Wednesday 8 June 2011

ಕಾಯುತ್ತಿದ್ದಾಳೆ ಜಾನಕಿ...

ಥೇಟ್ ಬಿಲ್ಲಿನ೦ತೆಯೇ ಕಾಣುವದು
ಎದುರುಮನೆಯ ನುಗ್ಗೆ ಮರದಲ್ಲಿ
ಬಾಗಿ ನಿ೦ತಿರುವ ಆ ರೆ೦ಬೆ...
ಆ ಮನೆಯ, ಇನ್ನೂ ಮದುವೆಯಾಗದ ಜಾನಕಿ
ಆ ಬಿಲ್ಲನ್ನೇ ದಿಟ್ಟಿಸುತ್ತಿರುತ್ತಾಳೆ
ಹೊತ್ತಲ್ಲದ ಹೊತ್ತಲ್ಲಿ, ಮು೦ಜಾನೆ ಸ೦ಜೆ...

ಒಮ್ಮೆ ತಲೆಯ ಬಿಳಿಗೂದಲನ್ನು
ಮುಚ್ಚಿಕೊಳ್ಳುತ್ತ ಅವಳು ಹೇಳಿದ್ದಳು -
ಈ ಶಿವ ಧನಸ್ಸನ್ನು ಮುರಿದು ತನ್ನ ವರಿಸಲು
ರಾಮ ಬ೦ದೇ ಬರುವನೆ೦ದು..
ಆಗ ಒಳಗೊಳಗೆ ನನ್ನ ಮನಸ್ಸು ಅವಳಿಗೆ ಕೇಳದ೦ತೆ ಅ೦ದಿತ್ತು -
"ಶಬರೀ.. ನಿನಗಿವಳೊಬ್ಬ ಪ್ರತಿಸ್ಪರ್ಧಿ"..!

ಅದೇ ಸ೦ಜೆ, ಆ ನುಗ್ಗೆ ಮರದ ಬುಡಕ್ಕೆ
ಹಾರಿ ಬ೦ದ ಗುಬ್ಬಚ್ಚಿ,
ಮಣ್ಣೊಳಗೆ ಹೊರಳಾಡುತ್ತ, ರೆಕ್ಕೆಗಳನ್ನೆಲಕ್ಕೊತ್ತಿ
ಮಣ್ಣನೆರಚಿಕೊಳ್ಳುವಾಗ, ಜಾನಕಿ ಉಸುರಿದ್ದಳು -
"ಇನ್ನೇನು ಮಳೆ ಬ೦ದೇ ಬಿಡುವುದು"
ಆಗ ಮೂಡಿದ ಇ೦ದ್ರಧನುಷದ ಬಣ್ಣಗಳಿಗೆ ಮರೆಯಾಗಿ ಗುಬ್ಬಚ್ಚಿಯ ಕೇಳಿದ್ದೆ -
"ಹೀಗೆಯೇ, ರಾಮ ಬರುವ ಸ೦ಜ್ಞೆಯನ್ನು ತಿಳಿಸಬಾರದೇ?"
ಅಷ್ಟೇ...! ಅ೦ದಿನಿ೦ದ ಈ ಊರಿನಲ್ಲಿ
ಗುಬ್ಬಿಗಳ ಪತ್ತೆಯೇ ಇಲ್ಲ!

ಬಿಳಿಯರಳೆಯ೦ತೆ ತೇಲುವ ಬೆಳ್ಮುಗಿಲ
ಅಟ್ಟಿಸಿಕೊ೦ಡು ಬ೦ದ ಕಾರ್ಮೋಡ
ಬುವಿಯನ್ನಪ್ಪಿಕೊ೦ಡಾಗ,
ಇಳೆಯೊಡಲಲ್ಲೆಲ್ಲ ಮಿ೦ಚಸ೦ಚಾರ,
ಗುಡುಗು ಘರ್ಷಣೆಯ ಮಿಲನಮಳೆ ನಿರ್ವಿಕಾರ..
ಈ ಬೇಗೆಯಲ್ಲಿ ಸುರಿವ ಹನಿಗಳು ಮಾತ್ರ ತ೦ಪು..
ನೋಡುತ್ತಿದ್ದಳು ಜಾನಕಿ, ಅವಳ ಕಣ್ಣಾಗಿತ್ತು ಕೆ೦ಪು...!

ಜಾನಕಿಯ ಎದೆಯೊಳೆದ್ದ ಬಿರುಗಾಳಿ
ಹೊರಬಿದ್ದು ಗುದ್ದಿತ್ತು, ಆ ಮಿಲನ ದೃಶ್ಯಕ್ಕೆ..
ಅದರ ರಭಸಕ್ಕೆ ಕಾಲ್ಕಿತ್ತಿತ್ತು ಮಳೆಮೋಡ ಬುವಿಯ ಹೊರಕ್ಕೆ...
ಬಿಲ್ಲು ಬಿದ್ದಿತೇ? ಕಣ್ಣು ಹಾಯಿಸಿದಳು ಜಾನಕಿ,
ಸೋತಿದ್ದಳು ಅವಳದೇ ನಿಟ್ಟುಸಿರುಗಳ ಭಾರಕ್ಕೆ...

ಬಾನು ಈಗ ನೀಲಿನಿರಾಳ, ಅದು ಜಾನಕಿಯ ಮನಸ್ಸಲ್ಲವಲ್ಲ...
ಬುವಿಯೂ ಹಸಿ ಹಸಿ ತ೦ಪು, ಅದು ಜಾನಕಿಯ ಬಾಳಲ್ಲವಲ್ಲ...
ಇದ್ದಕ್ಕಿದ್ದ೦ತೆ ಸುರಿವ ಜೋರು ಮಳೆಯ೦ತೆ, ಒತ್ತರಿಸಿ ಬರುವ
ಅವಳ ದುಃಖಕ್ಕೆ ಶಿಥಿಲವಾಗುತ್ತಿದೆ ಆ ಬಿಲ್ಲುರೆ೦ಬೆ...
ರಾಮ, ನಿನ್ನ ವರಿಸದಯೇ ಈ ಜಾನಕಿಗೆ ವನವಾಸ...!

ಶಬರೀ.. ನಿನ್ನ ಬಳಿ ಇರುವನೇ ರಾಮ ?
ಕಾಯುತ್ತಿದ್ದಾಳೆ ಎದುರುಮನೆ ಜಾನಕಿ,
ಕಳುಹಿಸಬಾರದೇ ಅವನ...

No comments:

Post a Comment