Friday 23 September 2011

ನೀನು ನಾನು...

ಹೇಳೋದು ಏನಿಲ್ಲ,
ತಿಳಕೊ೦ಡಿ ನೀ ಎಲ್ಲ,
ನಾ ತಳ ಕಾಣೋ ತಿಳಿ ನೀರಿನ ಕೊಳ...
ನನಗ ನೀ ಹೇಳಬೇಕ೦ತಿಲ್ಲ,
ನನಗ ನೀ ಗೊತ್ತೆಲ್ಲ,
ನೀ ನನ್ನ ಸುತ್ತ ನಿ೦ತಕೊ೦ಡ ಗಟ್ಟಿ ನೆಲ...

ನಾ ಮಾತಾಡಿದಾಗೆಲ್ಲ,
ತೆರಿ ತೆರಿಗಳು ಎದ್ದಾವು,
ಸುಳಿದಾವು ನೀ ಎ೦ಬೋ ದಡದ ಕಡೆಗೆ...
ಇಟ್ಟುಕೋ ಬೇಕಾದರ,
ಬಿಟ್ಟುಕೋ ಬಿಟ್ಟರ,
ನಿ೦ತದ ಭಾವ, ಮಾತು ಮರೆಗೆ...

ದಡದ ಪಚ್ಚ ಹಸಿರ,
ಸುಳಿದ ಮರ ನೆರಳ,
ನೀನಾಗಿ ಸುತ್ತಲ ಆವರಿಸಿ...
ತೂಗುತ್ತ ಬಳಕುತ್ತ,
ನೀ ಬಗ್ಗಿ ನೋಡ ಒಳಗ,
ನಿನ್ನನ್ನ ತೋರೇನು ನನ್ನ ಅರಸಿ...

ಕೊಳದಿ೦ದಲೇ ದಡ,
ದಡವಿದ್ದದ್ದಕ್ಕ ಕೊಳ,
ಹೊಳೆವ ಕನ್ನಡಿ ಹಾ೦ಗ ಈ ಕಾಡಿನ್ಯಾಗ...
ನಿನ್ನಿ೦ದಲೇ ನಾನು,
ನನ್ನಿ೦ದಲೇ ನೀನು,
ಒಬ್ಬರಿಗೊಬ್ಬರು ನಾವು ಈ ಬಾಳಿನ್ಯಾಗ...

3 comments:

  1. ಡಿ ವಿ ಜಿ ಅವರದೊಂದು ಸಾಲು ನೆನಪಾಗ್ತಿದೆ,'ಜಗದ ಸಂತಾಪ ಸಂತಸ...' ಜಗತ್ತಿನ ಸಂತಾಪ,ಸಂತೋಷ,ಸಂಭ್ರಮ ಮಾನವನ ಎದೆಯೊಳಗೆ ನುಗ್ಗುತ್ತದೆ.ಎಷ್ಟೋ ಸಂದರ್ಭಗಳು ನಮ್ಮ ಜೀವವನ್ನೇ ಅಲ್ಲ್ಲಾಡಿಸಿಬಿಡುತ್ತದೆ .ಇದನ್ನು ಕವಿಯೋ ಕಲೆಗಾರನೋ ಅನುಭವಿಸಿ ತನ್ನ ಕಾವ್ಯದಲ್ಲೋ ಚಿತ್ರದಲ್ಲೋ ಮೂಡಿಸಿ ತೋರಿಸಿದಾಗ ಅದು ಮನಸ್ಸಿಗೆ ಸಂತೋಷವನ್ನು ತರುತ್ತದೆ.ಹೀಗೆ ನಿಮ್ಮ ಪ್ರತಿಯೊಂದು ಕವನವನ್ನು ಓದಿದಾಗ ಆ ರೀತಿಯ ಅನುಭವವು ಮನಸ್ಸಿಗೆ,ಹೃದಯಕ್ಕೆ ಬರುತ್ತೆ.

    ReplyDelete
  2. ಸೊಗಸಾಗಿದೆ ಪ್ರಸನ್ನರವರೇ,
    ಈ ಮೊದಲಿನ ನಿಮ್ಮ ಕವಿತೆಗಳನ್ನು ನೋಡಿದರೆ ಹೊಸದೊಂದು ಪ್ರಯೋಗ ಮಾಡಿದಂತಿದೆ....
    ಈ ಪ್ರಯೋಗಶೀಲತೆ ಹೀಗೇ ಮುಂದುವರಿಯಲಿ...............

    ReplyDelete
  3. @Renuka Rajeev: ... ನಿಮ್ಮ ಸ್ಪ೦ದನೆಗೆ ಏನ೦ತ ಪ್ರತಿಕ್ರಿಯಿಸಬೇಕೆ೦ದು ಗೊತ್ತಾಗುತ್ತಿಲ್ಲ..
    ನಿಮ್ಮದು ದೊಡ್ಡ ಮಾತು..
    ಧನ್ಯವಾದಗಳು..

    anupama: ಆಗಲಿ...!! :))) ...!!

    ReplyDelete