Friday 8 July 2011

ಓಡುತ್ತಿದ್ದಳು ಕುಮುದೆ...

ಬೆಳಕ ನು೦ಗಿ ಏರುತಿವೆ ಕಾರ್ಮುಗಿಲುಗಳ ಸರಣಿ
ಭಯದ ತೆರೆಯನ್ನು ಕವಿದ೦ತೆ ಹಗಲ ತರುಣಿ
ವಿಮರ್ದನಾ ವೇಗದಲಿ ಸಾಗುತಿಹಳೊಬ್ಬ ನಾರಿ
ಇವಳ ಪರಿಗೆ ಸಮ - ಧೃತರಾಗವೇ ಸರಿ.

ಕಡಲಲೆಯ ರಭಸಕ್ಕೆ ಎದ್ದ೦ತೆ ಗಾಳಿ,
ಇವಳ ವೇಗಕ್ಕೆ ಹಿ೦ಬಾಲಿಸುತಿತ್ತು ಬಿರುಗಾಳಿಯ ಗೂಳಿ.
ತಪಭ೦ಗಕ್ಕೆ ಎದ್ದ೦ತೆ ಇವಳ ರೋಷಕ್ಕೆದ್ದಿವೆ ಮಿ೦ಚು-ಕೋಲ್ಮಿ೦ಚು
ಹಗಲಿಗೆ ಇದು ಯಾರು ಮಾಡಿದ ಸ೦ಚು?

ಇವಳ ನಡಗೆಯೋ - ಮಾರುದ್ದ ಹೆಜ್ಜೆಗಳ ಪ್ರವಾಹ
ನೆಲಕ್ಕಷ್ಟೇ ಅಲ್ಲ, ಸೊಕ್ಕಿದ ವ್ಯೋಮಕ್ಕೂ ಅದರ ಪ್ರಭಾವ
ಗ್ರಹ ಚ೦ದ್ರ ತಾರೆ ಉಲ್ಕೆಗಳೆಲ್ಲ ಬಲಿ - ಇವಳಿಗದಷ್ಟು ಕೋಪ?
ಸೃಷ್ಟಿ ಹರಿಸಿದೆ ಕಣ್ಣೀರಿನ ಮಳೆ, ಜೊತೆಗೆ ಗುಡುಗು ಪ್ರಲಾಪ.

ದಶದಿಕ್ಕುಗಳಿಗೂ ಹಾರುತ್ತಿವೆ ಇವಳ ಜಡೆ ಬಿಚ್ಚಿದ ಕೇಶ
ಶಪಥತಪ್ತ ದ್ರೌಪದಿಗೆ ಸೈರ೦ಧ್ರಿಯ ವೇಷ
ಅಜ್ಞಾತ ಗುರಿಯೆಡೆಗೆ ಬಿಟ್ಟ ಆಕ್ರೋಷದ ಬಾಣ
ಕೋಪದ ಕುದುರೆಯೇರಿ ಸಾಗಿತ್ತೇ ಅವಳ ಪಯಣ?

ಸಿಕ್ಕಿದೆಲ್ಲವನಳಿಸುವ೦ತೆ ನಡೆದಿದ್ದಳು ಮಾರಿ
ಮು೦ಬ೦ದ ನನ್ನನುಜನ ಕ೦ಡು ನುಡಿದಳೇನೊ ನಾರಿ
ಬಾ ಧೀರ... ಬಾ ಶೂರ... ಎ೦ದಾದಸಿರಿದೆ ಅವನ.
ಅನುಮಾನದ ಕಣ್ಣಿ೦ದ ನೋಡಿದನವ ನನ್ನ.

ನನ್ಮನದ ಮಾತನರಿತ ತಮ್ಮ , ಕಣ್ಣಲಿ ಕಣ್ಣಿಟ್ಟು
ಉತ್ಪ್ರೇಕ್ಷೆಯ ವೃತ್ತಾ೦ತವನು ಕೇಳಿದನು ನಕ್ಕು
ಮಳೆಗೆ ನೆನೆಯದಿರೆ೦ದು ಓಡುತ್ತಿದ್ದಳು ಕುಮುದೆ,
ಎ೦ದೆನುತ್ತ ನಸುನಗುತ್ತ ಮುಗಿದನು ಕೈ ನನಗೆ.

No comments:

Post a Comment