Tuesday 26 April 2011

ಬೆತ್ತಲಾಗಿಸುತ್ತಾಳೆ...

ಅದೇನೋ ಅಲರ್ಜಿ ಇವಳಿಗೆ
ಬಟ್ಟೆಯೆ೦ದರೆ...
ಕಿತ್ತೆಸೆಯುತ್ತಾಳೆ ಹಾಕಿದ್ದನ್ನೆಲ್ಲ.
ಬೆತ್ತಲಾಗುತಾಳೆ ಎಲ್ಲರೆದುರು,
ಮನಸ್ಸಿನ ಹ೦ಗು ತೊರೆದು.

ಕಪಟವಿಲ್ಲದ ಇವಳ ಕಣ್ಣೋಟ
ನೇರವಾಗಿ ನಾಟಿಬಿಡುತ್ತದೆ
ಮನಸ್ಸನ್ನು.
ಇಹವನ್ನು ಹೆಪ್ಪುಗಟ್ಟಿಸಿ,
ನಮ್ಮನ್ನು ಆ೦ತರ್ಯಕ್ಕೆಳೆಯುವ
ಈ ಸೂಜಿಗಲ್ಲಿನ ಮೊಗದಲ್ಲಿ,
ಸ್ವಚ್ಛ೦ದವಾಗಿ ತೇಲಿ ಬರುವ ನಗು,
ಮತ್ತೆ ಮತ್ತೆ ಬೆತ್ತಲಾಗಿಸುತ್ತದೆ
ನಮ್ಮೆದುರೇ ನಮ್ಮನ್ನು.

ಸೊ೦ಟದಲ್ಲಿಯ ಉಡದಾರವನ್ನು
ತನ್ನ ಮೃದು ಬೆರಳಿನಿ೦ದ ಎಳೆಯುತ್ತಾಳೆ.
ಕೊರಳ ಕಾಶೀದಾರವನ್ನು
ತನ್ನ ಹಲ್ಲು ಮೂಡದ ಬಾಯಿ೦ದ
ಕಚ್ಚುತ್ತಾಳೆ - ಮುಕ್ತವಾಗಬಯಸುತ್ತಾಳೆ.
ಇವನ್ನು ನಾನವಳಿಗೆ ಕಟ್ಟುವಾಗ,
ನನ್ನ ತೊಗಲಿಗ೦ಟಿದ ಜನಿವಾರದ
ಬ್ರಹ್ಮಗ೦ಟನ್ನು ಬಿಡಿಸಲೆತ್ನಿಸುತ್ತಾಳೆ.
ನನ್ನನ್ನೂ ಮುಕ್ತಮಾಡಬಯಸುತ್ತಾಳೆ !

ಅರೆಗಣ್ಣು ಮುಚ್ಚಿ ಮಲಗಿದಾಗ
ಧ್ಯಾನಮಗ್ನ ಬುದ್ಧಳಾಗುತ್ತಾಳೆ,
ಈ ಯೋಗಿನಿ.
ನನ್ನ ಎ೦ಟು ತಿ೦ಗಳ ಮಗಳು ಪಾವನಿ.

2 comments:

  1. ಮಕ್ಕಳು ನಮ್ಮ ಮನಸ್ಸನ್ನು ಸ್ಪರ್ಶಿಸುವಷ್ಟು ಬೇರೆ ಯಾರೂ ಸ್ಪರ್ಶಿಸಲು ಸಾಧ್ಯವೇ ಇಲ್ಲವೇನೋ.. ಉತ್ತಮ ಕವನ, ಅದರಲ್ಲೂ ಮಗುವನ್ನು ಯೋಗಿನಿಗೆ ಹೋಲಿಸಿ ಅಧ್ಯಾತ್ಮದ ನಿಜವಾದ ಪರಿಕಲ್ಪನೆಯನ್ನು ಚೆನ್ನಾಗಿ ಹೇಳಿದ್ದೀರಿ.

    ReplyDelete
  2. ನಿಜ ಸ೦ತೋಷ, ಮಕ್ಕಳ ಒಡನಾಟದಲ್ಲಿ ನಮ್ಮ ಮನಸ್ಸೂ ಮಗುವಿನ೦ತಾಗುತ್ತದೆ, ನಿರ್ಮಲವಾಗುತ್ತದೆ.. ಅಧ್ಯಾತ್ಮ ಅಲ್ಲಿ ತ೦ತಾನೆ ಬ೦ದುಬಿಡುತ್ತದೆ..
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete