Sunday 25 March 2012

ಹೊಳೆಯುತ್ತಿದೆ ಯುಗಾದಿ...

ಅ೦ದು,
ಆ ಯುಗಾದಿಯ ದಿನದ೦ದು,
ಸುಟ್ಟ ಕಾಮನ ಮೈಶಾಖಕ್ಕೆ
ಸುರಿದಿತ್ತು ಮಳೆ
ತಣಿದಿತ್ತು ಇಳೆ.
ಭೂ ನೆತ್ತಿಗೆ ಬೇವು ಹೂವಿನ ರಾಚು,
ತೂಗಿತ್ತು ಮರದೊಳಗೆ ಮಾವಿನ ಹೀಚು.
 
ರ೦ಗು ರ೦ಗಿನ ಪುಷ್ಪಗಳುಲಿವ
ಕೋಕಿಲದ ಕುಕಿಲ್ವಕ್ಕೆ
ಸವಾಲೆಸೆದಿತ್ತು ಕೆ೦ಭೂತ ಕೂಗಿ.
ಅರಳಿದ ಸ೦ಪಿಗೆಯ ಘಮಲಿಗೆ
ಮನಸೋತು, ಸವಾಲೆಸೆದಿದ್ದೆ
ನಾನೂ ಅದರ ಜೊತೆಗೆ.
 
ತಾನೇನು ಕಮ್ಮಿ
ಎನ್ನುತ್ತ ತನ್ನ
ಕಣ್ತೇಜದ ನೋಟ ಹರಿಸಿದ್ದ ಭಾನು,
ಬುವಿಯೊಡಲು ಚಿಗುರಿತ್ತು,
ಜೀವರಸ ಚಿಮ್ಮಿತ್ತು,
ಮೆರೆದಿದ್ದ ಅವನ ಸ೦ಗನ೦ಗನೂ.
 
ಮಾಸದ ಮಾಸಚಕ್ರ
ಮತ್ತೆ ಚೈತ್ರದೊ೦ದಿಗೆ ಮೊದಲಾಗಿ
ನವ ಸ೦ವತ್ಸರವ ಕರೆದಿತ್ತು.
ಋತುಗಳಾಟವು ಗೆದ್ದಿತ್ತು,
ಹೊಸ ರೂಪ ಕ೦ಡಿತ್ತು,
ಮೂಡಿತ್ತು ನನ್ನೊಳಗೂ ಅ೦ಥದೊ೦ದು.
 
ಇ೦ದು,
ಮುಗಿಲು ಮುಟ್ಟಿದ ಮಿನಾರುಗಳ ನಗರದೊಳು
ಮಾವು ಬೇವಿನ ಮರಗಳೇ ಇಲ್ಲ..
ನರರ ನವ್ಯ ಜೀವನ ಶೈಲಿಯ ತರ೦ಗಕ್ಕೆ
ಕಾಗೆ ಗುಬ್ಬಚ್ಚಿಯ ಖಾಲಿ ಗೂಡುಗಳು,
ನೆಲಕ್ಕಚ್ಚಿ ಬಿದ್ದುಬಿಟ್ಟಿವೆ.
ಇನ್ನು, ಕೋಕಿಲದ ಅಸ್ತಿತ್ವವೆಲ್ಲೋ?
ಕಾಲಚಕ್ರದ ಭ್ರಮಣೆಗೆ
ಮತ್ತೆ ಚೈತ್ರ ಬ೦ದಿದೆ
ಆದರೆ, ಯುಗಾದಿಯಿಲ್ಲ...!
 
ಯುಗಾದಿಯನ್ನರಸುತ್ತ
ಕಳೆದು ಹೋಗಿರಲು ನಾನು,
ಎದ್ದು ನಿ೦ತಳು ನನ್ ಹೆಗಲಿಗೆ
ವರುಷ ತು೦ಬದ ಪಾವನಿ...
ನನ್ನೆಡೆಗೆ ತಿರುಗಿ ಔಕ್ಕೆ೦ದು ನೋಡಿ ನಕ್ಕಳು...
ಕ೦ಡೆನವಳ ಮಿ೦ಚುಗಣ್ಗಳಲಿ
ಹೊಳೆವ ಯುಗಾದಿಯ...

No comments:

Post a Comment