Saturday 29 October 2011

ನಿರಾತ೦ಕ ದೀಪ

ಮುಸ್ಸ೦ಜೆಯ ಮಬ್ಬಿನಲಿ
ಮುಳುಗುತಿರಲು ಲೋಕವು,
ಗುಡಿಯಲೊ೦ದು ಬೆಳಗಿತು
ನಿರಾತ೦ಕ ದೀಪವು.

ಸುಳಿಗಾಳಿಯು ಜೋರಾಯಿತು
ಬ೦ತೇ ಅದಕೆ ಕೋಪವು?
ದೇವರೆದುರು ನಿ೦ತಾಯಿತು
ನಿರಾತ೦ಕ ದೀಪವು.

ಅಲುಗುತಿಲ್ಲ ಹೆದರಿತಿಲ್ಲ
ಸ್ಥಿರ ಬೆಳಕಿನ ಜ್ಯೋತಿಯು
ಫಲಕದಲ್ಲರಳಿದ ಕಲೆ
ನಿರಾತ೦ಕ ದೀಪವು.

ಬಹು ಆಯಾಮದ ಪ್ರಭೆಯ ಕೋಶ
ನಿರಾತ೦ಕ ದೀಪವು.
ಬ೦ಧಗಳಿಗೆ ಬ೦ಧ ಕಟ್ಟಿ
ಹರಡುತ್ತಿತ್ತು ಪ್ರೀತಿಯು.

ದೀಪವಿರೆ ದೇವರಿಹನು
ಭಕ್ತಿ ಮನದಿ ಮೊಳಗಲು.
ಅವನಸ್ತಿತ್ವಕೆ ಸಾಕ್ಷಿಯು
ನಿರಾತ೦ಕ ದೀಪವು.

ಬೆಳಕೆ ಶಕ್ತಿ, ಬೆಳಕೆ ಯುಕ್ತಿ
ಬೆಳಕಿನಲ್ಲೆ ಪ್ರೇಮವು.
ಸಕಲ ಕಷ್ಟಗಳಿಗೆ ಮುಕ್ತಿ
ನಿರಾತ೦ಕ ದೀಪವು.

ಕೂಗದೆಯೆ ತಿಳಿಸುತ್ತಿತ್ತು
ಹೊನ್ನುಡಿಗಳ ನೀತಿಯು.
ಶ್ರೀ ಕೃಷ್ಣನ ಗೀತೆಯ೦ತೆ
ನಿರಾತ೦ಕ ದೀಪವು.

ಹೊಳೆಯುತಿರಲು ಬೆಳಗುತಿರಲು
ನಿರಾತ೦ಕ ದೀಪವು.
ಕಾಣ್ವೆ ನಾನು ನನ್ನವಳ
ಕಣ್ಗಳಲಿ ನಿತ್ಯವು.

No comments:

Post a Comment