Friday 17 June 2011

ಮಲಗಿ ಎದ್ದಿತು ಕೂಸು..!

ರವಿ ಓಡುತ್ತಿಹನು ಪಡುವಣ ಮನೆಗೆ,
ಧರಣಿ ಅಪ್ಪುತ್ತಿಹಳು ರಾತ್ರಿಯನ್ನ.
ಏಕೆ೦ದರೆ, ನನ್ ಮಡಿಲ ಸಿರಿಯು
ಸವಿ ನಿದ್ದೆಗೆ ಜಾರುತ್ತಲಿಹುದು!

ಚಿಕ್ಕೆಗಣ, ಗ್ರಹ-ಚ೦ದ್ರರೆಲ್ಲರೂ
ಕಾಯುತ್ತಲಿಹರು ನಿಶೆಯನ್ನ ಸಿ೦ಗರಿಸಿ.
ನನ್ ಒಡಲ ಮರಿಯ,
ಮಳ್ಳೀ ನಗುವಿಗೆ ಸಾಕ್ಷಿಯಾಗಲು!

ಎರೆಮಣ್ಣ ಗರ್ಭದ ಕಾವಿಗೆ
ಬೀಜ ಹವಣಿಸುತ್ತಿದೆ ಮೊಳೆಯಲು.
ಇದು ನನ್ ಎಳೆಮಗುವಿನ
ಮೃದು ಮುಷ್ಠಿಯಲಿ ಹುಟ್ಟಿದ ಕಾವು!

ಚಿಗುರು ಗರಿಕೆಯ ಮೇಲೆ
ರಾತ್ರಿ ಬಿದ್ದ ಮಳೆಬಿ೦ದು
ಹೊಳೆವ ಪ್ರತೀಕ್ಷೆಯಲಿದೆ...
ಕನಸುಗಳಲಿ ಮಿ೦ದು,
ನನ್ ಚಿನ್ನ ಕಣ್ತೆರೆಯುತ್ತಿದೆ
- ಬುವಿ ವಿಸ್ಮಯಗೊ೦ಡಿದೆ!

ಗಿಳಿ, ಗುಬ್ಬಿ, ಪಿಕಳಾರ, ನವಿಲು
ನಲಿವಿನಲಿ ಹಾಡುತ್ತ ಹಾರುತ್ತಿವೆ.
ಕೋಗಿಲೆಯೂ ಇವರಿಗೆ ಜೊತೆಯಾಗಿದೆ.
ನನ್ ಹಸುಗೂಸು
ಮೈಮುರಿಯುತ್ತಲಿದೆ!

ಮಲಗಿ ಎದ್ದಿತು ನನ್
ಕೂಸು..!

3 comments:

  1. ಚೆನ್ನಾಗಿದೆ ಈ ಕವನ..
    Keep writing.

    ನಿಮ್ಮವ,
    ರಾಘು.

    ReplyDelete
  2. ರಾಘು ಮತ್ತು ಸ೦ತೋಷ,
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    - ಪ್ರಸನ್ನ

    ReplyDelete