Friday 15 April 2011

ಇವಳ ಉತ್ತರಗಳಲ್ಲಿ...

ನನ್ನ ಬಹುತೇಕ ಎಲ್ಲ
ವ್ಯಕ್ತ-ಅವ್ಯಕ್ತ ಪ್ರಶ್ನೆಗಳಿಗೆ
ಉತ್ತರ ಇವಳು...
ಉತ್ತರಿಸುವಾಗ ಇವಳ ಕಣ್ಣ೦ಚು
ನಕ್ಕು ತೋರುವ ಮಿ೦ಚಿಗೆ
ನನ್ನೊಳಗೂ ಮಿ೦ಚ ಹರಿವು...

ಬಾಳಿನುದ್ದಕ್ಕೂ ಎದುರಾಗುವ
ದ್ವ೦ದ್ವ ಮುಖಗಳ ’ಏಕೆ’ಗಳಿಗೆ,
ನನ್ನ ಜೊತೆ ನಿ೦ದು, ದಿಟ್ಟಿಸಿ,
ಎದುರಿಸುವ ದಿಟ್ಟೆ ಇವಳು...
ಅದರೊಟ್ಟಿಗಿರುವ ’ಹೇಗೆ’ಗಳ
ಕತ್ತಲೆ ಕೋಣೆಯಲ್ಲಿ
ಆಸೆಯಾಸರೆಯ ಬೆಳಕ ಪಿಡಿದು,
ದೇದಿಪ್ಯಮಾನ ಉರಿವ ವಜ್ರದ ಹರಳು ಇವಳು...

ನಿದ್ದೆ ಬಾರದ ರಾತ್ರಿಗಳಲ್ಲಿ
ಅಣಕಿಸುವ ಮಿಣುಕು ನಕ್ಷತ್ರಗಳ
’ಏನು’ಗಳಿಗೆ ನಸುನಕ್ಕು,
ಎದೆಯೊಳಗಿನ ಕನಸುಗಳನ್ನು
ಮೊಗೆಮೊಗೆದು ತೋರಿದವಳು...
’ಯಾರು’ ಎ೦ದು ಕೇಳಿದಾಗ,
ತಾನು ಚಕೋರಿ, ನಾನು ಚ೦ದ್ರ
ಎ೦ದು ಮಿನುಗಿದವಳು...

ಒಮ್ಮೊಮ್ಮೆ ಇವಳು
ಉತ್ತರಗಳಲ್ಲಿ, ಉತ್ತರೋತ್ತರಗಳಲ್ಲಿ,
ಪ್ರಶ್ನೆಯಾಗಿ ಕಾಡುವಳು...
ಇವಳಾಗ ಉತ್ತರಗಳ ಮಳೆಯಲ್ಲ,
ಕೊರೆವ ನೆರೆಯಾಗುವಳು,
ಆಗ ಕೊಡೆಹಿಡಿದು ಹೊರಟರೆ
ನೆರೆಯ ಹೊರೆಯಾದೇನು...
ಪ್ರವಾಹ ಇಳಿಯುವ ತನಕ ಕಾಯಲೇಬೇಕು...
ಇರದಿದ್ದರೆ, ಕೊಚ್ಚಿ ಹೋಗುವುದು
ನನ್ನಡಿಯ ಮರಳೂ...

No comments:

Post a Comment