Thursday, 2 February 2012

ದಿನದ ಪಯಣ...

ಈ ದಾರಿಯೇನು ನನಗೆ ಅಪರಿಚಿತವೇನಲ್ಲ...
ಅದೇ ಇಳಿಜಾರು, ಅದೇ ಏರು,
ಆ ಕಲ್ಲ ಗುಡಿ ಪಕ್ಕ ನಿ೦ತ ಅದೇ ಹಳೆ ತೇರು...
ಒಳಗೆ ದೇವರಿದ್ದಾನೋ ಇಲ್ಲವೋ.... ಕ೦ಡಿದ್ದಿಲ್ಲ,
ಆದರೆ ಕೈಮುಗಿದು ಸಾಗುತ್ತ ಬ೦ದಿದ್ದೇನೆ ಪ್ರತಿಬಾರಿ...

ಈ ದಾರಿಯೇನು ನನಗೆ ಹೊಸದೇನಲ್ಲ...
ಅದೇ ಸೇತುವೆ, ಅದೇ ಹರಿವ ತೊರೆ,
ಆ ನಿರ್ಝರಿಯ ನರ್ತನಕೆ ಕೆಳಗೆ ಕಾಣಿಸದ ಧರೆ...
ನನ್ನ೦ತರ೦ಗದೆಡೆಗೆ ನಾನೂ ಹರಿಯುತ್ತಿದ್ದೆ ಇದೇ ರೀತಿ,
ತಿರುಗಿ ಬರುವಾಗ ಅಳುಕಿರುತ್ತಿತ್ತು, ಜೊತೆಗೆ ಮತ್ತೇನೋ ಭೀತಿ...

ಈ ದಾರಿಯ ಪ್ರತಿ ತಿರುವನ್ನೂ ನಾನು ಬಲ್ಲೆ...
ಬಲಗಡೆಗೆ ಬಿದ್ದಿದ್ದ ಮೈಲುಗಲ್ಲಿನ ಸಾಲು,
ಎಡಕ್ಕೆ ಉದ್ದುದ್ದ ವಿದ್ಯುತ್ಗ೦ಬ, ಬಿಗಿದ ಲೋಹದ ತಾರು...
ಪ್ರತಿ ಮೈಲಿಗಲ್ಲಿಗು ಮತ್ತು ಮತ್ತೊ೦ದಕ್ಕೆ ಅದೇ ನಿರ್ಧಿಷ್ಟ ದೂರ,
ಮೊದಲ ಪಯಣದ ಅನುಭವಕ್ಕೆ ನಾನಿ೦ದು ಬಹುದೂರ...

ನನ್ನ ದಾರಿಯಿದು, ನಿಮ್ಮದೂ ಕೂಡ...
ಇವೇ ಇಪ್ಪತ್ನಾಲ್ಕು ಮೈಲಿಗಲ್ಲು, ಅವೇ ಎರಡು ತಿರುವು...
ಒಮ್ಮೊಮ್ಮೆ ಒಲವು, ಕೆಲವೊಮ್ಮೆ ಗೆಲುವು...
ಒಮ್ಮೊಮ್ಮೆ ಕಿಚ್ಚು, ಕೆಲವೊಮ್ಮೆ ಮೆಚ್ಚು...
ಒಮ್ಮೊಮ್ಮೆ ಸೋಲು, ಕೆಲವೊಮ್ಮೆ ಬರವು...
ಅದೇ ಗಮ್ಯ ಪ್ರತಿಬಾರಿ, ಮತ್ತದೇ ಶುರುವು,
ಪಯಣವಾಗಿರುತ್ತಿತ್ತು ಬೇರೆ ಪ್ರತಿಯೊ೦ದು ಸಲವೂ....

Thursday, 19 January 2012

ಕಾವ್ಯ ಹುಟ್ಟುವುದಿಲ್ಲ....!!

ನಾನು ಮತ್ತು ಅವಳು
ಮೊದಲ ಬಾರಿ ಭೇಟಿಯಾದಾಗ,
ಕಾವ್ಯ ಹುಟ್ಟಲಿಲ್ಲ...!
ಪ್ರೇಮ ಹುಟ್ಟಿತ್ತು....

ನಾನು ಮತ್ತು ಅವಳು
ಒಬ್ಬರನ್ನೊಬ್ಬರ ಕೈ ಹಿಡಿದುಕೊ೦ಡಾಗ,
ಕಾವ್ಯ ಹುಟ್ಟಲಿಲ್ಲ...!
ನ೦ಬಿಕೆ ನೆಲೆಗಟ್ಟಿತ್ತು....

ನಾನು ಮತ್ತು ಅವಳು
ಅಷ್ಟು ಜನರೆದುರಿಗೆ ಲಗ್ನವಾದಾಗ
ಕಾವ್ಯ ಹುಟ್ಟಲಿಲ್ಲ...!
ಸತಿಪತಿಯ ಬಾ೦ಧವ್ಯ ಧೃಢಪಟ್ಟಿತ್ತು....

ನಾನು ಮತ್ತು ಅವಳು
ಒಟ್ಟಾಗಿ ಕಷ್ಟಗಳನ್ನೆದುರಿಸಿದಾಗ
ಕಾವ್ಯ ಹುಟ್ಟಲಿಲ್ಲ...!
ಆತ್ಮವಿಶ್ವಾಸ ನೂರ್ಮಡಿಯಾಗಿತ್ತು....

ನನ್ನ ಮತ್ತು ಅವಳ
ಬಾಳ ಮುಖಪುಟದಲ್ಲಿ
ಕಾವ್ಯ ಹುಟ್ಟಲಿಲ್ಲ...!
ಬದುಕು ಸಾಗಿದ ಹೆಜ್ಜೆಗುರುತಿತ್ತು....

ಆದರೆ,
ಒಳಪುಟಗಳಲೆಲ್ಲ,
ನಾವು ಗಳಿಸಿದ್ದ ನೆನಪುಗಳಲ್ಲಿ ಕಾವ್ಯ ಅರಳಿತ್ತು...!
ಒಪ್ಪಿ ತಬ್ಬಿದ ಸುಖ ದುಃಖದಲ್ಲಿ ಕಾವ್ಯ ಘಮಘಮಿಸಿತ್ತು...!
ಜೀವನದ ಬೆಳವಣಿಗೆಗಳಲ್ಲಿ ಕಾವ್ಯ ಚಿಗುರಿತ್ತು...!
ನನ್ನನ್ನು ಅವಳಾಗಿ, ಅವಳನ್ನು ನನ್ನನ್ನಾಗಿ,
ಇಬ್ಬರನ್ನೂ ಒ೦ದಾಗಿ ತೋರುವ ಕಾವ್ಯ ಕನ್ನಡಿಯಿತ್ತು....!!

Friday, 13 January 2012

ಮಗ್ಗಲು ಬದಲಿಸಿದ್ದಾಳೆ ಭೂಮಿ...

ಆವತ್ತು,
ಅವಳು ತನ್ನ
ಇನಿಯನಿಗೆ ಮುನಿದು,
ಮೊಗ ಬೇರೆಡೆ ಹೊರಳಿಸಿ,
ತನ್ನ ದಾರಿ ಬದಲಿಸಿದ್ದಳು...

ಅವರಿಬ್ಬರ ನಡುವಿನ
ಕೋಪಕ್ಕೆ,
ಮರಗಳು ಕಣ್ಣೀರಿನ೦ತೆ ಎಲೆಗಳ
ಉದುರಿಸಿ ದುಃಖಿಸಿತ್ತು...
ಮೂಢಿಗಾಳಿ
ಆ ತರಗಲೆಗಳ ಚಲ್ಲಾಪಿಲ್ಲಿಯಾಗಿಸಿ
ಹತಾಶೆಯಾಗಿತ್ತು...

ನೆಲವೂ ಕಳೆಗು೦ದಿ,
ಕೋಪದ ಚಳಿಗೆ ನಡುಗಿ,
ಸುಕ್ಕುಗೊ೦ಡಿತ್ತು...
ಜನರ ಮೈಯೆಲ್ಲ ಒಡೆದು,
ತುಟಿ ಸೀಳಿ,
ಕೆ೦ಪು ನೆತ್ತರು ಹೆಪ್ಪುಗಟ್ಟಿ,
ಕಪ್ಪಾಗಿತ್ತು...
ರಾತ್ರಿ ಕತ್ತಲೆಯ ಗಾಢ
ಹೆಚ್ಚಾಗಿ, ಮತ್ತಷ್ಟು
ಕ್ರೂರಿಯಾಗಿತ್ತು...

ಆದರೆ,
ಎಷ್ಟು ಹೊತ್ತು ಅ೦ತ
ಈ ವಿರಹ ಹೀಗೇ ಇರಲು ಸಾಧ್ಯ...?

ಈಗ,
ಮಗ್ಗಲು ಬದಲಿಸಿದ್ದಾಳೆ ಭೂಮಿ ತನ್ನ ನಲ್ಲನೆಡೆಗೆ...
ಒಲವ ಸ್ವಾಗತ ಕೋರಿದ್ದಾನೆ ಇನಿಯ ರವಿ ಅವಳಿಗೆ...
ಪುಳಕಗೊಳಿಸಿದೆ ವಿಶ್ವವನ್ನು, ಅವರ ಬೆಚ್ಚನೆಯ ಪ್ರೀತಿ...
ಮೂಡಿ ಬ೦ದಿದೆ ಮತ್ತೆ ಸ೦ಭ್ರಮದ ಸ೦ಕ್ರಾ೦ತಿ....!!

*****************************************

ಎಲ್ಲರಿಗೂ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು...

Tuesday, 3 January 2012

ನನ್ನ ಜೀವನ ನನ್ನದು...

ನನ್ನ ಜೀವನವೆ೦ದರೇ...,
ಎಲ್ಲರ೦ತಯೇ ಉಬ್ಬು ತಗ್ಗುಗಳಿರುವ ದಾರಿ...
ನನ್ನ ಜೀವನ ನನ್ನದೇ,
ಸಾಗುವುದೆಲ್ಲಿಗೊ ಸವಾರಿ...?

ಕೆಲವೇ ಕೆಲ ಕಣ್ಗಳೊಳಗೆ
ಒಲವ ಕ೦ಡು ಹರಿವುದು ಜೀವನ...
ಗಟ್ಟಿಯಾಗುವುದೇ ಬ೦ಧನ...?
ಸುಟ್ಟು ಹೋಗುವುದೇ ವೇದನ...?

ಬಾಳ ಗುರಿಯೆಡೆಗಿನ ನಡುಗೆಯಲ್ಲಿ,
ಒಲವನರಸುವ ಬೆಡಗಿನಲ್ಲಿ,
ದುಡಿಮೆ ನಡುವಿನ ಬಿಡುವಿನಲ್ಲಿ,
ವಿಚಲಿತ ಆಗದಿರಲಿ ಮನ....

ಇದ್ದದ್ದು ಬಿದ್ದು ಹೋದರೂ,
ಬಿದ್ದದ್ದು ಎದ್ದು ಬ೦ದರೂ,
ಮನ ಕಷ್ಟಕೆ ಬೆ೦ದು ನೊ೦ದರೂ,
ದಣಿದು ನಿಲ್ಲದು ಕಾಲದ ಚಲನ....

ಸುಖದ ಸವಿ ತಣಿವಿದ್ದರೂ,
ಕಣ್ಣೀರು ಹನಿ ಹನಿ ಬಿದ್ದರೂ,
ಶಶಿ ಚುಕ್ಕೆಗಣ ಕರಿ ಹೊದ್ದರೂ,
ನನ್ನ ಹೆಜ್ಜೆ-ನನ್ನ ಜೀವನ...


ಹೊಸ ವರುಷದ ಹಾರ್ದಿಕ ಶುಭಾಶಯಗಳು..