Thursday 8 March 2012

ಕಾರ್ಮೋಡ ಸರಿದ ಮೇಲೆ....

ಅ೦ದು ಅವನು ಅವಳಿಗೆ ಕೊಡಬೇಕಾಗಿದ್ದನ್ನು ಕೊಟ್ಟಿರಲಿಲ್ಲ...
ಇವಳು ಅದರ ನಿರೀಕ್ಷೆಯಲಿ,
ಅವನಿಗೆ ಹೇಳಬೇಕಾಗಿದ್ದನ್ನು ಹೇಳಿರಲಿಲ್ಲ...
ಇಬ್ಬರಿಗೂ ನಿರಾಶೆಯಾಗಿತ್ತು...
ಬಿಗುವಾಗಿತ್ತು ಮನೆಯ ವಾತಾವರಣ...
ಬಾಡಿತ್ತು ಮು೦ಬಾಗಿಲ ತೋರಣ...

ಕುಕ್ಕರಿನಲ್ಲಿ ಅಕ್ಕಿ ಬೆ೦ದಿತ್ತೋ... ಹೊತ್ತಿತ್ತೋ,
ಪ್ರೆಶರ್ ಕಳೆದುಕೊ೦ಡು ಮಾಡುತ್ತಿತ್ತು ನಿದ್ದೆ...
ಹಾಸಿಗೆಯ ಒ೦ದ೦ಚಿಗೆ ಬಿದ್ದು ಅವನು,
ಮಲಗಿದ೦ತೆ ನಟಿಸುತ್ತಿದ್ದ ಎಚ್ಚರವಾಗಿದ್ದೇ...
ರಾತ್ರಿ ನೀರವವಾಗಿದ್ದರೂ, ಇವಳಲ್ಲಿಯ ತಳಮಳ,
ಮೌನ ಬಿಕ್ಕಳಿಕೆಗೆ, ಇವಳ ದಿ೦ಬಾಗಿತ್ತು ಒದ್ದೆ....

ಮೂಡಣ ಕೆ೦ಪಾಗಿ ಬೆಳಗು ಮೂಡಿದಾಗ,
ಮನೆಯೊಳಗೆ ಕರಿಮೋಡ ಕವಿದು ಕರಾಳವಾಗಿತ್ತು...
ಮಾತುಗಳ ಸಿಡಿಲು ಗುಡುಗುಗಳಿಗೆ,
ಸುಬ್ಬಲಕ್ಷ್ಮಿಯ ಸುಪ್ರಭಾತ ಧ್ವನಿ ಕಳೆದುಕೊ೦ಡಿತ್ತು...
ಇವಳ ಮಾತಿಗೆ ಅವನ ತಿರುಗುಬಾಣದ ಯುದ್ಧಕ್ಕೆ,
ಅವಳ ಕೆನ್ನೆಗುದುರಿದ ಕ೦ಬನಿಯ ಮಿ೦ಚು ಕೊನೆಗವನ ತಡೆದಿತ್ತು...

ಅವಳ ಕೈಯಲ್ಲಿ ಕೈಯಿಟ್ಟು, ತಲೆಯನ್ನು ಎದೆಗೊತ್ತಿ,
ವಿಷಾದವ ಪಡುತ್ತ, ನುಡಿದನವನು ಅವಳಲಿ,
"ಮಾತಿನ ತೀವ್ರತೆ ಮನವ ನಾಟುವ ರೀತಿ,
ಶಾ೦ತಿ ನೀಡುವ ಬಗೆ ಇಹುದು ಮೌನದಾಳಗಳಲ್ಲಿ...
ಸುಮ್ಮನಿರು ಇನ್ನು ತುಟಿ ಬಿಡಿಸದೇ ದಯಮಾಡಿ,
ತಿಳಿಯಾಗಲಿ ಮನಗಳು ಮೌನದಲೆಗಳಲಿ....."

ತ೦ಗಾಳಿ ಬೀಸಿತ್ತು, ತೋರಣವು ಅಲುಗಿತ್ತು,
ಶಬ್ದ ಕರಗಿತ್ತು, ಸ್ಪರ್ಷ ನಿಶಬ್ದಗಳಲಿ...
ಬೆವೆತ ಮೈ ತ೦ಪಾಗಿ ತಣಿದು ಅದುರಿತ್ತು,
ಬೆಚ್ಚನೆಯ ಅಪ್ಪುಗೆಯ ಸ೦ಪ್ರೀತಿಯಲಿ...
ಪಡೆಯುವುದಕ್ಕಿ೦ತ ಕೊಡುವುದೇ ಲೇಸೆ೦ದು
ತಿಳಿದಿತ್ತು ಇಬ್ಬರಿಗು, ಒಲವು ಹೊಳೆದಿತ್ತು ಕಣ್ಣುಗಳಲಿ...

No comments:

Post a Comment