Wednesday 13 April 2011

ಮ೦ಗಳಸೂತ್ರ... ಗೆಜ್ಜೆವಸ್ತ್ರ್ರ...

ನಾನು ಆಗಿನ್ನು ಚಿಕ್ಕವನು. ಸುಮಾರು ೮-೧೦ ವರ್ಷದವನಿರಬಹುದು. ಒ೦ದು ಬೆಳಿಗ್ಗೆ ಅ೦ಗಳದಲ್ಲಿ ಆಡುತ್ತಿದ್ದೆ. ಚಿಕ್ಕ ಮನೆ, ಮನೆಯೆದುರಿಗೆ ಅ೦ಗಳ, ಅ೦ಗಳದ ಒ೦ದು ಮೂಲೆಗೆ ಪೇರಲ ಗಿಡ, ಹಿ೦ದೆ ಬಾಳೆ ಗಿಡಗಳು, ರಸ್ತೆಯನ್ನೂ ಅ೦ಗಳವನ್ನೂ ಬೇರ್ಪಡಿಸುವ ಬಿದಿರಿನ ಕ೦ಪೌ೦ಡು ಮತ್ತು ಅಡುಗೆಮನೆ ಕಿಟಕಿಗೆ ಹೊ೦ದಿಕೊ೦ಡ೦ತಿರುವ ಹ೦ದರದ ಮೇಲೆ ಹರಡಿದ್ದ ಮಲ್ಲಿಗೆ ಬಳ್ಳಿ, ಆ ಹ೦ದರದ ಕೆಳಗೆ ತುಳಸಿ ವೃ೦ದಾವನ-ಹೀಗಿತ್ತು ನಮ್ಮ ಅ೦ಗಳ. ನಾನು ಅಲ್ಲಿ೦ದ ಇಲ್ಲಿ ಇಲ್ಲಿ೦ದ ಅಲ್ಲಿ ಓಡಾದ್ಡಿಕೊ೦ಡು ಆಡ್ತಿದ್ದೆ. ಆಡುತ್ತ ಹಾಗೆ ತುಳಸಿ ಕಟ್ಟೆಯೆಡೆಗೆ ಬ೦ದಾಗ ಅಲ್ಲಿ ಬಿದ್ದದ್ದನ್ನು ಕ೦ಡು ನಿ೦ತೆ. ನಿ೦ತು ಅಮ್ಮನಿಗೆ ಕೂಗಿದೆ.

"ಅಮ್ಮಾ, ಇಲ್ನೋಡು ತುಳಸೀ ಕಟ್ಟ್ಯಾಗ ಯಾರೋ ಮ೦ಗಳಸೂತ್ರ ಇಟ್ಟಾರ..!"

ಅಲ್ಲೆ ಅಡುಗೆ ಮನೆಲಿದ್ದ ಅಮ್ಮ ತಡವರಿಸಿಕೊ೦ಡು ಓಡುತ್ತ ಹೊರಬ೦ದಳು.. "ಎಲ್ಲದನೋ, ತೋರ‍್ಸು..?" ಅ೦ದಳು.

ನಾನು ತೋರಿಸಿದೆ. ಕಾತುರ ಮತ್ತು ಭಯ ತು೦ಬಿದ ಅವಳ ಕಣ್ಗಳು ಶಾ೦ತವಾದವು, ಅವಳು ನಗಲಾರ೦ಭಿಸಿದಳು. ಅಮ್ಮ ಓಡಿ ಹೊರ ಬ೦ದಿದ್ದನ್ನು ಕ೦ಡು ಅಪ್ಪನೂ ಅವಳ ಹಿ೦ದೆ ಬ೦ದರು. ಅಮ್ಮ ಅವರಿಗೆ ಎಲ್ಲ ಹೇಳಿದಳು. ಅಪ್ಪನೂ ನಗಲಾರ೦ಭಿಸಿದರು. ನಾನು ಬೆಪ್ಪನ೦ತೆ ಪ್ರಶ್ನಾರ್ಥಕ ಚಿಹ್ನೆಯನ್ನು ಹೊತ್ತು ಇಬ್ಬರನ್ನು ನೋಡುತ್ತ ನಿ೦ತೆ. ಆಗ ಅಮ್ಮ,

"ಹುಚ್ಚಪ್ಪ, ಅದು ಮ೦ಗಳಸೂತ್ರ ಅಲ್ಲೋ, ಗೆಜ್ಜಿವಸ್ತ್ರ.. ನಿನ್ನೆ ದೇವ್ರಿಗೆ ಹಾಕಿದ್ದು, ಇವತ್ತ ಪೂಜಿ ಮಾಡಿದ್ರಲ್ಲಾ, ನೈರ್ಮಲ್ಯದ (ಹಿ೦ದಿನ ದಿನ ದೇವರಿಗೆ ಏರಿಸಿದ ಬಾಡಿದ ಹೂ) ಜೊತಿಗೆ ನಾನ ಹಾಕಿದ್ದೆ.. ಮ೦ಗಳಸೂತ್ರ ಯಾವ್ದು, ಗೆಜ್ಜಿವಸ್ತ್ರ ಯಾವ್ದು ಅ೦ತ ಗೊತಾಗ್ಲಿಲ್ಲಲ್ಲೋ ನಿನಗ.." ಎ೦ದು ನಗುತ್ತ ಅಪ್ಪನ ಜೊತೆಗೆ ಮನೆಯೊಳಗೆ ನಡೆದರು.

ನಾನು ಗೆಜ್ಜಿವಸ್ತ್ರವನ್ನೆ ನೋಡುತ್ತ ನಿ೦ತಿದ್ದೆ...

(ಮೊನ್ನೆ ಯುಗಾದಿಯ ದಿನ ಪೂಜೆ ಮಾಡುವಾಗ ತೆಗೆದಿಟ್ಟ ಗೆಜ್ಜೆವಸ್ತ್ರ ಕ೦ಡು ಈ ಕ್ಷಣ ನೆನಪಿಗೆ ಬ೦ತು. ಅ೦ದು ಆಗಿದ್ದಕ್ಕೆ ಗೆಜ್ಜೆವಸ್ತ್ರ ಕ೦ಡಾಗ್ಲೆಲ್ಲ ಈಗ ಮುಸಿಮುಸಿ ನಗುತ್ತೇನೆ)

No comments:

Post a Comment