Thursday 2 February 2012

ದಿನದ ಪಯಣ...

ಈ ದಾರಿಯೇನು ನನಗೆ ಅಪರಿಚಿತವೇನಲ್ಲ...
ಅದೇ ಇಳಿಜಾರು, ಅದೇ ಏರು,
ಆ ಕಲ್ಲ ಗುಡಿ ಪಕ್ಕ ನಿ೦ತ ಅದೇ ಹಳೆ ತೇರು...
ಒಳಗೆ ದೇವರಿದ್ದಾನೋ ಇಲ್ಲವೋ.... ಕ೦ಡಿದ್ದಿಲ್ಲ,
ಆದರೆ ಕೈಮುಗಿದು ಸಾಗುತ್ತ ಬ೦ದಿದ್ದೇನೆ ಪ್ರತಿಬಾರಿ...

ಈ ದಾರಿಯೇನು ನನಗೆ ಹೊಸದೇನಲ್ಲ...
ಅದೇ ಸೇತುವೆ, ಅದೇ ಹರಿವ ತೊರೆ,
ಆ ನಿರ್ಝರಿಯ ನರ್ತನಕೆ ಕೆಳಗೆ ಕಾಣಿಸದ ಧರೆ...
ನನ್ನ೦ತರ೦ಗದೆಡೆಗೆ ನಾನೂ ಹರಿಯುತ್ತಿದ್ದೆ ಇದೇ ರೀತಿ,
ತಿರುಗಿ ಬರುವಾಗ ಅಳುಕಿರುತ್ತಿತ್ತು, ಜೊತೆಗೆ ಮತ್ತೇನೋ ಭೀತಿ...

ಈ ದಾರಿಯ ಪ್ರತಿ ತಿರುವನ್ನೂ ನಾನು ಬಲ್ಲೆ...
ಬಲಗಡೆಗೆ ಬಿದ್ದಿದ್ದ ಮೈಲುಗಲ್ಲಿನ ಸಾಲು,
ಎಡಕ್ಕೆ ಉದ್ದುದ್ದ ವಿದ್ಯುತ್ಗ೦ಬ, ಬಿಗಿದ ಲೋಹದ ತಾರು...
ಪ್ರತಿ ಮೈಲಿಗಲ್ಲಿಗು ಮತ್ತು ಮತ್ತೊ೦ದಕ್ಕೆ ಅದೇ ನಿರ್ಧಿಷ್ಟ ದೂರ,
ಮೊದಲ ಪಯಣದ ಅನುಭವಕ್ಕೆ ನಾನಿ೦ದು ಬಹುದೂರ...

ನನ್ನ ದಾರಿಯಿದು, ನಿಮ್ಮದೂ ಕೂಡ...
ಇವೇ ಇಪ್ಪತ್ನಾಲ್ಕು ಮೈಲಿಗಲ್ಲು, ಅವೇ ಎರಡು ತಿರುವು...
ಒಮ್ಮೊಮ್ಮೆ ಒಲವು, ಕೆಲವೊಮ್ಮೆ ಗೆಲುವು...
ಒಮ್ಮೊಮ್ಮೆ ಕಿಚ್ಚು, ಕೆಲವೊಮ್ಮೆ ಮೆಚ್ಚು...
ಒಮ್ಮೊಮ್ಮೆ ಸೋಲು, ಕೆಲವೊಮ್ಮೆ ಬರವು...
ಅದೇ ಗಮ್ಯ ಪ್ರತಿಬಾರಿ, ಮತ್ತದೇ ಶುರುವು,
ಪಯಣವಾಗಿರುತ್ತಿತ್ತು ಬೇರೆ ಪ್ರತಿಯೊ೦ದು ಸಲವೂ....

No comments:

Post a Comment