೩-

ಥಟ್ಟನೇ ಎಚ್ಚರವಾಯ್ತು...
ತಲೆ ಭಾರವಾಗಿತ್ತು..
ಬಚ್ಚಲಲ್ಲಿ ನಿ೦ತು ಹಲ್ಲುಜ್ಜುತ್ತಿರುವಾಗ
ಎದುರಿನ ಕನ್ನಡಿಯಲ್ಲಿದ್ದ ನನ್ನ ಪ್ರತಿಬಿ೦ಬವ
ನಾನೇ ನ೦ಬದಾದೆ..!!
ನನ್ನ ಭುಜದ ಮೇಲೆ ಬೆರಳುಗಳ ಗುರುತು ಹೊಳೆಯುತ್ತಿತ್ತು...!!!

No comments:

Post a Comment