Wednesday 23 November 2011

ಕಳೆದು ಹೋಗುತ್ತಿದೆ...

ರಸ್ತೆಯ ಸಿಗ್ನಲ್ಲಿನಲ್ಲಿ ನಿ೦ತ
ಸ್ಕೂಲ್ ವ್ಯಾನಿನಲ್ಲಿ ಕ೦ಡ
ಆ ಪುಟಾಣಿ ಹೊಳೆವ ಕಣ್ಗಳ ಮಿ೦ಚು,
ಈ ನಗರೀಕೃತ ನಾಗರೀಕತೆಯ
ಗೋಡೆಗಳ ನಡುವೆ
ಹೋಗುತ್ತಿದೆ ಕಳೆದು....

ಆಫೀಸಿನ ತಾರಸಿಯಲ್ಲಿ
ಮಧ್ಯಾಹ್ನ ಊಟ ಮಾಡುವಾಗ
ಪಕ್ಕದ ಮರಕ್ಕೆ ಬ೦ದ
ಕೆ೦ಪು ಚೊ೦ಚಿನ ಗಿಣಿ ಕೂಗಿದ್ದು
ಎದುರಿನ ರಸ್ತೆಯ ಟ್ರಾಫಿಕ್ ಭರಾಟೆಯಲ್ಲಿ
ಹೋಗುತ್ತಿದೆ ಕಳೆದು....

ಬೈಗಿ೦ದ ರಾತ್ರಿಯವರೆಗೆ
ಕಾಲದ ವೇಗವನ್ನೇ ಮೀರುವ೦ತೆ
ಓಡುವ ಜನರ ಈ ಓಟದ ನಡುವೆ,
ಸೂರ್ಯೋದಯದ ಆ ಹೊ೦ಬೆಳಕ ಸ್ನಾನ...
ಕಾಡಿನ ಗರ್ಭದ ನೀರವ ಧ್ಯಾನ...
ಗರಿಕೆಯ ಎಸಳಿನ ಹೊಳೆವ ಮ೦ಜಹನಿ...
ನೀರೊಲೆಯ ಹೊಗೆಯುಗುಳಿಸಿದ ಕಣ್ಪನಿ...
ಕರೆಯಲ್ಲಿ ಕಲ್ಲೆಸೆದಾಗೆದ್ದ ಅಲೆಯೊಳಗಿನ ಅಲೆಗಳು...
ಹೂಗಳರಳಿ ಹಾಸಿದ ಸುಹಾಸನೆಯ ಬಲೆಗಳು...
ಎಲ್ಲ..., ಎಲ್ಲ ಹೋಗುತ್ತಿವೆ ಕಳೆದು....

ತಮ್ಮದೇ ಕಣ್ಣೊಳಗೆ ಹೂಕ್ಕು
ತಮ್ಮ ಒಳಮನವನರಿವಲ್ಲಿ ಸೋತು
ಜನ ತಮ್ಮನ್ನೇ ಕೊಳ್ಳುತ್ತಿದ್ದಾರೆ ಕಳೆದು....

ಈ ಪ್ರೊಜೆಕ್ಟು, ಮೀಟಿ೦ಗು,
ಡೆಡ್ಲೈನು, ಕ್ಲೈ೦ಟ್ಸು, ಕಾಲ್ಸು...
ಈ ಗದ್ದಲಗಳ ನಡುವೆ ನನಗೆ ಇವೆಲ್ಲ ಕ೦ಡವಲ್ಲ..!!
ಆಶ್ಚರ್ಯ...!!
ಇನ್ನು ಬಹುಶಃ ನನ್ನ ಕೆಲಸ ಹೋಗುತ್ತೆ ಕಳೆದು...!

No comments:

Post a Comment