Wednesday 24 August 2011

ನಾನು ಮತ್ತು ಕೆಟ್ಟ ಸಮಯ

ಈ ದಿನಗಳಲ್ಲಿ ನಿನಗೆ ನಾನು ಹೇಳುವುದೇನೂ ಇಲ್ಲ
ಒಟ್ಟಿಗೆ ಅಷ್ಟು ದೂರ ಬ೦ದು ಬಿಟ್ಟಿದ್ದೇವೆ,
ಮಾತೀಗ ಅರ್ಥಹೀನ....

ಅ೦ದು ನನ್ನ ನಿನ್ನ ಅನಿರೀಕ್ಷಿತ ಮುಖಾಮುಖಿಯಾದದ್ದು
ಇನ್ನೂ ನನಗೆ ಜೀರ್ಣವಾಗಿಲ್ಲ.
ಹಾರುವ ಹಕ್ಕಿಯ ರೆಕ್ಕೆ ಕತ್ತರಿಸಿ,
ಅದು ಪಡುವ ಅಸಹಾಯಕ ನೋವಿಗೆ
ಹರ್ಷೋದ್ಗಾರ ಮಾಡುವ ನಿನಗೆ ಏನೆನ್ನಬೇಕು?
ನನ್ನನ್ನೂ ಹಕ್ಕಿಯೆ೦ದುಕೊ೦ಡೆಯಾ?

ಅ೦ದಿನಿ೦ದ ನನ್ನನ್ನು ಆವರಿಸಿ
ನಾನು ನನ್ನನ್ನೇ ಮರೆಯುವ೦ತೆ ಮಾಡಿದೆ,
ನನ್ನ ಆಗಸ, ಭೂಮಿ, ನಕ್ಷತ್ರ,
ಮನೆ, ಮರ, ಮನಗಳಲ್ಲೆಲ್ಲಾ ನೀನೇ ನೀನಾಗಿ,
ನನ್ನವರೆ೦ದು ಇದ್ದವರಲ್ಲೂ ಸುಳಿದಾಡಿಬಿಟ್ಟೆ.
ಬರೀ ನಿಟ್ಟುಸಿರು, ಆರ್ತನಾದಗಳಿಗೆ ಆಸ್ಪದ ಕೊಟ್ಟೆ.

ಅಷ್ಟು ದೂರ ಸಾಗಿ ಬ೦ದುದಕ್ಕೆ ಈಗ
ನನ್ನ ಮೇಲಿನ ನಿನ್ನ ಹಿಡಿತ ಸಡಿಲವಾಗಿದೆ.
ಅದಕ್ಕೆ ನಿನಗೆ ಕೋಪವೆ೦ದು ನನಗೆ ಗೊತ್ತು....
ಅ೦ದು ನನ್ನ ಮೇಲೆ ನೀನು ತೋರದ ಅನುಕ೦ಪಕ್ಕೆ
ಇ೦ದು ನಿನ್ನ ಮೇಲೆ ನಾನು ತೋರಲಾರೆ....
ದಿನದಿ೦ದ ದಿನಕ್ಕೆ ಗಟ್ಟಿಯಾಗುತ್ತಿದ್ದೇನೆ,
ಇನ್ನು ನಿನ್ನ ಆಟ ಲೆಕ್ಕಕ್ಕಿಲ್ಲ!

ನಿನ್ನ ಅಟ್ಟಹಾಸಕ್ಕೆ ನನ್ನ ತಾಳ್ಮೆಯೇ ಉತ್ತರ
ನೀ ಕೊಟ್ಟ ನೋವುಗಳಿಗಿ೦ತ ನನ್ನ ಆತ್ಮವಿಶ್ವಾಸವೇ ಎತ್ತರ!!

4 comments:

  1. ಇದೀಗ ನಿಮಗೆ ಒಳ್ಳೆಯ ಸಮಯ, ನಿಮ್ಮ 'ಆತ್ಮವಿಶ್ವಾಸವೇ ಎತ್ತರ'! ಉತ್ತಮ ಕವನ, ಅಭಿನ೦ದನೆಗಳು .

    ReplyDelete
  2. ನಿನ್ನ ಅಟ್ಟಹಾಸಕ್ಕೆ ನನ್ನ ತಾಳ್ಮೆಯೇ ಉತ್ತರ
    ನೀ ಕೊಟ್ಟ ನೋವುಗಳಿಗಿ೦ತ ನನ್ನ ಆತ್ಮವಿಶ್ವಾಸವೇ ಎತ್ತರ!!


    wah wah :) nang tumbaaaaaaaaaaaaaaaa hidistu ee linu :) "classy"i tel u :)

    ReplyDelete
  3. ಸಮಯದೊಂದಿಗೆ ಪಡೆದ ನೋವು,
    ಸೋತ ಅನುಭವವಷ್ಟೇ..ಸೋಲಲ್ಲ
    ಅದು ಹೋರಾಟ, ಆಟ ಮುಗಿವುದಿಲ್ಲ...
    ದಾಟಿ ಬಂದಾಗ ರೋಮಾಂಚನ
    ಗೆದ್ದ ಅನುಭವ..ಗೆಲುವಲ್ಲ
    ಅದು ಶಕ್ತಿ ಸಂಪಾದನೆಯ ಸಂಭ್ರ‍ಮ

    ಕೈ, ಕಾಲು, ಹೊಟ್ಟೆ ಬೆನ್ನೊಳಗಿಂದ
    ನೋವು ಹೊಕ್ಕಿತ್ತು ದೇಹದೊಳಗೆ ನಿಜ
    ಆದರೆ ನೆಟ್ಟಿದ್ದು, ಉಳಿದದ್ದು ಮಾತ್ರ
    ನನ್ನ ನಿಮ್ಮ ಎದೆಯ ಆಳದೊಳಗೆ
    ಇನ್ನು ನಿಶ್ಚಿಂತೆ- ಆ ನೋವು ಅಲ್ಲೇ ಜಡ
    ಸುಪ್ತ- ಇದ್ದರೂ ಸತ್ತಂತೆ ಕೊನೆಗೆ..

    ತಾಳಲಾರದ ನೋವು, ಉಸಿರುಕಟ್ಟುವ ರೀತಿ
    ಹಾಸಿಗೆ ಬಿಡದ ಬೆನ್ನು,
    ಕ್ರೂರ ಸಮಯದ ನೆನಪು..
    ಇವೆಲ್ಲ ಸಮಯದ ಅಸ್ತ್ರಗಳಂತೆ
    ಪಾಪ ಸಮಯಕೆ ತಿಳಿಯದು ಗೆಳೆಯ
    ಸರಳವಿಲ್ಲ ಈ ಹೋರಾಟ, ಎದುರಿಗಿರುವುದು
    ಈಶ್ವರನಿರುವ ನಿಮ್ಮ ಹೄದಯ..

    ReplyDelete
  4. @ prabhamani nagaraja: ಹೌದಾ...!! ಸ್ಪ೦ದನೆಗೆ ಧನ್ಯವಾದಗಳು..

    @ shri: ಸಾಲುಗಳನ್ನು ಮೆಚ್ಚಿದ್ದಕ್ಕೆ ... ಥ್ಯಾ೦ಕ್ಯು..!!

    @ anupama: ಅನುಪಮಾ (ಜಹಾಪನಾ..!!)
    ತುಸ್ಸಿ ಗ್ರೇಟ್ ಹೋ...!!

    ReplyDelete