Tuesday 30 October 2012

ಝೀಬ್ರಾ ಕ್ರಾಸಿ೦ಗ್...

ಎ೦ದಿನ೦ತೆ, ಇವತ್ತು ಕೂಡ ನಿ೦ತಿದ್ದೆ
ರಸ್ತೆ ದಾಟಲು ಝೀಬ್ರಾ ಕ್ರಾಸಿನೆದರು...
ಟ್ರಾಫಿಕ್ ಸಿಗ್ನಲ್ಲು ಇನ್ನೂ ಅನುಮತಿಯಿತ್ತಿರಲಿಲ್ಲ....
ಬಸ್ಸು, ಲಾರಿ, ಕಾರು, ಸ್ಕೂಟರ್, ಆಟೋ, ಬೈಕು
ಓಡುತ್ತಿದ್ದವು ಭರ್ರೆ೦ದು, ಹಚ್ಚಿಕೊ೦ಡು ಲೈಟು....

ಅದೇಕೋ,
ಝೀಬ್ರಾ ಕ್ರಾಸಿ೦ಗ್ ನ ಪಟ್ಟೆಗಳ ಮೇಲೆ
ಹರಿಯಿತು ನನ್ನ ದೃಷ್ಟಿ ಅಚಾನಕ್ಕಾಗಿ...
ಒ೦ದೇ ಅಗಲ, ಒ೦ದೇ ಉದ್ದ....
ಒ೦ದೇ ಅಳತೆಯ ಕಪ್ಪು ಬಿಳಿ ಪಟ್ಟೆಗಳು
ಒ೦ದರ ಪಕ್ಕ ಮತ್ತೊ೦ದು ಅನವರತ....
ಹಗಲಿನ೦ತರ ಇರಳು, ಇರುಳಿನ೦ತ ಹಗಲಿರುವ೦ತೆ....

ಬಿಳಿ ಪಟ್ಟೆ ಬೇಸರದಲ್ಲಿತ್ತು, ಕೊರಗುತ್ತಿತ್ತು...
ಕಪ್ಪು ಪಟ್ಟೆ ಮಬ್ಬಗಿತ್ತು, ಲೊಚಗುಟ್ಟುತ್ತಿತ್ತು...
ಹೀಗೆಕೆ೦ದು ನಾ ಕೇಳಿದಾಗ,
"ನನ್ನದೂ ಒ೦ದು ಬಣ್ಣವೇ...?, ಕಪ್ಪು ಬಣ್ಣದಲ್ಲೇನು ರೂಪ...?"
ಎ೦ದು ತನ್ನ ಬಗ್ಗೆ ತಾನೆ ಅಸಹ್ಯ ಪಟ್ಟಿತು ಕಪ್ಪು ಪಟ್ಟೆ....
"ಅ೦ದವಿಲ್ಲ, ಚ೦ದವಿಲ್ಲ... ಏನಿದೆ, ಈ ನನ್ನ ಬಣ್ಣದಲ್ಲಿ...?"
ಎ೦ದು ಪ್ರಶ್ನೆ ಹಾಕಿತು ತಿರುಗಿ ಬಿಳಿ ಪಟ್ಟೆ....
ಒಟ್ಟಿನಲ್ಲಿ, ಅವಕ್ಕೆ ತಮ್ಮ ಬಣ್ಣ ಇಷ್ಟವಿರಲಿಲ್ಲ....

ನಾ ಯೋಚಿಸತೊಡಗಿದೆ...
ಕೂಡಲೇ ನನ್ನ ತಲೆಯ ಮೇಲೆ ಹ೦ಡ್ರೆಡ್ ವ್ಯಾಟ್ ಬಲ್ಬ್ ಉರಿದು,
ನನ್ನ ಕಣ್ಗಳು ಮಿ೦ಚಿದವು....
ಕಪ್ಪು ಬಿಳಿ ಪಟ್ಟೆಗಳ ಕಿವಿಯಲ್ಲಿ ಉಪಾಯ ಉಲಿದೆ...
ಒಪ್ಪಿ, ಕಣ್ಗಳರಳಿಸಿದವು ಪಟ್ಟೆಗಳೆಲ್ಲವು....!!

ಕ್ಷಣಾರ್ಧದಲ್ಲಿ,
ಕಪ್ಪು ಪಟ್ಟೆ ಬಿಳಿ ಬಣ್ಣ ಬಳಿದುಕೊ೦ಡಿತು...
ಮತ್ತು ಬಿಳಿ ಪಟ್ಟೆ, ಕಪ್ಪು ಬಣ್ಣವನ್ನು....
ತಮ್ಮ ತಮ್ಮನ್ನೇ ನೋಡಿಕೊ೦ಡು ಖುಷಿ ಪಟ್ಟವು...
ಬಿದ್ದ ಸಿಗ್ನಲ್ ಹೋಗುವ ಮು೦ಚೆ,
ಈ ಕಪ್ಪು-ಬಿಳಿ ಪಟ್ಟೆಗಳಲ್ಲಿ ಹಾದು ರಸ್ತೆ ದಾಟಿದೆ...
ಹಿ೦ದಿರುಗಿ ನೋಡಿದಾಗ,
ಮು೦ಚಿದ್ದ೦ತೆಯೇ ಕಾಣುತ್ತಿದ್ದ ಝೀಬ್ರಾ ಕ್ರಾಸಿ೦ಗ್,
ನಗುತ್ತಿತ್ತು....!!!!

1 comment:

  1. ನಿಜ ಯಾವಗಲು ತಮ್ಮಲ್ಲಿರುವದಕ್ಕಿಂತ ಪರರ ಬಳಿಯಿ ಇರುವುದೆ ಶ್ರೇಷ್ಟ ಅಂದುಕೊಳ್ಳುವೆವು. ಆದರೆ ಪರರಿಗೆ ನಮ್ಮಲ್ಲಿರುವುದು ಇಷ್ಟ ಅನ್ನುವುದು ಹೊಳೆಯುವುದೆ ಇಲ್ಲ

    ReplyDelete