Friday 13 January 2012

ಮಗ್ಗಲು ಬದಲಿಸಿದ್ದಾಳೆ ಭೂಮಿ...

ಆವತ್ತು,
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...

ಅವರಿಬ್ಬರ ನಡುವಿನ
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...

ನೆಲವೂ ಕಳೆಗು೦ದಿ,
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...

ಆದರೆ,
ಎಷ್ಟು ಹೊತ್ತು ಅ೦ತ
ಈ ವಿರಹ ಹೀಗೇ ಇರಲು ಸಾಧ್ಯ...?

ಈಗ,
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!

*****************************************

ಎಲ್ಲರಿಗೂ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು...

2 comments:

  1. ಒಲವೂ ಇರಬೇಕು
    ಪ್ರೀತಿ ಅತಿಯಾಗದಿರಲು
    ಕಹಿಯೂ ಇರಬೇಕು
    ಕೋಪ-ಪ್ರೀತಿಗಳ
    ಮಧ್ಯೆ ಸರಿಯಾಗಿ ನಡೆಯುವುದು ಬದುಕು.

    ತಮಗೂ ಸಂಕ್ರಾಂತಿಯ ಶುಭಾಷಯಗಳು

    ReplyDelete
  2. ಹೌದು.. ಸಮರಸವೇ ಜೀವನ..
    ಸ್ಪ೦ದನೆಗೆ ಧನ್ಯವಾದಗಳು.. ಮತ್ತೆ ಮತ್ತೆ ಬರುತ್ತಿರಿ..

    ReplyDelete