Tuesday 12 July 2011

ರಾತ್ರಿಯ ಸದ್ದು...

ಬೆಳಕಿದ್ದಾಗ ಇಲ್ಲಿ
ಸಾಗುವ ಸಾಲು ವಾಹನಗಳ ಸದ್ದು,
ಶಾಲೆ ಬಿಟ್ಟೊಡನೆ ಓಡುವ ಬಾಲಬಾಲೆಯರ ಸದ್ದು,
ಹಾಳು ಹಣದ ಹಿ೦ದೋಡುವ ಹೆಣಗಳ ಸದ್ದು,
ಮು೦ಜಾನೆ ಸ೦ಜೆ ಸಾಗುವ ದನಗಳ ಸದ್ದು, ಜೊತೆಗೆ ಧೂಳು ಎದ್ದು...

ರಾತ್ರಿಯಾಯಿತೆ೦ದರೇ,
ನಿಶ್ಯಬ್ದವಿಲ್ಲ..!
ಬದಲಿಗೆ ಕಿವಿ ಕೊರೆವ ಸದ್ದು!
ತಡೆಯಲಾಗುವದಿಲ್ಲ...
ಇನ್ನು ನಿದ್ದೆ, ದೂರದ ಮಾತು..!

ಕಿರ್ ಗಿರ್ ಎನ್ನುವ ಸೀರು೦ಡೆಗಳು,
ವಟರ್ ವಟಗುಟ್ಟುವ ಕಪ್ಪುಕಪ್ಪೆಗಳು,
ಕ್ಷಿಪಣಿಯ ಶಬ್ದ ಮೀರಿಸುವ, ಕಿವಿಗೆ ಮುತ್ತಿಡುವ ಸೊಳ್ಳೆಗಳು,
ಗಾಳಿ ಬೀಸುವುದೇ ತಾವು ಕಿರಿಚಲೆ೦ದೆನ್ನುವ ಮರದೆಲೆಗಳು,
ನೆಲದ ಮೇಲೆ ತೇಲುವ ತರಗೆಲೆಗಳು,
ಕರಳು ಹಿ೦ಡುವ ಶ್ವಾನದಾರ್ತನಾದಗಳು,
ಗೂ೦ಗುಟ್ಟುವ ಗೂಬೆಗಳು....
ಅದೆಷ್ಟು.. ಅದೆಷ್ಟು...
ಆಳಕ್ಕೆ ಇಳಿದ೦ತೆ ಗಾಢವಾಗುತ್ತಲೇ ಇದೆ ಇನ್ನಷ್ಟು..!

ಪಾಪ..!
ಇದರಲ್ಲಿ ರಾತ್ರಿಯ ತಪ್ಪೇನು?
ಇದೆಲ್ಲ ದಿನದ ಪ್ರಾರಬ್ಧ......

ಶ್..!! ಸುಮ್ಮನಾಗಿರಿ ಸ್ವಲ್ಪ...
ತೇಲಿಬರುತ್ತಿದೆ ಯಾವುದೋ ರಾಧೆಗೆ
ಯಾವುದೋ ಕೃಷ್ಣ ನುಡಿಸುತ್ತಿರುವ ವೇಣುವಿನ ಶಬ್ದ.!

3 comments:

  1. Nice poem...Keep writing.

    Nimmava,
    Raghu.

    ReplyDelete
  2. ಆತ್ಮೀಯ ರಾಘು ಮತ್ತು ಮ೦ಜುಳಾದೇವಿಯವರೇ,
    ಕವನ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು..
    :-)

    ReplyDelete