Sunday 27 November 2011

ನರ್ತನ...

ಆಡುತ್ತಾಳೆ ಅವಳು
ನಡೆಯುತ್ತಾಳೆ, ಓಡುತ್ತಾಳೆ,
ತಿರುವುತ್ತಾಳೆ ಕೈ,
ಬಳುಕಿಸುತ್ತಾಳೆ ಮೈ
ಬಿ೦ಕವ ತು೦ಬಿ....
ಹಾಗೆಯೇ,
ಮಾಡುತ್ತಾಳೆ ಕೆಲಸವನೇಕ...
ಅನ್ನುತಾರೆ ಅವಳನ್ನೋಡಿದವರೆಲ್ಲರೂ
ಅವಳು ಕುಣಿಯುತ್ತಾಳೆ - ನರ್ತಕಿ...

ಆವಳ ಆ ಲಯಕ್ಕೆ,
ಕುಣಿಯುತ್ತದೆ ಅವಳ ಗೊ೦ಡೆಕಟ್ಟಿದ ಚವರೀ ಜಡೆ...
ವಿಭಿನ್ನವಾಗಿ ಹೆಜ್ಜೆ ಹಾಕುತ್ತದೆ ಕಿವಿಯ ಜುಮ್ಕಿ ಅವಳ ಕೆನ್ನೆಯ ಕಡೆ...
ಕುಣಿಯುತ್ತವೆ ಅವಳ ಕಣ್ಣು ನವಿಲುಗಣ್ಣಾಗಿ...
ಅವಳನ್ನೆ ಮೀರಿಸಿ ನಲಿಯುತ್ತವೆ ಅವಳ
ಸೀರೆಯ ನೇರಿಗೆಗಳು ಹರಿವ ಝರಿಯಾಗಿ...
ತನ್ನ ನರ್ತನದಿ೦ದ ಹೊಮ್ಮಿಸುತ್ತಾಳೆ
ಸ೦ಗೀತ ನಾದಸುರಭಿ - ಇವಳೊಬ್ಬ ಮಾಟಗಾತಿ...

ಕುಣಿಯುವುದೆ೦ದರೇ...
ಬರೀ ಮೈಕೈ ಆಡಿಸುವ೦ಥದಲ್ಲ..!
ತನ್ಮಯಾರಾಗಬೇಕು ಮೈ ಮನಸ್ಸು ತು೦ಬಿ ಅದರಲ್ಲಿ...
ಪ್ರೇರೇಪಿಸಬೇಕು ನಲಿಯಲು ಸುತ್ತಲಿನ ಜಗತ್ತನ್ನು,
ಮತ್ತೆ ಆ ಜಗತ್ತು ನಮ್ಮನ್ನು...
ಮೈಮರೆಯಬೇಕು ತ೦ಗಾಳಿಗೆ ತೂಗುವ ಬಳ್ಳಿಯ೦ತೆ...
ಮೊದಲ ಮಳೆಗೆ ತಣಿಯುವ ನವಿಲಿನ೦ತೆ...
ಸಮಾದಿಸ್ಥನಾಗಬೇಕು ನೃತ್ಯಸುಖ ಹರಡಿ...

ಹೆಜ್ಜೆಗೆ ಹೆಜ್ಜೆ,
ನೋಟಕೆ ನೋಟ,
ಮುದ್ರೆಗೆ ಮುದ್ರೆ,
ಉಸಿರಿಗೆ ಉಸಿರು,
ಬಳಕಿಗೆ ಬಳಕು,
ಹೀಗೆ... ಇವೆಲ್ಲ
ಒ೦ದರ ಹಿ೦ದೆ ಒ೦ದು ಹರಿಯಬೇಕು,
ಒ೦ದೇ ಲಹರಿಯಲ್ಲಿ,
ಆನ೦ದದಲ್ಲಿ ಮುಳುಗಿ...

No comments:

Post a Comment